ಮೀಮಾಂಸೆ


           ೧
ಇಲ್ಲಿಗೆ ಬಂದಾಗ ನಾವು ತಿಳಿದುಕೊಂಡಿದ್ದವರು ಇವರಾಗಿರಲಿಲ್ಲ
ಇಲ್ಲಿನವರಿಗೆ ಪರಿಚಯವಾದರೂ ಆಸಕ್ತಿ ತೋರಿಸಲಿಲ್ಲ
ಅದರಲ್ಲೇನಿತ್ತು ಎಂಬುದನ್ನಾದರೂ ಹೇಳು
ನಾನು ನಿನ್ನ ಮಗ
ತಲುಪಿಸುವ ಹಾದಿಯ ಚಹರೆ ಅದರೊಳಡಗಿರಬಹುದೇನೊ
ನನ್ನ ತಮ್ಮ ಸತ್ತನೆಂದು ನೀನೆಂದೂ ಆ ಆಸ್ಪತ್ರೆಗೆ ಹೋಗಲಿಲ್ಲ
ನಾನು ಹುಟ್ಟಿದ್ದು ಅಲ್ಲೇ ಅಲ್ಲವ
ಕಾಗದ ತಲುಪಿಸುವ ಜವಾಬ್ದಾರಿ ನನ್ನದು - ಆಸ್ಪತ್ರೆಗೂ ಕಾಗದಕ್ಕೂ ಗಂಟು ಹಾಕುವುದಿಲ್ಲ

ಕಾಗದ ಹೋಗಬೇಕಿದ್ದದ್ದು ಪಕ್ಕದ ಬೀದಿಯಲ್ಲಿದ್ದ ನಿನ್ನದೇ ಹೆಸರಿನವರಿಗೆ
(ಅಂಚೆಯವನನ್ನು ದಂಡಿಸೋಣವ?)
ಅದು ನಿನ್ನದಲ್ಲ ಎಂದು ಓದಿದ ನಂತರ ತಿಳಿಯಿತು
(ವಿಳಾಸವನ್ನು ನೋಡಬೇಕು ಎಂದು ಅನ್ನಿಸಲೇ ಇಲ್ಲವೆ?)
ಅವರು ಮನೆ ಖಾಲಿ ಮಾಡಿಕೊಂಡು ಹೊರಟು ಹೋಗಿದ್ದರು
(ತಿರುಗಿಸಿ ಕೊಡಬೇಕಾದ ಅವಶ್ಯಕತೆ ಇತ್ತೆ?)
ಕಾಗದವನ್ನಿಟ್ಟುಕೊಂಡು ಅವರಿಗಾಗಿ ಹುಡುಕಿಸುತ್ತಿದ್ದೀಯ
(ಯಾರ ಸಾರ್ಥಕತೆಯನ್ನು ಸಾರಲಿಕ್ಕೆ?)

        ೨

ಅಸಂಬದ್ಧವಾಗಿ ಮಾತನಾಡುವುದನ್ನು ಕಲಿಸಿಲ್ಲ    
ಇರಬಹುದು ಪ್ರಕಟವಾದದ್ದು ಸ್ವಾತಿ  ಪತ್ರಿಕೆಯಲ್ಲೆ
ತತ್ವಶಾಸ್ತ್ರದ ಅದ್ಯಾಪಕಿಯಾಗುವುದಕ್ಕೂ ಮುನ್ನ ಬರೆದ ಆ ಎರಡು ಕತೆಗಳು
ಪತ್ರದ ಕುರಿತಾಗಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಡ
ಎಲ್ಲಾ ಹೇಳಿಕೆಗಳನ್ನು ಪ್ರತ್ಯಕ್ಷಪಡಿಸಲಿಕ್ಕಾಗೊಲ್ಲ
ಕಾರ್ಯ ಕಾರಣವು ಅವಶ್ಯ ಪ್ರಮೇಯವಾಗಿ ಒಳನುಸುಳಿದ್ದು

ಆ ಮನೆಯ ರಹಸ್ಯದ ಬಗೆಗೆ ನಿನಗೆಷ್ಟು ಮಾಹಿತಿಯಿದೆ
ಹಲವರೆಂದದ್ದು ನಿನ್ನ ತಂದೆ ಕಾಣೆಯಾದದ್ದು ಅಲ್ಲಿಯೆ ಎಂದು
ಹಾಗಿರಲಿಲ್ಲ ಅದು , ಬೇರೆಯದೆ ಸಂಗತಿಯಿತ್ತು
ಕಾಗದ ತಲುಪಿಸಬೇಕೆಂಬ ನಿರ್ದಾರಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ

ಸಮಾಜವಾದಿಯೊ ಕಮ್ಯುನಿಷ್ಟರೊ ಹೇಳಲಾಗದಿದ್ದರೂ ಪ್ರಜಾಪ್ರಭುತ್ವವಾದಿಯಾಗಿದ್ದರು
ಸಮಾಜಶಾಸ್ತ್ರದ ಅಧ್ಯಾಪಕರಾಗುವುದರೊಂದಿಗೆ ಹೋರಾಟಗಳನ್ನು ಬಿಟ್ಟಿದ್ದರು
ಹೃದಯಾಘಾತದಿಂದ ಬಿದ್ದು ಕೋಮಾಕ್ಕೆ ಹೋದದ್ದು ಆ ಮನೆಯ ಮುಂದೆಯೆ
ಅಲ್ಲಿ ಒಬ್ಬ ವ್ಯಕ್ತಿಯನ್ನು ಯಾರೋ ಗುಂಡಿಕ್ಕಿ ಕೊಂದಿದ್ದರು

ನಿನಗೆ ಇದು ಯಾವುದೂ ತಿಳಿದಿಲ್ಲ


ಹತ್ತು ವರ್ಷಗಳ ನಂತರ ಪ್ರಜ್ಞೆ ಬಂದಿತ್ತು ಅರೆಬರೆಯಾಗಿ
ಕನವರಿಸುತ್ತಿದ್ದರು ಯಾವ ಯಾವುದೋ ಸಮಾಜಗಳ ರಚನೆಯ ಬಗೆಗೆ
ಯಾಕೆ ಈ ಸಮಾಜಗಳು ಹೀಗೆ? ಮನುಷ್ಯ ಯಾಕೆ ಕಲಿಯತೊಡಗಿದ?
ಯಾಕೆ ಈ ಹೋರಾಟ, ಅನ್ವೇಷಣೆ, ಕಟ್ಟೋದು, ಕೆಡವೋದು
ಎಲ್ಲವನ್ನೂ ಒಳಗೊಂಡಂತೆ ದೀರ್ಘ ಪತ್ರವನ್ನು ಬರೆದಿದ್ದರು
ಉದ್ದೇಶಪೂರ್ವಕವಾಗಿ ಆ ವಿಳಾಸ ಬರೆದರೊ ಆಕಸ್ಮಿಕವಾಗಿ ತಪ್ಪಿ ಬರೆದರೊ ತಿಳಿದಿಲ್ಲ
ಕಾಗದವು ನನಗೇ ಬರೆದಂತೆ ಅನ್ನಿಸಿದರೂ ವಿಳಾಸ ಮಾತ್ರ ಅದಾಗಿತ್ತು

ಈಗಲಾದರೂ ಹೇಳು ತಲುಪಿಸುತ್ತೀಯ ಕಾಗದವನ್ನು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