ಒಂದಿಷ್ಟು ಆತ್ಮಕತೆಗಳು


                                                         
                                                             .............ಪ್ರಜ್ಞೆಯ ವಿಕಸನದ ಹಲವು ಆಯಾಮಗಳು
                                                                           ಒಂದಿಷ್ಟು ಆತ್ಮಕತೆಗಳು...........

ಭಾಗ ೧

ಪ್ರತೀ ದಿನದ ನಿತ್ಯ ಕರ್ಮದಂತೆ ಕಾಫಿ ಲೋಟವನ್ನೂ ಅಂದಿನ ಪತ್ರಿಕೆಯನ್ನೂ ತೆಗೆದುಕೊಂಡು ಹೋಗಿ ನಿತ್ಯವೂ ಇಡುತ್ತಿದ್ದ ಜಾಗದಲ್ಲಿ ಇಟ್ಟು ಬಂದ. ಬೆಳಗಿನ ಹೊತ್ತಲ್ಲೇ, ಚಳಿಗಾಲವಾದರೂ ಸಹ ಯಾಕೋ ಬೆವರು ಇಳಿಯುತ್ತಿರುವುದನ್ನು ಕಂಡು,  ಸ್ವಲ್ಪ ಸೆಕೆಯಂತೆ ಅನ್ನಿಸಿದರೂ ಆ ಸೆಕೆ ತನಗೆ ಮಾತ್ರ ಇದ್ದಂತೆ ಅನ್ನಿಸಿದ್ದು ಉಳಿದ ಕೆಲವರು ಆರಾಮಾಗೆ ಹೋಟೇಲಿನ ಮುಂದೆ ಹಾಕಿದ್ದ ಬೆಂಕಿ ಕಾಯಿಸುತ್ತಿದ್ದಾಗ. ಈ ಅನಿರೀಕ್ಷಿತ ನಡುವಳಿಕೆಗೆ ಹೆದರಿದರೂ ಮಾಮೂಲೀ ಹೋಟೇಲಿನ ಕೆಲಸದಲ್ಲಿ  ಶ್ರೀನಿವಾಸಯ್ಯ ತೊಡಗಿದ್ದ. ತಾನಿಟ್ಟು ಬಂದಿದ್ದ ಕಾಫಿಯನ್ನು  ಕುಡಿಯುತ್ತ ಪತ್ರಿಕೆಯನ್ನು ತಿರುವಿ ಹಾಕುತ್ತಾ ಅಲ್ಲಿ  ಇಷ್ಟೊತ್ತಿಗಾಗಲೆ ಪದ್ದಣ್ಣ ಕೂತಿರಬೇಕಿತ್ತು. ಇಷ್ಟೊತ್ತಾದರೂ ಪದ್ದಣ್ಣನ ಕಾಣದಿದ್ದುದರಿಂದ   ಯಾರಾದರೂ ಪತ್ರಿಕೆ ತಿರುವಿ ಹಾಕುತ್ತಾರ ಎಂದು ಪತ್ರಿಕೆ ತಿರುವಿ ಹಾಕುವ ಶಬ್ದಕ್ಕೆ    ಕಾಯುತ್ತಿದ್ದ. ಸೂರ್ಯನ ಬಿಸಿಲು ಏರುತ್ತಿದ್ದಂತೆ ವಿಪರೀತ ಸೆಕೆ ಅನ್ನಿಸತೊಡಗಿತು. ತಿಂಡಿಗೆ  ಕೂಡುವ ಮುನ್ನ ಪ್ಲೇಟಲ್ಲಿ ತಿಂಡಿ ಕಾಫಿ ತೆಗೆದುಕೊಂಡು ಹೋಗಿ ಪತ್ರಿಕೆ ಇಟ್ಟು ಬಂದಿದ್ದ ಜಾಗದಲ್ಲಿ ಇಟ್ಟು ಬಂದ. ತಿಂಡಿ ತಿನ್ನಲು ತೊಡಗಿದಾಗ ಮೊದಲ ಬಾರಿಗೆ ಅವನಿಗೆ ತನ್ನ ಕೈಗಳು