ನಮ್ಮ ಸವಾರಿ ನಾಟಕಕ್ಕೆ ಹೋದದ್ದು.........


ನಾಟಕ ಎಂಬೋದನ್ನ ಮನುಷ್ಯ ಯಾಕೆ ಮಾಡ್ತಾನೆ? ನಾಟಕ ಯಾಕೆ ಬೇಕು? ತನ್ನದೇ ಪರಿಸರದಿಂದ ಎತ್ತಿಕೊಂಡ ಕೆಲವು ಸನ್ನಿವೇಷಗಳನ್ನ ಆತ ಯಾಕೆ ಮತ್ತೇ ನೋಡಬೇಕು ಅಂತ ಅಂದುಕೊಳ್ಳುತ್ತಾನೆ? ಯಾಕೆ ಪ್ರಾಚೀನ ಕಥಾನಕಗಳನ್ನ ನೊಡಲು ಬಯಸುತ್ತಾನೆ? ಪಾತ್ರಗಳನ್ನ ಎದುರಿಗೆ ರಂಗದಲ್ಲಿ ಕಾಣಲು ಇಚ್ಚಿಸುತ್ತಾನೆ? ಇವೆಲ್ಲವೂ ಪ್ರಶ್ನೆಗಳಾಗಿ ಕೊರೆಯುತ್ತಾ ಇದ್ದ ವೇಳೆಯಲ್ಲಿಯೇ ಶ್ರೀ ಅಶೋಕ ವರ್ಧನರು ಉಡುಪಿಯಲ್ಲಿ ನೀನಾಸಂ ರವರ ನಾಟಕ ಇದೆಯೆಂದು ಹೇಳಿದರು. ಅದಕ್ಕೆ ಸರಿಯಾಗಿ ಸುಂದರ ರಾಯರು ಸೇರಿತ್ತಾರಾದ್ದರಿಂದ ಹೊರಡುವ ಎಂದು ತಯಾರಾದೆ. ಅಶೋಕರು, ಸುಂದರರಾಯರು, ನರೇಂದ್ರ ಪೈಗಳು ಎಲ್ಲಾ ಒಟ್ಟಿಗೆ ಪಯಣ ಶುರುವಾಯಿತು. ಅಶೋಕರ ಸಂಗಡ ಪಯಣ ಅಷ್ಟು ಉಲ್ಲಸಿತವಾಗಿರುತ್ತದೆ ಎಂದು  ಅಂದು ತಿಳಿಯಿತು. ಅವರೂ ಅವರ ಗೆಳಯರೂ ಆದ ಸುಂದರರಾಯರು "ಕಳೆದುಹೋದ" ಚಹರೆಗಳನ್ನ ನೆನೆಯುತ್ತಿರಬೇಕಾದರೆ, ಹೀಗೆ ನೆನೆಯುವುದು ತಪ್ಪ ಇನ್ನೇನು ಮಾಡೀರ ಎಂದು ರೇಗಿಸಿಕೊಳ್ಳುತ್ತಿದ್ದೆ. ದಾರಿಯುದ್ದಕ್ಕೂ ನಮಗೆಲ್ಲಾ ಹನುಮಂತ ಲಂಕೆಗೇಕೆ ಹೋದ, ಅಲ್ಲಿ ಏಕೆ ಆ ರೀತಿ "ಕೋತಿ" ಚೇಷ್ಟೇಗಳನ್ನೆಲ್ಲಾ ಮಾಡಿದ ಅಂತೆಲ್ಲಾ ಬಹಳ ಸುಂದರವಾಗಿ ಹೇಳುತ್ತಾ ಸಾಗಿದರು.  ಒಟ್ಟಿನಲ್ಲಿ ಉಡುಪಿ ಸೇರಿ ಅಲ್ಲಿ ಚಾ ಅನ್ನು ಬೇಗೆ ಕುಡೀಲಿಕ್ಕೆ ಆಗದೆ, ಈ ವಯಸ್ಸಾದವರೆಲ್ಲ ಬೇಗ ಕುಡಿದು ಮುಗಿಸಿಬಿಟ್ಟಾಗ ನಾನೂ ಬೇಗ ಕುಡಿಯಲು ಏನೇನೋ ಸರ್ಕಸ್ ಮಾಡಿ ಸ್ವಲ್ಪ ಚಾ ಅನ್ನು ನೆಲಕ್ಕೆ ಅರ್ಪಿಸಿ ದೈರ್ಯವಾಗಿ ಅಲ್ಲಿಗೆ ತಲುಪಿದೆವು.  ಮೂತ್ರಕ್ಕೆ ಅವಸರವಾಗಿತ್ತು, ಎಲ್ಲಿ ನಾಟಕ ಆರಂಭವಾಗಿಹೋಗುತ್ತೋ ಎಂಬೋ ಅವಸರ, ಜೊತೆಗೆ ಅಲ್ಲೆಲ್ಲೂ ಮೂತ್ರಾಲಯಗಳೇ ಇಲ್ಲ, ದಾರಿಕಾಣದಾಗಿದೆ ಬಗವಂತನೆ ಅನ್ನೋ ವೇಳೆಗೆ ಸರಿಯಾಗಿ ಎಲ್ಲಿಂದಲೊ ಪ್ರತ್ಯಕ್ಷರಾದ ವ್ಯಕ್ತಿಯೊಬ್ಬರು ಮೂತ್ರಾಲಯಕ್ಕೆ ದಾರಿತೋರಿ ದಾರಿಯುದ್ದಕ್ಕು "ಎಂತ ನಾಟಕವೊ ಏನೋ, ಮಾತಿಲ್ಲ ಕತೆಯಿಲ್ಲವಂತೆ" ಎಂದು ದೀರ್ಘವಾಗಿ ಉಸಿರೆಳೆದುಕೊಂಡು ನಮಗೆ ಮೂತ್ರಾಲಯಕ್ಕೆ ದಾರಿ ತೋರಿದರು. ಒಟ್ಟಿನಲ್ಲಿ ಎಲ್ಲಾ ಸುಗಮವಾಗಿ ಬಂದ ನಂತರ ನಾಟಕ ಆರಂಭವಾಗಿ, ಮುಗಿದಾಗಲೆ ನನಗೆ ನಾಟಕ ಮುಗಿದದ್ದು ತಿಳಿದದ್ದು. ಎರಡು ತಾಸು  ನನ್ನನ್ನಂತು ನಾಟಕ ಹಿಡಿದಿಟ್ಟದ್ದು ನಿಜ.

