ಊರ ಕೇರಿಯ ಬಾವಿ ನಾಲ್ಕಾರು ಮನೆ
ದೊಡ್ಡಾಲದ ಮರದ ನೆರಳಲ್ಲಿ ಆಟ ಪಾಠ
ಊಟಕ್ಕೊಂದು ಮನೆ ದೋಸೆಗೆ ಮತ್ತೊಂದು
ಬಜ್ಜಿಗೆ ಮಾವನದೇ ಅಂಗಡಿ
ಚಕ್ಕುಲಿ ಪೆಪ್ಪರಮೆಂಟಿಗೂ
ಮಾವನಿದ್ದಾನಲ್ಲ ಅವನ ಅಂಗಡಿಯುಂಟಲ್ಲ
ಕಾದಿದ್ದಿದೆ, ದಪ್ಪ ಕನ್ನಡಕದೊಳಗಿನ ಕಣ್ಣು ಹೊಳೆವಂತೆ
ರೈಲು ನಿಲ್ದಾಣದ ಮೂರನೆ ಗಂಟೆಗೆ
ಅಮ್ಮಾ ನಾನೂ ಬಂದಿದ್ದಿದೆ
ಅವಳೊಟ್ಟಿಗೆ ಕವಡೆಯಾಡಿದ್ದಿದೆ
ಮೊಸರನ್ನದ ಕೈ ತುತ್ತಿಗೆ
ಒಣ ಮೆಣಸಿನ ಕಾರ ನೆಂಜಿಕೊಂಡಿದ್ದಿದೆ
ಅವಳಲ್ಲಿ ಈಗ ಕೇಳಬೇಕಿತ್ತು
ಅದೇಗೆ ಸಾಕಿದೆ ಈ ಏಳು ಜನರನ್ನ
ಅವರೊಟ್ಟಿಗೆ ಹಲವರನ್ನ
ಅಜ್ಜ ಸತ್ತಾಗ ನಿನ್ನ ವಯಸ್ಸೆಷ್ಟೋ
ಅಜ್ಜನು ಸಂಗೀತ ವಿದ್ವಾಂಸನಂತಲ್ಲ
ಹಾಡಿದ್ದನ ನಿನ್ನೊಟ್ಟಿಗೆ ?
ಕಲಿಸಿದ್ದನ ಹಾಡುವ ಬಗೆಯನ್ನ
ನೀನೇ ನಡೆಸುವ ಈ ಹೋಟೇಲಿನಲ್ಲಿ
ಚಪಾತಿ ತಟ್ಟುವಾಗಲಾದರೂ
ಹಾಡಬೇಕೆಂದೆನಿಸಿತ್ತ?
ಇದದೆಂತಹ ಮನೆ !!!
ದೊಡ್ಡಾಲದ ಮರದ ಬೇರು
ಒಂದೊಂದೇ ಹೊಕ್ಕು
ಕಡೆಯುತ್ತಿತ್ತಲ್ಲ ಒಡೆಯುತ್ತಿತ್ತಲ್ಲ
ಗೋಡೆಗಳೆದ್ದವು ಮನೆಗಳೆದ್ದವು
ರಸ್ತೆ ರಿವಾಜು ಗಾಡಿ ಗಲಾಟೆ
ಈಗ, ಯಾರ ಅಂಗಡಿಯೆಂದೇಳುವುದು
ಅದ್ಯಾರ ಹೋಟೆಲದು
ನೀ ಅನ್ನುತ್ತಿದ್ದೆ
ದೊಡ್ಡಾಲದ ಮರಕ್ಕೆ ಅದರದೇ ಪಾಡು
ಸಾಪಾಟು ಜಾಗ ಈಗದು
ಇಲ್ಲೊಂದಾಲದ ಮರವಿತ್ತಂತೆ
ರೈಲ್ವೆ ಗೇಟನ್ನೇ ಹಾಕುವುದಿಲ್ಲ ಈಗ
ಅಕಸ್ಮಾತ್ ಕಾರು ನಿಂತರೆ
ಅದೋ ಅದು ನನ್ನಜ್ಜಿಯ ಮನೆ
ಅಲ್ಲೇ ನಾನು ಪುಟ್ಟದೊಂದು ಮನೆ ಕಟ್ಟಿದ್ದೆ
ಅಂತ ತೋರಿಸಬಹುದಿತ್ತೋ ಏನೋ
ಮೇಲ್ಸೇತುವೆ ಆಗಿ ಹೈವೇ ಆಗಿದೆ
ನೆನಪಿಸಿಕೊಳ್ಳುವಷ್ಟರಲ್ಲಿ ದಾಟಿ ಬಿಟ್ಟಿರುತ್ತೇವೆ
ದಾರಿಯನ್ನ
ದೊಡ್ಡಾಲದ ಮರದ ಯಾವ ಕುರುಹೂ
ಇಲ್ಲದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