ಅದರುತ್ತಿರುವುದು ಅರಿವಿಗೆ ಬಂತು. ಏನೋ ಸೆಕೆ, ಜೊತೆಗೆ ವಿಪರೀತ ಹಸಿವು. ಯಾರಾದರು ಹತ್ತಿರದವರು ಸತ್ತರೆ ಈ ರೀತಿ ಆಗುತ್ತದೆಂದು ಯಾರೋ ಹೇಳಿದ್ದದ್ದು ನೆನಪಿಗೆ ಬಂತು. ಅವನಿಗೆ  ಇಲ್ಲಿಯವರೆಗೂ ಆ ಅನುಭವವಾಗಿರಲಿಲ್ಲ. ಯಾರೂ ಅವನ ಹತ್ತಿರದವರು ಸತ್ತಿರಲಿಲ್ಲ, ಸತ್ತವರ್ಯಾರೂ ಹತ್ತಿರದವರಾಗಿರಲಿಲ್ಲ.  ಆ ಅದರುವ ಕೈಗಳಿಂದಲೆ ತಿಂಡಿ ತಿನ್ನಲು ಹೋದಾಗ ಮಯ್ಯ ಮೇಲೆಲ್ಲ ಅನ್ನದ ಅಗಳುಗಳು ಬಿದ್ದವು. ಆ ಹಸಿವಿನಲ್ಲೂ ತಿಂಡಿ ಬೇಡವೆನಿಸಿ ತಟ್ಟೆಯಲ್ಲೆ ಕೈ ತೊಳೆದು ಎದ್ದ. ತಲೆ ಎತ್ತಿ ನೋಡಿದಾಗ ಅಡುಗೆ ಮನೆಯ ಹೊಗೆಯಿಂದಾಗಿ ಕಪ್ಪು ಕಟ್ಟಿ ಹೋಗಿದ್ದ ದೇವರ ಪಟಗಳು ಕಂಡವು. ಅವುಗಳ ಮೇಲಿದ್ದ ಆ ಕಪ್ಪನ್ನೂ, ಧೂಳನ್ನೂ ಒರೆಸಿ ಸ್ವಚ್ಚವಾಗಿಡಬೇಕೆನಿಸಿತು. ಮರುಕ್ಷಣವೆ, ಎಂದೂ ಗಮನಿಸದೇ ಇದ್ದ ಈ ದೇವರ ಫೋಟೋಗಳೂ, ಅದರ ಮೇಲಿನ ಕಪ್ಪು  ಧೂಳೂ, ಅದನ್ನ ಸ್ವಚ್ಚಗೊಳಿಸಬೇಕೆಂದೆನಿಸಿದ್ದು  ಯಾಕೆ ಎಂಬುದು ಅವನಿಗೆ ಸೋಜಿಗವೆನಿಸಿತು. ಅದರುವ ಕೈಗಳಿಂದಲೆ ದೇವರ ಫೋಟೋಗಳನ್ನು ಕೆಳಗಿಳಿಸಲು ಹೋದಾಗ ಎಂದೋ ಕಟ್ಟಿದ್ದ ದಾರ, ಎಂದೋ ಹೊಡೆದಿದ್ದ ಮೊಳೆ, ಹೀಗಾಗಿ ಫೋಟೋ ಜಾರಿ ಕೆಳಗೆ ಬಿದ್ದು  ಫ್ರೇಮಿನ ಗಾಜುಗಳೆಲ್ಲ ಒಡೆದು ನೆಲದ ಮೇಲೆಲ್ಲ ಹರಡಿದವು. ಹಾಗೆ ಹರಡಿದ ಗಾಜುಗಳಲ್ಲಿ ಅವನ ಹಲವು  ಮುಖಗಳೂ, ಅದರುತ್ತಿರುವ ತುಟಿ, ಅದರುತ್ತಿರುವ ಕೈಗಳು ಬೇರೆ ಬೇರೆಯಾಗಿ  ಕಂಡು ಏನೋ ನಿಶ್ಚಯಿಸಿದವನಂತೆ ಎದ್ದು ಬರ ಬರ ಪದ್ದಣ್ಣನ ಮನೆಯ ಕಡೆಗೆ ನಡೆದ. ಇಷ್ಟು ವರ್ಷಗಳಲ್ಲಿ ಪದ್ದಣ್ಣನ ಮನೆಗೆ  ಶ್ರೀನಿವಾಸಯ್ಯ ಹೋಗಬೇಕಾದ ಅವಶ್ಯಕತೆಯನ್ನು  ಶ್ರೀನಿವಾಸಯ್ಯನಾಗಲೀ ಪದ್ದಣ್ಣನಾಗಲಿ ನಿರ್ಮಿಸಿಕೊಂಡಿರಲಿಲ್ಲ. ಎಂದಿಗೂ ಯಾರಿಗೂ ಯಾವುದಕ್ಕೂ  ತಾನು ಅವಶ್ಯ ನಾಗಬಾರದೆಂಬ ಪದ್ಧತಿಯಡಿಯಲ್ಲಿ ಪದ್ದಣ್ಣ ಬದುಕಿದ್ದ.  