ಇನ್ನು ನಮ್ಮ ಸವಾರಿ ವಾಹನದಲ್ಲಿ ನಾಟಕದ ಬಗ್ಗೆ ವಿಮರ್ಶೆ, ಚರ್ಚೆ ಎಲ್ಲವು ಆರಂಭವಾಯಿತು. ಹೆಚ್ಚು ನಾಟಕಗಳನ್ನು ನೋಡಿಲ್ಲದ ನಾನು, ನಾಟಕದ ಯಾವುದೇ ವಿಭಾಗದಲ್ಲೂ ಕಾರ್ಯ ನಿರ್ವಹಿಸದ ನಾನು, ಈ ಚರ್ಚೆಯಲ್ಲಿ ಎಲ್ಲಿ ಬಾಗವಹಿಸುವುದೋ ತಿಳಿಯದಿದ್ದರೂ "ಹುಡುಗು ಬುದ್ದಿ" ಇಂದ ಆಗಾಗ ಏನೊ ಒಂದು ಚೂರು ಮಾತನ್ನ ಹೇಳುತ್ತಿದ್ದೆ. ನನ್ನ ಜೊತೆಗಿದ್ದ ಅಶೋಕರಿಗೆ, ಸುಂದರ ರಾಯರಿಗೆ ಹಾಗು ನರೇಂದ್ರ ಪೈ ರವರಿಗೆ ಸಾಹಿತ್ಯ, ನಾಟಕ ಹಾಗು ಕಲೆಯಲ್ಲಿ ಆಳವಾದ ಅನುಭವ ಹಾಗು ಗ್ರಹಿಸುವ ಶಕ್ತಿಯಿರುವುದರಿಂದ ಅವರು ಹೇಳಿದ್ದನ್ನೂ ಕೇಳಿ ಟಿಪ್ಪಣಿ ಮಾಡಿಕೊಂಡೆ.
ಅಶೋಕರು----" ಇಲ್ಲಿನ ಪಾತ್ರಗಳೆಲ್ಲಾ ಕಾಲ ಘಟ್ಟಗಳಾಗಿ ಕಾಣುತ್ತವೆ"
ನರೇಂದ್ರ ಪೈಗಳು-----" ಹಲವು ಅರ್ಥಸಾದ್ಯತೆಗಳನ್ನ ತೆರೆಯುತ್ತದೆ"
ಹೀಗೆ ಅಂದಾಗ ಸಾಹಿತ್ಯದ ಹಾಗು ಸೌಂದರ್ಯ ಮಿಮಾಂಸೆಯ ಕೆಲವು ತತ್ವಗಳನ್ನ ಮೆಲುಕು ಹಾಕುತ್ತಿರಬೇಕಾದರೆ,(ನಾನು ಬೌತಶಾಸ್ತ್ರದ ವಿದ್ಯಾರ್ಥಿ ನನಗೆ ಸಾಹಿತ್ಯ ತತ್ವದ ಬಗ್ಗೆ ಹೆಚ್ಚಿಗೆ ತಿಳಿದಿಲ್ಲ) ಇದ್ದಕ್ಕಿದ್ದಂತೆ ಸುಂದರ ರಾಯರೆಂದರು "ಇಡೀ ನಾಟಕ ಒಂದು ಬೌದ್ದಿಕ ವಿಕಾರ" ಎಂದಾಗ ನನ್ನ ಆಲೋಚನ ಕ್ರಮ ಬೇರೆಯೇ ದಿಕ್ಕಿಗೆ ಚಲಿಸಿತು.
ಬೆಳೆಗ್ಗೆ ಎದ್ದಾಗ ಅಶೋಕರದೊಂದು e mail ಬಂದಿತ್ತು. ಅದು ಈ ರೀತಿ ಇದೆ.

"ಪ್ರಿಯರೇ
ಅವಧಿಯಲ್ಲಿ ಪ್ರಕಟವಾದ ಹರೀಶಕೇರರ ಲೇಖನಕ್ಕೆ ಪೂರಕವಾಗಿ ಕಳಿಸಿದ ಟಿಪ್ಪಣಿಯ ಯಥಾ ಪ್ರತಿ:

ನಿನ್ನೆ ಸಂಜೆ ಉಡುಪಿಯಲ್ಲಿ (ಸುಂದರರಾಯರೂ ಸೇರಿದಂತೆ)ಕಣ್ಣೆವೆ ಬಡಿಯದೆ ಎರಡು ಗಂಟೆಯುದ್ದಕ್ಕೆ ನಾಟಕ ನೋಡಿದೆ. ನನ್ನ ಮನೋಭೂಮಿಕೆಯಲ್ಲಿ ಸುಬ್ರಹ್ಮಣ್ಯದ ಅಡ್ಡಹೊಳೆಯ ಚೊಳಚೊಳ ಒಂದೇ ಸದ್ದು. ಬೆತ್ತ ಕೀಸುತ್ತ, ಬೇಟೆಯಾಡಿ ದಣಿದು, ತೀರ್ಥಯಾತ್ರೆಗಿಳಿದು, ದಾರಿಹೋಕರ ಹೊಡೆದು, ಜಾನುವಾರು ನಡೆಸಿ, ಜಲಕ್ರೀಡೆಗಾಗಿ, ವನವಿಹಾರಕ್ಕಾಗಿ, ಅಸ್ಥಿ ಸಂಚಯನಕ್ಕೆ, ಪಿಂಡಪ್ರದಾನಕ್ಕೆ, ಪ್ರಾಣ ನೀಗುವುದಕ್ಕೆ, ಕ್ಷಣಿಕ ರತಿಗೆ, ಮೀನಿಗೆ, ತೇಲು ದಿಮ್ಮಿಗೆ ಹೀಗೇ ಕಾಲದ ಅಖಂಡ ಪ್ರವಾಹದಲ್ಲಿ ಮುಗಿಯದ ಮನುಷ್ಯ ಯಾತ್ರೆ ನಿಧಾಆಆಆಅನಕ್ಕೆ ಸಾಗಿಯೇ ಇತ್ತು. ಮುಗಿಯದ ಮಾತು, ನಿಲ್ಲದ ಅಳು, ಹೊಡೆದ ಬೊಬ್ಬೆ, ಉಕ್ಕಿದ ಕೇಕೆ, ಸ್ಫುರಿಸಿದ ಹಾಡು ಹೀಗೇ ಎಲ್ಲವೂ ಹಿಂಜಿ ಹಿಂಜಿ ಮೌನವಾದವೇ? ಇಲ್ಲ, ಅಡ್ಡಹೊಳೆಯ ಚೊಳಚೊಳ ಒಂದೇ ನಿರಂತರ. ದಾರಿ ಕಡಿಯುವ, ಸೇತುಬಲಿಯುವ, ಅಣೆಕಟ್ಟುವ, ವಿದ್ಯುತ್ ಬಸಿಯುವ, ಬಾಟಲಿ ತುಂಬುವ, ಮೂಲಕ್ಕೇ ಬಾಯಿಯಿಕ್ಕುವ, ಮೇಲಿನಿಂದ ಲೆಕ್ಕಿಸುವವ, ತಳದಲ್ಲಿ ನುಸುಳುವ, ಕಸಕುಪ್ಪೆ ಬೆಳೆಸುವ ಎಲ್ಲವೂ ಪಿಸಿಪಿಸಿದು ಗುಡ್ಡೆಬಿದ್ದರೂ ಅಡ್ಡಹೊಳೆಯ ಚೊಳಚೊಳ ನಿರಂತರ?

ಈ ವಲಯಕ್ಕೆ ನಾಟಕದ ಒಂದೇ ಪ್ರದರ್ಶನ ಲಭ್ಯ ಎನ್ನುವ ಒತ್ತಡದಲ್ಲಿ ನನ್ನ ಸಂಪರ್ಕಕ್ಕೆ ಬಂದವರನ್ನೆಲ್ಲಾ ಒತ್ತಾಯಿಸಿ, ಕಾರು ತುಂಬಿಕೊಂಡು ಧಾವಿಸಿದ್ದೆ. ಕೊನೆಯಲ್ಲಿ ಜೊತೆಗೊಟ್ಟಿದ್ದ, ನೇತ್ರಾವತಿ ತಿರುಗಿಸುವ ಹುನ್ನಾರದವರ ವಿರುದ್ಧ ಮಾಹಿತಿ ಹಕ್ಕಿನ ಬ್ರಹ್ಮಾಸ್ತ್ರ ಹಿಡಿದು ಹೋರುವ, ಸುಂದರರಾಯರಿಗೆ ಇದು ಕೇವಲ ನಿಮ್ಹಾನ್ಸ್ ಗಿರಾಕಿಗಳ ಪ್ರಯೋಗವಾಗಿ ಕಂಡದ್ದು ನನಗೆ ಪರಮಾಶ್ಚರ್ಯ.

ಚಕ್ರದ ಮರುಶೋಧವಾದರೂ ಸರಿ, ವರ್ತಮಾನಕ್ಕಷ್ಟೇ ತೀವ್ರವಾಗಿ ಸ್ಪಂದಿಸುವ, ಕುತೂಹಲದ ಕುದುರೆಯ ನಿರಂತರ ಕಾಸ್ತಾರ/ಸವಾರ ವೆಂಕಟ್ರಮಣ ಉಪಾಧ್ಯ "ಮುಂದೆ ಯಾರು ಒತ್ತಾಯಿಸಿದರೂ ನಾಟಕ ನೋಡಬಾರದು ಎಂದು ನಿರ್ಧರಿಸಿದ್ದೇನೆ" ಎಂದದ್ದು ನನಗೆ ವಿಪರೀತವಾಗಿ ಕಾಣಿಸಲಿಲ್ಲ.

ಅಂತರ್ಜಾಲದ ಸಿಕ್ಕು ಬಿಡಿಸಿ ಜಪಾನೀ ಟಿಪ್ಪಣಿಗಳನ್ನೆಲ್ಲಾ ಸಂಗ್ರಹಿಸಿ ತಂದ ಯುವ ಅಧ್ಯಾಪಕ ಅರವಿಂದ ನಮ್ಮ ಕಾರುಯಾನದ ಉದ್ದಕ್ಕೆ (ಮಂಗಳೂರಿನಿಂದ ಉಡುಪಿಗೆ)ಸರೇಂದ್ರ ಪೈಯವರಿಗೆ ಓದಿಸಿ ಮತ್ತಷ್ಟು ಜಟಿಲ ಬಂಧಕ್ಕೆ ಬಿದ್ದಿರುವುದು ಇನ್ಯಾವ ರೂಪದಲ್ಲಿ ಪ್ರಕಟವಾಗುತ್ತದೋ ಗೊತ್ತಿಲ್ಲ."
ಅಶೋಕವರ್ಧನ

ಹೀಗೆ ಆದಾಗ ಇಡೀ ನಾಟಕ ನನ್ನಲ್ಲಿ ಮತ್ತೇ ರೂಪಗೊಳ್ಳಲು ಆರಂಭವಾಯಿತು. ಪ್ರಕಟಗೊಂಡ ಕೃತಿಯೊಂದು ಮರು ಪ್ರಕಟಗೊಳ್ಳಲು ಆರಂಬಿಸಿ ನನಗೆ ಪ್ರಸವ ವೇದನೆಯನ್ನ ನೀಡಲು ಆರಂಭವಾದಾಗ ನಾನು ಬರೆಯಲೇ ಬೇಕಾಯಿತು.
ಆರಂಭದಲ್ಲಿ ಅಂತ್ಯ ಎಂತಲೋ, ಅಂತ್ಯದಲ್ಲಿ ಆರಂಭ ಎಂತಲೋ ಒಟ್ಟಿನಲ್ಲಿ ಸ್ಥಾವರವಾಗದ, ನಿರಂತರ ಚಲನೆಯಲ್ಲಿ ಮನುಷ್ಯ ಜೀವನ, ನಾಗರೀಕತೆ, ಜಗತ್ತು, ಪ್ರಕೃತಿ ಎಲ್ಲವೂ ಒಳಗೊಡಿದೆ ಎಂಬೋ ಭೂಮಿಕೆಯಲ್ಲಿ ಈ ನಾಟಕ ನನ್ನಲ್ಲಿ ರೂಪ ಪಡೆಯಿತು. ಇಡೀ ನಾಟಕವನ್ನ ತುಂಡರಿಸಿ ಈ ಪಾತ್ರ ಏನನ್ನ ಹೇಳುತ್ತಿದೆ ಎಂತಲೋ, ಇದ್ಯಾಕೆ ಹೀಗೆ ಮಾಡಿದೆ ಎಂತಲೋ ನಾಟಕವನ್ನ "ಕಾಣುವ" ಬಗೆಗಿಂತ ಒಟ್ಟೂ ಕೃತಿ, ನಾಟಕದಿಂದ ಹೊರಬಂದಾಗ ಕಂಡಿದ್ದೇನು ಎಂಬೋದು ನನಗೆ ಮುಖ್ಯವಾಗುತ್ತೆ. ಹರಿವನ್ನ(ನಲ್ಲಿಯಲ್ಲಿನ ನೀರು), ಆ ಜೀವನ ದ್ರವ್ಯವನ್ನ, ನಿರಂತರವೂ ಹರಿಯುವುದನ್ನ, ಮನುಷ್ಯ ಅಥವ ಕಾಲಘಟ್ಟಗಳು ಅವುಗಳದೇ ಪರಿಮಿತಿಯಲ್ಲಿ, ಅವುಗಳದೇ ಆಲೋಚನೆಯಲ್ಲಿ, ಪಡೆದುಕೊಂಡ ಬಗೆಯಲ್ಲಿ ಅದು ಮುಖ್ಯವಾಗುತ್ತ ಸಾಗಿತು. ನಾಟಕ ನೋಡಿ ಹೊರಬಂದಾಗ ಕಾಡಿದ ಭಾವವೇನು ಎಂದರೆ "ಮನುಷ್ಯ , ಆತನ ಅಸ್ಥಿತ್ವ , ಹಾಗು ಸಾವು ಎರಡನ್ನೂ ಒಳಗೊಂಡು, ಅವೆರಡರ ನಡುವಿನ ಜಾಗದಲ್ಲಿ ನಿಂತು ಎರಡನ್ನೂ ಏಕ ಕಾಲಕ್ಕೆ ಅನುಭವಿಸುವ ವಿಕ್ಷಿಪ್ತ ದ್ವಂದ್ವಕ್ಕೆ ಸಿಲುಕಿದ್ದಾನೆ" ಎಂದು. ಅದು ಹೇಗೆ ಹೇಳುತ್ತೀರಿ? ವಿವರಿಸಿ ಎಂದರೆ, ನನ್ನ ಕೈಲಿ ಆಗೋದಿಲ್ಲ. ನಾನು ಈ ಪ್ರದರ್ಶನವನ್ನ ನೋಡಿ ಬಂದಾಗ ನನಗೆ ಅನಿಸಿದ ಭಾವವದು. ಅಷ್ಟೆ. ಹೂವನ್ನ ನೋಡಿದಾಗ ನನಗೆ ಒಂದು ಭಾವ ಮೂಡಿದಾಗ, ಆ ಭಾವ ಹೇಗೆ ಮುಡಿತು ಎಂತಲೋ ಅದೇ ಯಾಕೆ ಮೂಡಿತು ಎಂತಲೋ ಕೇಳುವುದು ಅಷ್ಟೇನೂ ಸರಿಯಲ್ಲದ್ದು. ಇರಲಿ.  

