ಚರಿತ್ರೆ




ಹಳೇ ಪೇಪರ್ನಿಂದ ಮಾಡಿದ ಕಾಗದದ ಕ್ಯಾಮರಾದಲ್ಲಿ
ಕ್ಲಿಕ್ ಅನ್ನಿಸಿ
ಕೈಯಲ್ಲೇ ಚಿತ್ರವನ್ನು ಬರೆದು
ಇಗೋ ಫೋಟೋ
ಅಂತ ಕೊಡುವುದರೊಂದಿಗೆ ನನ್ನ ಕ್ಯಾಮರಾಯಾನ ಆರಂಭವಾಯಿತು.

ಚಂದಮಾಮದ ಮಾಯ-ಮಂತ್ರದ ಕತೆಯ ಪಾತ್ರಗಳನ್ನೂ, ದೃಶ್ಯಗಳನ್ನೂ,
ಇದೇ ಕಾಗದದ ಕ್ಯಾಮರಾದಲ್ಲಿ ಸೆರೆಹಿಡಿದದ್ದು.
ಮಣ್ಣ ಬೊಂಬೆಗಳನ್ನು ಮಾಡಿ ಆಡುತ್ತಿದ್ದ ಆಟವನ್ನೂ
ಆ ಬೊಂಬೆಗಳನ್ನೂ
ಆ ಬೊಂಬೆ ಮಾಡುವ ಹುಡುಗಿಯನ್ನೂ
ಸೆರೆಹಿಡಿದದ್ದು ಕೂಡ ಇದೇ ಕಾಗದ ಕ್ಯಾಮರಾದಲ್ಲೇ.

ಯಾರೋ ಹೇಳಿದರು ಅಂತ ದೇವರನ್ನ ಹುಡುಕಿ ಹೊರಟೆ
ಸಿಕ್ಕಿದ
ಆದರೆ, ಪಾಪ ಅಳುತ್ತಿದ್ದ.
ಅಳುವ ದೇವರನ್ನ ಈ ಕ್ಯಾಮರಾದೊಳಗೆ ಸೆರೆಹಿಡಿದಿದ್ದೆ
ಫೋಟೋ ನೋಡಿದಾಗ
ದೇವರು ನಗುತ್ತಿದ್ದ.

ಯಾಕೆ ಹೀಗೆಲ್ಲಾ ಆಯಿತು/ಆಗುತ್ತೆ?

ಗುಡ್ಡದ ದಾಸಯ್ಯ  ಹೇಳಿದ

"ಜಗತ್ತು ಎಂಬೋದು ಬರೀ ಭಾಷೆ ಕಣ್ಮಗ
ಭಾಷೇನ ರಚಿಸಿದ್ದು ನಾನೆ ಅಂತ ನೀ ಅಂದ್ಕೋತೀಯ
ನಿನ್ನನ್ನ್ ರಚಿಸಿದ್ದು ತಾನೆ ಅಂತ ಭಾಷೆ ಅಂದ್ಕೊಳುತ್ತೆ

ನಿನ್ನ ಕಾಗದದ ಕ್ಯಾಮರ ಒಂದು ಪದ
ಇನ್ನು ನಿನ್ನ ಪ್ರಶ್ನೆ
ಭಾಷೆಯ ಸಿದ್ಧ ತಾರ್ಕಿಕ ನಿಯಮಗಳ ಮುಖಾಂತರ ಉದ್ಭವಿಸಿದ
ಮತ್ತೊಂದು ಪದ"

ನಂಬೋದು ಹೇಗೆ?

ಹೀಗಿರಲಾಗಿ,
ಈ ಕಾಗದದ ಕ್ಯಾಮರಾದಿಂದ ತೆಗೆದ ಚಿತ್ರಗಳೆಲ್ಲಕ್ಕೂ
ಜೀವ ಬಂದು
ನನ್ನನ್ನೇ ಬಿಂಬವೆಂದೂ
ಜೀವ ಬಂದ ಚಿತ್ರವೇ/ಪಾತ್ರವೇ ಸತ್ಯವೆಂದಿತು
ಚಿತ್ರಗಳ/ಪಾತ್ರಗಳ ಕೈ ಸೇರಿದ ಕ್ಯಾಮರಾಕ್ಕೂ ಜೀವ ಬಂದು
ಎಲ್ಲಾ ಚಿತ್ರಗಳು ನನ್ನದೇ ನಾನೇ ಸೆರೆಹಿಡಿದದ್ದು/ಸೃಷ್ಟಿಸಿದ್ದು
ಎಂದು ಪಟ್ಟು ಹಿಡಿಯಿತು
ಅಂದಿನಿಂದಲೂ
ನನಗೂ-ಪಾತ್ರಗಳಿಗೂ-ಕಾಗದದ ಕ್ಯಾಮರಾಕ್ಕೂ
ನಿರಂತರ ಸಂಘರ್ಷ ನಡೆಯುತ್ತಲೇ ಇದೆ.

3 ಕಾಮೆಂಟ್‌ಗಳು:

  1. ಪ್ರಿಯ ಅರವಿಂದ್
    ನಿಮ್ಮ ಕವಿತೆ ಚೆನ್ನಾಗಿದೆ, ವಿಶಿ‍ಷ್ಟವಾಗಿದೆ! ದೃಷ್ಯವನ್ನು ದೃಶ್ಯ ಮಾಡಿಕೊಳ್ಳಿ.
    ಕೆ.ವಿ.ತಿರುಮಲೇಶ್

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಸಾರ್.... ದೃಷ್ಯವನ್ನು ದೃಶ್ಯವನ್ನಾಗಿ ಬದಲಾಯಿಸಿದ್ದೇನೆ....

    ಪ್ರತ್ಯುತ್ತರಅಳಿಸಿ
  3. 'ದೃಷ್ಯ'ಕ್ಕೂ 'ದೃಶ್ಯ'ಕ್ಕೂ ಒಂದು ಮಹಾಪ್ರಾಣದ ಅತಿ-ಅಭಿವ್ಯಕ್ತಿಯ ಅಂತರ ಎನ್ನುವಲ್ಲಿ "ದೃಷ್ಯವನ್ನು ದೃಶ್ಯವನ್ನಾಗಿ ಬದಲಾಯಿಸಿ" ಅನ್ನೋದನ್ನೂ ಒಂದು ರೂಪಕವಾಗಿ ನೋಡಬೇಕಾಗುತ್ತದೆ. ;)

    ಸಹಜದಲ್ಲಿ 'ದೃಷ್ಯ'ವಾಗಿಯೇ ಬಂದುಬಿಡುವ ಅಭಿವ್ಯಕ್ತಿಯನ್ನು ನಾವುಗಳು ಒಂದು ಬುದ್ದಿಪೂರ್ವಕ ವ್ಯವಸಾಯಕ್ಕೆ ಒಳಪಡಿಸಿ 'ದೃಶ್ಯ'ವಾಗಿ ನಿರೂಪಿಸಬೇಕಾಗುತ್ತದೆ . ನೀವು ಈ ಅತಿವಾಚಿಕೆಯ ಹಂತವನ್ನು ದಾಟಿ ಮುನ್ನೆಡೆದಿರುವುದು ಸುಸಮರ್ಪಕವಾಗಿದೆ. ;)

    ಪ್ರತ್ಯುತ್ತರಅಳಿಸಿ