ಶ್ರೀನಿವಾಸಯ್ಯ ಪದ್ದಣ್ಣನ ಮನೆಗೆ ಹೋದಾಗ ಅವನು ಬರುತ್ತಾನೆಂದು ಮೊದಲೆ ತಿಳಿದವನಂತೆ ಮನೆ ಬಾಗಿಲನ್ನು ತೆರೆದೇ ಇಟ್ಟಿದ್ದ. ಕೈ ಅದರುತ್ತಲೇ ಇತ್ತು. ಪದ್ದಣ್ಣ ನಿತ್ಯ ಇಟ್ಟುಕೊಂಡಿರುತ್ತಿದ್ದ ಹೆಗಲಿಗೆ ಹಾಕಿಕೊಳ್ಳುವ ಚೀಲವನ್ನು ಆ ಇಡೀ ರೂಮಿನಲ್ಲಿ ಹುಡುಕಿದಾಗ ಸಿಗದೇ ಹೋದದ್ದು ಕಂಡು,  ಶ್ರೀನಿವಾಸಯ್ಯನಿಗೆ ಪದ್ದಣ್ಣ ಊರು ಬಿಟ್ಟುರುವುದು ಖಾತ್ರಿಯಾಯಿತು. ಸ್ವಲ್ಪ ಹೊತ್ತು ಏನೂ ಕಾಣದಂತಾಗಿ  ಯಾವುದೋ ಅಗಾಧ ಶೂನ್ಯವೊಂದು ತನ್ನನ್ನು ಆವರಿಸಿದಂತಾಗಿ ಕುಸಿದು ನೆಲಕ್ಕೆ ಬಿದ್ದ.

*************  

ಪದ್ದಣ್ಣ ಹಾಗೂ ಶ್ರೀನಿವಾಸಯ್ಯ ಎಂಬ ಈ ಎರಡು ಪಾತ್ರಗಳ ಬಗೆಗೆ ದೀರ್ಘವಾಗಿಯಲ್ಲದೇ ಇದ್ದರೂ ಪುಟ್ಟದಾಗಿಯಾದರೂ ತಿಳಿಸಬೇಕಿದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಮಾಕಾಹಳ್ಳಿ ಎಂದು ಕರೆಯುವ ಈ ಹಳ್ಳಿಗೆ ಪದ್ದಣ್ಣ ಬಂದ. ಬಂದ ಅಂದರೆ ಹೇಗೆ ಬಂದ ಯಾತಕ್ಕೆ ಬಂದ ಎಂಬುದನ್ನು ಒಳಗೊಳ್ಳಬೇಕು. ಬ್ರಾಹ್ಮಣ ಕುಟುಂಬವೊಂದು ಜೀವನ ನಿರ್ವಹಣೆ ಎಂಬುದು ಹಳ್ಳಿಯಲ್ಲಿ ಕಷ್ಟವೆಂದು ಭಾವಿಸಿ ಪಟ್ಟಣಕ್ಕೆ  ವಲಸೆ ಹೋಗಲು ತೀರ್ಮಾನಿಸಿ ಅವರ ಹೊಲ ತೋಟ ಮನೆ ಎಲ್ಲವನ್ನೂ ಮಾರಲು ನಿರ್ಧರಿಸಿತ್ತು. ಆ ಸಂಧರ್ಭದಲ್ಲಿ ಪಟ್ಟಣದವನಾದ ಪದ್ದಣ್ಣ ಅವರ ಮನೆಯನ್ನೂ ತೋಟವನ್ನೂ ಹೊಲವನ್ನೂ ಕೊಂಡು ಈ ಹಳ್ಳಿಯಲ್ಲಿ ನೆಲೆಸುವುದೆಂದು ನಿರ್ಧರಿಸಿದ್ದ. ಹಳ್ಳಿಯಿಂದ ಪಟ್ಟಣಕ್ಕೆ ಮಾತ್ರ ಜನರು  ವಲಸೆ ಹೋಗುತ್ತಾರೆ ಎಂದು ನಂಬಿದ್ದ, ಅದೇ ರೀತಿ ನಡೆಯುತ್ತಿದ್ದ ಹಳ್ಳಿಯ ಜಗತ್ತಿನಲ್ಲಿ ಮೊದಲ ಬಾರಿಗೆ ಒಬ್ಬ ವ್ಯಕ್ತಿ ಪಟ್ಟಣದಿಂದ ಹಳ್ಳಿಗೆ ಬಂದದ್ದು ಸಾಮಾನ್ಯವಾಗಿಯೆ ಹಳ್ಳಿಯ ಜನರ ಆಶ್ಚರ್ಯಕ್ಕೂ, ಕನಿಕರಕ್ಕೂ, ಕುತೂಹಲಕ್ಕೂ  ಕಾರಣವಾಗಿತ್ತು. ಆ ಬ್ರಾಹ್ಮಣ ಕುಟುಂಬದವರ ಆಸ್ತಿಯನ್ನು  ಕೊಂಡವನು ಎಂಬ, ಆತನ ಹೆಸರು ಪದ್ದಣ್ಣ ಎಂಬ   ವಿವರಗಳು ತಪ್ಪ ಪದ್ದಣ್ಣನ ಕುರಿತಾದ ಬೇರೆ ಯಾವ ವಿವರಗಳೂ ಯಾರಿಗೂ ಗೊತ್ತಿರಲಿಲ್ಲ. ಯಾರು ಈ ಪದ್ದಣ್ಣ ಎಂಬುದು ಎಲ್ಲರಿಗೂ ತೀರ ಅನಿವಾರ್ಯವಾಗಿ ತಿಳಿಯಲೇ ಬೇಕಾಗಿದ್ದ ವಿಷಯವಾಗಿತ್ತು. ಇಲ್ಲಿ ಯಾರು ಎಂಬ ಪ್ರಶ್ನೆ ಹಳ್ಳಿಯ ಆ ಸಂಧರ್ಭದಲ್ಲಿ ಬಹಳ ಸ್ಪಷ್ಟವಾಗಿತ್ತು. ಯಾರು ಎಂದರೆ ಯಾವ ಜಾತಿಯವನು ಎಂಬುದಾಗಿತ್ತು. ಮಾರಿದ ಬ್ರಾಹ್ಮಣ ಕುಟುಂಬಕ್ಕೆ ಹಣದ ಅವಶ್ಯಕತೆ ತೀವ್ರವಾಗಿದ್ದುದರಿಂದ ಪದ್ದಣ್ಣನ ಬೆಗೆಗಿನ ವಿಚಾರಗಳಿಗೆ ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ಹೀಗಾಗಿ  ಈ ರೀತಿಯಾಗಿ ಬಂದ ಒಬ್ಬ ಹೊಸ ವ್ಯಕ್ತಿಯ ಜಾತಿ ಗೊತ್ತಿಲ್ಲದೆ ಅವನೊಡನೆ ಯಾವ ರೀತಿಯ ಸಂಬಂಧವನ್ನು ಇಟ್ಟುಕೊಳ್ಳಬೇಕೆಂದು ಇಡೀ ಹಳ್ಳಿಗೆ,  ಹಳ್ಳಿಯ ಜನತೆಗೆ ತಿಳಿಯದೆ ಹೋಯಿತು. ಇದ್ಯಾವ ಜಗತ್ತಿನ ಆಗುಹೋಗುಗಳನ್ನೂ, ಅವನ ಬಗೆಗಿನ ಕುತೂಹಲದ ವಿಚಾರಗಳನ್ನೂ ಹೆಚ್ಚು ತಲೆ ಕೆಡಿಸಿಕೊಳ್ಳದ ಪದ್ದಣ್ಣ, ಕಂಡ ಕಂಡ ವ್ಯಕ್ತಿಗಳಿಗೆಲ್ಲ ನಗುವ ಮುಖ ಮಾಡುತ್ತ ನಡೆಯುತ್ತಿದ್ದ. ಹೊಲದ ಕೆಲಸವನ್ನೂ  ಆರಂಭಿಸಿ ಆತನ ಪಾಡಿಗೆ ಆತ ಜೀವಿಸಲು ಆರಂಭಿಸಿದ. ಇಲ್ಲಿನ ಜನರ ಎಲ್ಲಾ ರೀತಿಯ ಕುತೂಹಲಕ್ಕೆ ಅವನ ನಗುವೊಂದೆ ಉತ್ತರವಾಗಿತ್ತು. ಹೀಗಾಗಿ ಇಲ್ಲಿನ ಜನರ ಕ್ರಿಯಗಳಿಗಾಗಲಿ, ಪ್ರಶ್ನೆಗಳಿಗಾಗಲೀ ಪ್ರತಿಕ್ರಿಯಿಸುತ್ತಿರಲಿಲ್ಲವಾದುದರಿಂದ ಜನರಿಗೆ ಅವನ ಬಗೆಗಿನ ಕುತೂಹಲವು ಕಡಿಮೆಯಾಗತೊಡಗಿತ್ತು. ಕಡೆಗೆ ಅವನೂ ಒಬ್ಬ ಊರಲ್ಲಿ ಇದ್ದಾನೆ ಎಂಬುದು ತಪ್ಪ ಉಳಿದ ಯಾವುದೂ ಅಷ್ಟೇನು ಮುಖ್ಯ ಸಂಗತಿಗಳಾಗದೆ ಹೋಯಿತು.