ನಾಟಕದ ಮುಖ್ಯಾಂಶವೆಂದರೆ ಇದು ಜಪಾನಿನ ಓಟೋ ಶೋಗೋ ರವರು ಬರೆದ water station ಎಂಬೋ ನಾಟಕ. ಅಭಿನಯಿಸಿದವರು ನೀನಾಸಂ ತಂಡ. ಇದರ ಪ್ರಾಮುಖ್ಯತೆ ಎಂದರೆ ಇದು, ಮೂಖ ನಾಟಕವಾಗಿದ್ದು, ಕೇವಲ ಸಂಗೀತವಿರುತ್ತದೆ, ಹಾಗು "ಅತಿ ವಿಳಂಬಿತವಾಗಿ" ನಡೆಯುವ ನಾಟಕ. ಇಲ್ಲಿ ನಾಟಕದಲ್ಲಿ, ೧೮ ಮಂದಿ ಭಾರವಾದ ಸರಕುಗಳನ್ನ ಹೊತ್ತು ಅತಿವಿಳಂಬಿತ ನಡಿಗೆಯಲ್ಲಿ ನಡೆದು ಹೊರ ಹೋಗುತ್ತಾರೆ. 

ಪ್ರತೀ ಕಲಾಕೃತಿಯನ್ನು ನೋಡುವಾಗ ಆ ಕಲಾಕೃತಿಯ ಕತೃವಿನ ಹಿನ್ನಲೆ, ಕಾಲಘಟ್ಟ ಎಲ್ಲವೂ ಸ್ವಲ್ಪ ಮಟ್ಟಿಗಾದರು ಅವಷ್ಯಕ. ಅದೂ ಮುಖ್ಯವಾಗಿ ಭಾರತದಿಂದ ಹೊರಗಿನವರನ್ನ ಕಾಣುವಾಗ ಅವರ ಬಗ್ಗೆ, ಅವರ ತಾತ್ವೀಕತೆಯ ಬಗ್ಗೆ ಸ್ವಲ್ಪ ಮಟ್ಟಿಗಿನ ನೋಟ ಒಳ್ಳೆಯದೋ ಏನೊ.  ಓಟೋವಿನ ನಾಟಕಗಳನ್ನ ನೊಡುವಾಗ, ಮುಖ್ಯವಾಗಿ ನೀರಿನ ನಿಲುತಾಣವನ್ನ ವೀಕ್ಷಿಸುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಜನಗಳು ಹೊತ್ತು ತರುತ್ತಿರುವ ಬೃಹತ್ ಸಾಮಾನುಗಳು. ಹಾಗೂ ಪಕ್ಕದಲ್ಲೇ ಇರುವ ಸಾಮಾನುಗಳ ದೊಡ್ಡ ಗುಡ್ಡ. ಓಟೋ ಆರು ವರ್ಷದವನಿದ್ದಾಗ ಚೈನಾದಿಂದ ಜಪಾನಿಗೆ ಒಲಸೆ ಕೈಗೊಳ್ಳುತ್ತಾನೆ. ಆ ಎರಡು ತಿಂಗಳುಗಳ ಆ ಯಾನದಲ್ಲಿ ಟೆಂಟುಗಳಲ್ಲಿ ತಂಗುವುದು, ರೈಲು, ಹಡಗು ಪ್ರಯಾಣ ಸಾಗಿರುತ್ತದೆ. ಆ ಸಾಗಾಟದಲ್ಲಿ ಅನವಶ್ಯಕವಾದದ್ದನ್ನ ಬಿಸಾಕುವುದು, ಅವಶ್ಯವಾದದ್ದನ್ನ ಮಾತ್ರಾ ಕೊಂಡೆಯ್ಯುವುದೂ ಸಾಗಿರುತ್ತದೆ. ಅದನ್ನೇ ಈತ ಈ ನಾಟಕದಲ್ಲಿ ಬಳಸಿಕೊಂಡನ ಅಂತನಿಸುತ್ತೆ. ನಮ್ಮ ಅಶೋಕರಿಗೆ ಈ ಬೃಹತ್ ಮುಟೆಗಳು ನಮ್ಮ ನೆನಪುಗಳಾಗಿಯೋ, ಜವಾಬ್ದಾರಿಗಳಾಗಿಯೋ ಕಂಡಿತು. ನನಗೆ ಆ ಬೃಹತ್ ಮೂಟೆಗಳು, ಆ ಹೊತ್ತು ಹೋಗಬೇಕಾದ ನಮ್ಮ ಸ್ಥಿತಿಗಳು, ಪ್ರಯಾಣ ಮಾಡ ಬಯಸುವವನಿಗೆ ಅನಿವಾರ್ಯವಾಗಿ ಹೋದಂತೆ ಕಂಡಿತು. ಆ ಒಂದು ಕಡೆಯಿಂದ ಮತ್ತೊಂದು ಕಡೆಗೆ, ತನ್ನದಲ್ಲದ್ದಕ್ಕೆ ಪಯಣ ಬೆಳೆಸಿರುವುದು, ಅದು ಅವಶ್ಯಕತೆಯೋ, ಸಂದರ್ಭ ಎಂತಹುದೋ ಒಟ್ಟಿನಲ್ಲಿ ಎಲ್ಲೋ ಒತ್ತಡದ ಪಯಣದಂತೆ ಕಂಡದ್ದು ಮಾತ್ರ ಸತ್ಯ. ಮನುಷ್ಯ ಚಲನೆಗೆ ತೆರೆದುಕೊಂಡಾಗ ಹೊರೆ ಅನಿವಾರ್ಯವಾಗಿರುತ್ತದೆ. ಅದೇ ರೀತಿ ಆ ಹೊರೆಗಳ "ಅನಾವಶ್ಯಕ" ರಾಶಿಯೂ ಅನಿವಾರ್ಯ.  ಇಲ್ಲಿ ಎರಡನ್ನೂ ನೋಡಬೇಕಾದ ದ್ವಂದ್ವದ ಸ್ಥಿತಿ. "ಅನಾವಶ್ಯಕವಾದದ್ದನ್ನ" ಎಸೆಯದೆ "ಅವಶ್ಯಕವಾದದ್ದನ್ನ" ಮಾತ್ರ ಹೊತ್ತು ನಡೆಯಲಿಕ್ಕೆ ಆಗದು. ಹೀಗೆ ನಮ್ಮ ಚಲನೆ "ಅವಶ್ಯಕ" ಹಾಗು "ಅನಾವಶ್ಯಕ" ಎಂಬೋ ಎರಡು ವಿಬಾಗಗಳನ್ನ ಮಾಡಿ ಬಿಡುತ್ತದೆ. ಈ ವಿಭಾಗಗಳ ಒಳ ನೋಟ ಕೇವಲ ವ್ಯಕ್ತಿಕೇಂದ್ರಿತವಾಗಿ ಮಾತ್ರ ಇರದೆ, ಸುತ್ತಲಿನ ಸಮಾಜಕ್ಕೂ ಸಂಭಂದಿಸಿ ಬಿಟ್ಟಿರುತ್ತದೆ. ಹಾಗಾಗಿಯೆ ಇಲ್ಲಿ "ವರ್ಗ"ಗಳು ಸೃಷ್ಠಿಯಾಗುತ್ತೆ. ಹೀಗೆ ಚಲನೆ ಸ್ವಂಪೂರ್ಣವಾಗಿ "ವರ್ಗ"ಗಳನ್ನ, ವಿಭಾಗಗಳನ್ನ ಹುಟ್ಟುಹಾಕಿ ಬಿಡುತ್ತದೆ. ಒಂದನ್ನ ಎಚ್ಚರಿಕೆಯಿಂದ ಗಮನಿಸಬೇಕು, ಅಲ್ಲಿ ಒಂದು ಪಾತ್ರ ಎಚ್ಚರಿಕೆಯಿಂದಲೋ, ಕುತೂಹಲಕ್ಕಾಗಿಯೋ ಎಲ್ಲವನ್ನಾ ನೋಡುತ್ತಾ ಕೂತಿದೆ. ಆ ಕೂತಿರುವ ಪಾತ್ರ ಮಾತ್ರ ನಲ್ಲಿಯ ಬಳಿಗೆ ಬರುವುದಿಲ್ಲ. ಮತ್ತೊಂದು ಪಾತ್ರ ಮುದುಕಿಯದು, ಅವಳನ್ನ ಆ ಬುಟ್ಟಿಯ ಸಮೇತ ತೆಗೆದುಕೊಂಡು ಹೋಗಿ ಆ ರಾಶಿಗೆ ಹಾಕುತ್ತಾರೆ. ಗಮನಿಸಿ, ಆ ಮುದುಕಿಗೆ ಸಾವಿನ ನಂತರ ಆ "ಅನವಶ್ಯ" ವಸ್ತುಗಳ ರಾಶಿಯಲ್ಲಿ ತೆಗೆದು ಹಾಕಿ ಬಿಡುತ್ತಾರೆ. ಯಾವ ರೀತಿ ಆ ಸತ್ತುಹೋದ ಮುದುಕಿಯನ್ನ ರಾಶಿಗೆ ಹಾಕಿ ಹೊರಟು ಹೋಗುತ್ತಾರೋ ಅದೇ ರೀತಿ ಈ ಚಲನೆಯಲ್ಲಿ ಮನುಷ್ಯ ಕೂಡ ಆ ರಾಶಿಗೆ ಸೇರಿಹೋಗುತ್ತಾನೆ ಎಂಬೋ ಭೀಕರತೆಯನ್ನ ಸೂಚಿಸುತ್ತೆ. ಹೀಗೆ ನಮ್ಮ ಚಲನೆ ಎರಡು ವರ್ಗಗಳನ್ನ ಸೃಷ್ಠಿಸಿಯೇ ಸಾಗುತ್ತದೆ. ಅದು ಕಟುವಾಸ್ಥವ. ಆದ್ದರಿಂದ ಇಡೀ ನಾಟಕದ ಚಲನೆಯನ್ನ ಕಾಲದ ಚಲನೆಯಾಗಿ ವೀಕ್ಷಿಸಿದಾಗ ಕಾಲ ಮನುಷ್ಯನನ್ನ ಈ ವಿಭಾಗೀಕರಣಕ್ಕೆ ನುಕಿಯೇ ಮುಂದೇ ಸಾಗುತ್ತಾನೆಂದೆನಿಸುತ್ತಿದೆ. ಹೀಗೆ ಮನುಷ್ಯನ ಚಲನೆ ಅನಿವಾರ್ಯವಾಗಿ ಅಸ್ಥಿತ್ವದ ಪ್ರಶ್ನೆಯನ್ನ ಹೊತ್ತುಬಿಡುತ್ತದೆ.

ಮನುಷ್ಯ ಅಸ್ಥಿತ್ವವನ್ನ ಚಲನೆಯಲ್ಲಿ ಕಾಣಾಬೊಹುದ? ಇಡೀ ನಾಟಕ ಕಂಡಾಗ ಈ ಪ್ರಶ್ನೆ ಕಾಡಿದರೂ, ವಿರುದ್ದ ಪದ್ದತಿಯ ಮುಖಾಂತರ ಎರಡನ್ನೂ ತೋರಲು ಪ್ರಯತ್ನಿಸಿತ ಅಂತ ಅನ್ನಿಸುತ್ತೆ. ಏನದು ವಿರುದ್ದ ಪದ್ದತಿ ಎಂದರೆ ಕತ್ತಲ್ಲನ್ನ ತೋರಿಸಿ ಬೆಳಕನ್ನ ಅರಿಯೋದು ಎಂಬೋರೀತಿ. ಅಸ್ಥಿತ್ವ ಹಾಗು ಚಲನೆ ಎರಡು ವಿರುದ್ದ ಪದಗಳ ರೀತಿ ಕಾಣುತ್ತೆ. ಅದು ಎಷ್ಟು ಸರಿಯೋ ತಿಳ್ದಿಲ್ಲ. ಚಲಿಸುವವನು ಅಸ್ಥಿತ್ವವನ್ನ ಸ್ಥಾಪಿಸಲು ಸಾದ್ಯಾನ...? ಚಲನೇನೇ ಅಸ್ಥಿತ್ವವಾದಾಗ ಬೇರೆಯದೇ ಆದ ಅರ್ಥ ಸಾದ್ಯತೆಗಳು ತೆರೆದುಕೊಳ್ಳುತ್ತೆ. ಜಂಗಮ ಎಂಬೋದು ಒಂದು, ಸ್ಥಾವರ ಎಂಬೋದು ಮತ್ತೊಂದು, ಎರೆಡೂ ಒಂದೇ ಆಗುವುದಕ್ಕೆ ಸಾದ್ಯವಿಲ್ಲ. ಹೀಗೆ ಇಡೀ ನಾಟಕ ಎರೆಡು ವಿರುದ್ದ ದೃವಗಳನ್ನ ಸಂದಿಸುವಂತೆ ನಮ್ಮನ್ನ ಮಾಡುತ್ತಾ ಎಂಬೋ ಗುಮಾನಿ ಹುಟ್ಟುತ್ತೆ. ಹಾಗಾದಾಗ ನಾವು ಸ್ವಲ್ಪ ಬುದ್ದಿ ಖರ್ಚು ಮಾಡಬೇಕಾದದ್ದು ಅವಶ್ಯಕವೇ ಸರಿ. 

ಈ ನಾಟಕವನ್ನ ವಿಶ್ಲೇಷಿಸುವುದಕ್ಕಾಗಿ "Mari Boyd" ಎಂಬುವವರ "Aesthetics of Quietude" ಎಂಬ ಪುಸ್ತಕದಿಂದ ಕೆಲವು ಲೇಖನಗಳನ್ನ ನೋಡಬೇಕಾಗಿ ಬಂತು. ಅದರಲ್ಲಿ ಕೆಲವು ಸಾಲುಗಳನ್ನ ನೀಡಿ ಅದರಿಂದ ಏನಾದರೂ ಪಡೆಯಬಹುದ ಎಂತಲೂ ಪರಿಶೀಲಿಸಿದ್ದೀನಿ.

"...........found the power of passivity in the ensuing silence. When passivity is operative, the audience is able to experience the perspective of death, a hypothetical viewpoint outside human life..........."
".......Ōta notes that metaphoric death experiences such as illness, anaesthesia, or space travel can often elicit an overwhelming affirmation of life. In his theatre he wants his audience to have such near-death experiences so that they are assailed by feelings of strangeness and dislocation when stepping out of the theatre building and back into the ordinary world. Then they will be able to see their man-made environment with new eyes, with sadness and hope.
The three components of Ōta's code of divestiture-silence, stillness, and empty space-work together to create the metaphoric distance necessary for the defamiliarizing effect of the perspective of death........"
 ಸಾವನ್ನ  ನಾವು ಹೀಗೆ ಜಡವಾಗಿ ಕಾಣುವುದು ಹೇಗೆ ಎಂಬೋದು ನನಗೆ ಈ ನಾಟಕದಲ್ಲಿ ದಕ್ಕಲಿಲ್ಲ. ಸಾವು ಎಂಬೋ ವಸ್ತು ನನಗೆ ಈ ನಾಟಕದಲ್ಲಿ ಹೆಚ್ಚಿಗೆ ದಕ್ಕಲಿಲ್ಲ. ಬಹುಶಃ ಅದು ನನ್ನ ಮಿತಿಯೇ ಇರಬೇಕು. ಸಾವು ಎಂಬೋದು Hypothetcal ದೃಷ್ಟಿಕೋನವಾಗಿ ಉಳಿಯುತ್ತದ? ಸಾವಿನ ಬಗ್ಗೆ ಯಾವುದೇ ರೀತಿಯ ಅನುಭವ ನನಗೆ ಆಗದ್ದರಿಂದ ಅಥವ ಅದು ನನಗೆ ಹೆಚ್ಚು ಪ್ರಶ್ನೆಯೂ ಆಗದ್ದರಿಂದ, ಸಾವು ಕೂಡ ಅಲ್ಲಿ ಕೇವಲ ಒಂದು ಸನ್ನಿವೇಷ ಅಥವ ಬಂದವಾಗಿ ಮಾತ್ರ ಕಂಡಿತು. ಅದಕ್ಕಿಂತ ಹೆಚ್ಚಿನದಾಗಿ ಏನೂ ಕಾಣಲಿಲ್ಲ. ಇಡೀ ನಾಟಕದಲ್ಲಿ, ಅಲ್ಲಿನ ಪಾತ್ರಗಳ ಮುಖಗಳಲ್ಲಿ ಏನೋ ಒಂದು ರೀತಿಯ ಭಾವ(ನಿರ್ಭಾವ) ಇದ್ದದ್ದಂತೂ ನಿಜ. ಆದರೂ ಆ ನಾಟಕದಲ್ಲಿ ಪ್ರೀತಿಯಿತ್ತು, ಕಾಮವಿತ್ತು, ಹರೆಯ ಇತ್ತು, ದಾಂಪತ್ಯ ಇತ್ತು, ಜಗಳವಿತ್ತು, ದುಃಖವಿತ್ತು, ಹಾಗು ಅಲ್ಲೊಂದು ಸಾವೂ ಇತ್ತು. ಇವುಗಳನ್ನ ಹೇಳಲಿಕ್ಕೇಕೆ ಅತಿವಿಲಂಬಿತ, ಮೌನದ ಬಗೆಯನ್ನ ಸ್ವೀಕರಿಸಿದ ಎಂಬೋದು ಪ್ರಶ್ನೆ. ಕೇವಲ ಬೌದ್ದಿಕ ಕಸರತ್ತಿಗಾಗಿ ಆದದ್ದಿದು ಅಂತ ನನಗನ್ನಿಸ್ಸೋಲ್ಲ. ಭಾಷೆಯ ಅವಶ್ಯಕತೆ ಯಾಕೆ? ಎಂಬೋ ಪ್ರಶ್ನೆಯೊಂದಿಗೇನೆ, ಭಾಷೆಯನ್ನ ತೊರೆದು ನಿರೂಪಿಸಿದ್ದಾನೆ. ಅಮೂರ್ಥವಾದದ್ದನ್ನ ನಿರೂಪಿಸುವಾಗ ಭಾಷೇ ಕೂಡ ತೊಡಕಾಗಿ ಕಂಡರೆ ತಪ್ಪಿಲ್ಲ. ಆ ಭಾಷೆಯನ್ನೇ ಬಿಟ್ಟು ಅದನ್ನ ತಲುಪಿಸಬೊಹುದಾದ ಅನುಕೂಲತೆ ನಮಗೆ ರಂಗದಲ್ಲಿ ಇದೆ ಎಂಬೋದೇ ಮುಖ್ಯವಾಗುತ್ತೆ.   ಹಾಗಾದರೆ ಮಾಮೂಲಿ ಚಲನೆಯಿಂದ ನಾವು ಅದನ್ನ ಪಡೆಯಬೊಹುದಲ್ಲವ, ಆ ಪ್ರಶ್ನೆಯೇ ಅಪ್ರಸ್ಥುತವಾಗುತ್ತೆ. ಇಲ್ಲಿ ಒಟ್ಟೂ ಅಮೂರ್ಥ ಚಿಂತನೆಯನ್ನ ತಲುಪಿಸಿದ್ದೇ ಈ ಅತಿವಿಲಂಬಿತ, ಮೌನ ನಾಟಕ. ಅದ್ಯಾಕೆ ಅನ್ನೋದೇ ಸರಿಯಾದ ಪ್ರಶ್ನೆಯಲ್ಲ.
ಇನ್ನು ಈ ನಾಟಕದ ಮಟ್ಟಿಗೆ ನಾವು ಅರ್ಥ ಹುಡುಕುವ ಪರಿ, ಇದರ ಅರ್ಥ ಏನು ಎಂಬೋ ರೀತಿಯಿಂದಾನೆ ನಾವು ಶೋದಿಸ ಹೊರಡುತ್ತೇವೆ. ಇಲ್ಲಿ ಕಥೆಯೇ ಇಲ್ಲವಲ್ಲ, ಒಂದು ಸ್ಪಷ್ಟ ಬಂದವೂ ಇಲ್ಲವಲ್ಲ, ಎಂತಲ್ಲ ಹುಡುಕಲಿಕ್ಕೆ ಆರಂಬಿಸುತ್ತೇವೆ. ನಮ್ಮ "ಭಾರತೀಯ" ಎಂಬೋ ಮನಸ್ಸೊಂದಿದೆ ಹಾಗು ಅದು ಕಥಾನಕಗಳಿಗೆ ಒಗ್ಗಿ ಹೋಗಿದೆ. ಅಂದರೆ ಭಾರತೀಯ ತತ್ವಶಾಸ್ತ್ರವಿರಲಿ, ಸೌಂದರ್ಯ ಮೀಮಾಂಸೆಯಿರಲಿ, ಸಾಹಿತ್ಯ ಮೀಮಾಂಸೆಯಿರಲಿ, ಎಲ್ಲವೂ ಮೂಲ ತತ್ವವಾದ ಸೃಷ್ಠಿ, ಸ್ಥಿತಿ, ಲಯ ಎಂಬುವುದನ್ನ ಬಿಟ್ಟು ಬರಲಾರದು. ಇದು ತಪ್ಪು ಎಂತಲೋ, ಸರಿ ಎಂತಲೋ, ಅದನ್ನ ನಾನು ಪ್ರಶ್ನಿಸುತ್ತಿಲ್ಲ. ಆದರೆ ಭಾರತೀಯ ಮನಸ್ಸು ಶತಮಾನಗಳಿಂದ ಈ ತತ್ವಕ್ಕೆ ಒಗ್ಗಿ ಹೋದದ್ದು, ತಕ್ಷಣಕ್ಕೆ ಅರ್ಥ ಹಾಗು ಕಥೆ ಹುಡುಕುವುದಕ್ಕೆ ತೊಡಗುತ್ತದೆ. ಅದು ನಮ್ಮ ಬಾರತೀಯತೆ. ಅದು ನಮ್ಮ ಮೂಲ ಧರ್ಮ. ಆದರೆ ಅದರ ಮುಖಾಂತರವಾಗಿಯೇ ಎಲ್ಲವನ್ನಾ ನೋಡುವ ಕ್ರಮವಾಗಲೀ, ಆ ಮಾರ್ಗವನ್ನ ತೊರೆದದ್ದು ಸರಿಯಲ್ಲ ಎಂಬೋದಾಗಲಿ ಸರಿಯಲ್ಲ. ಬದುಕನ್ನ ಒಂದೇ ದೃಷ್ಟಿಯಲ್ಲಿ ಕಾಣುತ್ತೇನೆ ಎಂಬೋದು ಮೂಲಭೂತವಾದಿಯ ನಿಲುವಾಗುತ್ತೆ. ಎಲ್ಲದ್ದರಿಂದಲೂ ಸ್ವೀಕರಿಸೋ ಗುಣ ನಮಗೆ ಬೇಕಾಗುತ್ತೆ. ಭಾರತೀಯ ಸಾಹಿತ್ಯ ಮೀಮಾಂಸೆ ಸಾಹಿತ್ಯವನ್ನ "ರಸ" , ರಸದ ನಂತರ "ಆನಂದ", ಆನಂದದ ನಂತರ "ಬ್ರಹ್ಮ". ಇದು ನಮ್ಮ ಮೀಮಾಂಸೆ, ಹೀಗಾದಾಗ ಆತ್ಮ ಕೇಂದ್ರಿತವಾದ, ಅಂದರೆ ಸ್ಥಿರವಾದ ಆತ್ಮ ಎಂಬೋದೊಂದಿದೆ ಎಂತಲೂ, ಬ್ರಹ್ಮ ಎಂಬೋದೂ ಒಂದಿದೇ ಎಂತಲೂ ಪರಿಗಣಿಸಿಯೇ ಕಾಣುವುದು. "Rasa, which is universal bliss of self or atman coloured by the emotional tone of Drama". ಈಗ ಈ ನಮ್ಮ water Station ನಾಟಕ ಜಪಾನಿನ ನಾಟಕ. ಜಪಾನೀಯರ ನಂಬಿಕೆಗಳೇನೂ, ಅವರ ತತ್ವಗಳೇನೂ ಎಂಬೋದು ತಿಳಿಯುವ ಅವಶ್ಯಕತೆ ಇದೆ. ಒಂದು ಕಲಾಕೃತಿಯನ್ನ, ಒಂದು ನಾಟಕವನ್ನ ದಕ್ಕಿಸಿಕೊಳ್ಳಲಿಕ್ಕೆ ಇಷ್ಟೆಲ್ಲ ಕಸರತ್ತುಗಳು ಬೇಕ ಎಂದರೆ, ಹೌದು ಬೇಕು. ಎಲ್ಲಿಯದೋ ಜಪಾನಿನ ನಾಟಕವನ್ನ ನಮ್ಮ ನಾಟಕದಂತೆ ನಾವು ಕಾಣಬಾರದು. ಹಾಗು ಅದು ಹಾಗೆ ಇರಬೇಕು ಎಂತಲೂ ಬೇಕಿಲ್ಲ, ಆ ಮುಖಾಂತರ ನಾವು ಬಿನ್ನವಾದ ಮತ್ತೊಂದು ಸಂಸ್ಕೃತಿಗೆ, ಜೀವನ ವಿದಾನಕ್ಕೆ ಮುಖಾಮುಖಿಯಾಗಿ ಅವರಿಂದ ಬದುಕನ್ನ ಕಾಣುವ ಬಗೆಯಾಗಿದೆ. ಜಪಾನೀಯರ ಮೇಲೆ ಬೌದ್ದ ದರ್ಮ ಪ್ರಭಾವಿಸಿದೆ. ಹಾಗಾದರೆ ಅವರ ಮೀಮಾಂಸೆ ಎಂತಹದಿರಬೊಹುದು? ಬುದ್ದ ದರ್ಮ ಆತ್ಮವನ್ನ ನಿರಾಕರಿಸುತ್ತೆ, ಆದಿ ಅಂತ್ಯ ಎಂಬೋ ಕಾರಣ ಮೀಮಾಂಸೆಯನ್ನ ತೊರೆದು ಸದಾ ಚಲನೆಯಲ್ಲಿ ಇರುವ ಮದ್ಯಮ ಮೀಮಾಂಸೆಯನ್ನ ಸ್ವೀಕರಿಸುತ್ತೆ. ಹೀಗೆ ಮದ್ಯಮ ಮಾರ್ಗದಲ್ಲಿ ಸದಾ ಚಲನೆಯಲ್ಲಿ ಇರುತ್ತದೆ ಹಾಗು ಯಾವುದಕ್ಕೂ ಸ್ವಾತಂತ್ರ್ಯ ಅಸ್ಥಿತ್ವವಿರುವುದಿಲ್ಲ. ಆದ್ದರಿಂದ ಅರ್ಥ ಎಂಬೋದನ್ನ ಒಟ್ಟೂ ಬಂದದಲ್ಲಿ ಪರಿಶೀಲಿಸಬೇಕಾಗಬೊಹುದು. ಬೌದ್ದ ಮೀಮಾಂಸೆಯನ್ನ ಪ್ರಚುರಪಡಿಸಿದ ನಾಗಾರ್ಜುನನಬಗ್ಗೆ ಬರೆಯುತ್ತ DouglasBerger (Email: dberger@siu.edu  Southern Illinois University) ಎಂಬೋ ವಿದ್ವಾಂಸರು ಈ ರೀತಿ ಹೇಳುತ್ತಾರೆ.  ಈ ಸಾಲುಗಳಿಂದ ಬೌದ್ದ ಮೀಮಾಂಸೆಯನ್ನ ಸ್ವಲ್ಪ ಮಟ್ಟಿಗಾದರೂ ಗುರುತಿಸಬೊಹುದೆಂದು ಭಾವಿಸಿದ್ದೇನೆ. Nagarjuna’s central concept of the “emptiness (sunyata) of all things (dharmas),” which pointed to the incessantly changing and so never fixed nature of all phenomena, served as much as the terminological prop of subsequent Buddhist philosophical thinking as the vexation of opposed Vedic systems. The concept had fundamental implications for Indian philosophical models of causation, substance ontology, epistemology, conceptualizations of language, ethics and theories of world-liberating salvation, and proved seminal even for Buddhist philosophies in India, Tibet, China and Japan very different from Nagarjuna’s own. Indeed it would not be an overstatement to say that Nagarjuna’s innovative concept of emptiness, though it was hermeneutically appropriated in many different ways by subsequent philosophers in both South and East Asia, was to profoundly influence the character of Buddhist thought.
ಇದು ನನಗೆ ನಾಟಕ ತೆರೆದುಕೊಡ ಬಗೆ. ನಾಟಕದ ಬಗೆಗೆ ಹೆಚ್ಚು ತಿಳುವಳಿಕೆ ನನಗೆ ಇಲ್ಲ. ಆದ್ದರಿಂದ ತಪ್ಪುಗಳಾಗಿದ್ದಲ್ಲಿ ತಿಳಿಸಿ. ಒಟ್ಟಿನಲ್ಲಿ ನಾಟಕದ ಮೊದಲು ನಂಗೆ "ನಾಟಕ ಯಾಕೆ" ಎಂಬೋ ಪ್ರಶ್ನೆ ಕಾಡಿತು. ನಾಟಕ ನೋಡಿದ ನಂತರವೂ ಆ ಪ್ರಶ್ನೆ ಹಾಗೆ ಉಳಿಯಿತು ಕೂಡ. ನಾಟಕ ನೋಡಿ ಕೂಡ ನನಗೆ ನಾಟಕ ಯಾಕೆ ಎಂಬೋದು ತಿಳೀಲಿಲ್ಲ. ಕವನ ಬರೆದ ನಂತರವೂ ಕವನ ಯಾಕೆ ಬರೆದೆ ಎಂಬೋದು ಹಾಗೆ ಉಳಿದಿದೆ. ಇದೂ ಕೂಡ ಅಷ್ಟೆ ಅನ್ನಿಸುತ್ತೆ. "ದೇವರು ಹುಟ್ಟಿದ್ದೂ ಹಾಗು ನಾಟಕ ಹುಟ್ಟಿದ್ದು ಎರಡೂ ಕೂಡ ಆದಿಮನ ಸತ್ಯ ಶೊದನೆಯ ಅಗತ್ಯದಿಂದಾಗಿಯೆ" ಎಂದು ಪ್ರಸನ್ನರು ತಮ್ಮ ನಟನೆಯ ಪಾಟಗಳಲ್ಲಿ ತಿಳಿಸಿದ್ದಾರೆ. ನಂಗೆ ದೇವರೂ ಎಂಬೋದೂ ಗೊತ್ತಿಲ್ಲ, ಹುಟ್ಟು ಎಂಬೋದೂ ಗೊತ್ತಿಲ್ಲ, ಸತ್ಯ ಎಂಬೋದೂ ಗೊತ್ತಿಲ್ಲ. ಆದ್ದರಿಂದ ನಾಟಕ ಯಾಕೆ ಎಂಬೋದೂ.........
(ತಮ್ಮ ಜೊತೆಯಲ್ಲಿ ನನ್ನನ್ನು ಕರೆದುಕೊಂಡು ಹೋದ ಆಶೋಕರಿಗೆ, ಸುಂದರ ರಾಯರಿಗೆ, ಅತ್ಯುತ್ತಮ ಗ್ರಹಿಕೆಯನ್ನ ನೀಡಿದ ಶ್ರೀ ನರೇಂದ್ರ ಪೈ ಗಳಿಗೆ ವಂದನೆಗಳನ್ನ ತಿಳಿಸುತ್ತೇನೆ. ಹಾಗು ನಾಟಕವನ್ನ ಆಯೋಜಿಸಿದ ಉಡುಪಿಯ ರಥಬೀದಿಗೆಳೆಯರಿಗೆ, ಉತ್ತಮವಾಗಿ ಪ್ರದರ್ಶಿಸಿದ ನೀನಾಸಂ ತಂಡಕ್ಕೆ ವಂದನೆಗಳು)




2 ಕಾಮೆಂಟ್‌ಗಳು:

  1. ಕ್ಷಮಿಸಿ ಎರಡು ದಿನಗಳಿಂದ ಬ್ಲಾಗ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ...... ಕಾರಣ ತಿಳಿದು ಬಂದಿಲ್ಲ......
    ಅರವಿಂದ

    ಪ್ರತ್ಯುತ್ತರಅಳಿಸಿ
  2. ಕ್ಷಮಿಸಿ..... ಎರಡು ದಿನಗಳಿಂದ ಬ್ಲಾಗರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ..... ಆದ್ದರಿಂದ ಶ್ರೀ ಅಶೋಕ ವರ್ಧನರು ನನ್ನ ವೈಯುಕ್ತಿಕ mail ಗೆ ತಮ್ಮ ಅಭಿಪ್ರಾಯವನ್ನ ಕಳುಹಿಸಿರುತ್ತಾರೆ. ಅದನ್ನ ಇಲ್ಲಿ ಪ್ರಕಟಿಸಿದ್ದೇನೆ.................

    ವ್ಯಕ್ತಿಯೊಬ್ಬನ ಜೀವನದರ್ಶನದ ಸಂಗ್ರಹ ಮತ್ತು ಪ್ರದರ್ಶನ ರೂಪ ನಾಟಕ. ಅದನ್ನು ನಾಟಕಕಾರ ಎಷ್ಟರ ಮಟ್ಟಿಗೆ ಸಾರ್ವತ್ರೀಕರಿಸಲು ಯಶಸ್ವಿಯಾಗುತ್ತಾನೆ ಎನ್ನುವುದು ಅದರ ಏಳು ಬೀಳುಗಳನ್ನು ನಿರ್ಧರಿಸುತ್ತದೆ ಎಂದು ನನ್ನ ಅನಿಸಿಕೆ. ಆ ನೆಲೆಯಲ್ಲಿ ನನಗಿದು ನನ್ನೊಳಗಿನ ಅನುಭವದ್ದೇ ಅಭಿವ್ಯಕ್ತಿ ಎಂದು ಕಾಣಿಸಿದ್ದನ್ನು ನನ್ನ ಟಿಪ್ಪಣಿಯಲ್ಲಿ ನಿವೇದಿಸಿಕೊಂಡಿದ್ದೇನೆ. ಇಲ್ಲಿವರೆಗೆ ನಾಟಕಕ್ಕೆ ಸಂಭಾಷಣೆಯ, ಕಥೆಯ, ಶೈಲೀಕೃತ ಚಟುವಟಿಕೆಗಳ, ಕುತೂಹಲಕಾರಿ ಸನ್ನಿವೇಶ ಮುಂತಾದ ತೊಡವುಗಳನ್ನು ಕೊಟ್ಟದ್ದನ್ನು ನಾವು ಸಾಕಷ್ಟು ಅನುಭವಿಸಿದ್ದೇವೆ. ಇದೊಂದು ಹೊಸ ಸಾಧ್ಯತೆ ಮತ್ತು ನನ್ನ ಮಟ್ಟಿಗೆ ಯಶಸ್ವೀ ಸಾಧನೆ.
    ಅಶೋಕವರ್ಧನ

    ಪ್ರತ್ಯುತ್ತರಅಳಿಸಿ