ಪದ್ದಣ್ಣನ ಬಗೆಗೆ ಜನರಿಗೆ ಆಸಕ್ತಿ ಮತ್ತೇ ಮೂಡಲಿಕ್ಕೆ , ಹೆಚ್ಚಾಗಲಿಕ್ಕೆ ಕಾರಣನಾದದ್ದು  ಶ್ರೀನಿವಾಸ.  ಒಂದು ಮುಂಜಾನೆ ಪದ್ದಣ್ಣನ ಜೊತೆಗೆ ಆಗ ತಾನೆ ಮದುವೆಯಾದ ದಂಪತಿಗಳನ್ನು ಕಂಡು ಹಳ್ಳಿಗೆ ಹಳ್ಳಿಯೆ ಆಶ್ಚರ್ಯಪಟ್ಟಿತ್ತು. ಆಗ ಮತ್ತೆ ಈ ಪದ್ದಣ್ಣ ಯಾರು? ಆ ದಂಪತಿಗಳು ಯಾರು? ಅವರು ಎಲ್ಲಿ ಮದುವೆಯಾದರು? ಇಲ್ಲಿಗೇಕೆ ಬಂದರು? ಹೀಗೆ ಹಲವರಲ್ಲಿ ಹಲವು ಪ್ರಶ್ನೆಗಳಿದ್ದರೂ ಮತ್ತೇ ಪದ್ದಣ್ಣನ ಆ ನಗುವಿನಿಂದಾಗಿ ಎಲ್ಲರಿಗೂ ದೊಡ್ಡ ನಿರಾಸೆಯಾಯಿತು. ಅವರೆಲ್ಲರ ನಿರಾಸೆಯನ್ನು ಹೋಗಲಾಡಿಸಲೊ ಎಂಬಂತೆ  ಶ್ರೀನಿವಾಸ ತಾನು ಪ್ರೇಮ ವಿವಾಹವಾದನೆಂದೂ, ಅವನ ಊರಿನವರು ಅವರನ್ನು ಹೊರಹಾಕಿದರೆಂದೂ, ಆಶ್ರಯ ಕೇಳಿದಾಗ ಪದ್ದಣ್ಣ ಅವರಿಗೆ ಆಶ್ರಯ ನೀಡಿದನೆಂದೂ, ತನಗೂ ಪದ್ದಣ್ಣನಿಗೂ ಈ ಸಂಬಂಧವಲ್ಲದೆ ಮತ್ಯಾವ ನಂಟೂ ಇಲ್ಲವೆಂದೂ, ಪದ್ದಣ್ಣನ ಈ ಸಹಾಯದಿಂದಾಗಿಯೆ ತಾನು ಬದುಕಿರುವುದೆಂದು ವಿವರಿಸಿದ. ಪ್ರೇಮ ವಿವಾಹವಾಗಿ ಮನೆ ತೊರೆದು ಬಂದಿದ್ದವರಿಗೆ ಆಶ್ರಯ ನೀಡಿದ್ದ ಪದ್ದಣ್ಣ ಯುವಕರ ಕಣ್ಣಿಗೆ ಆಶ್ರಯದಾತನೆನಿಸಿ ಹೊಸ ಪ್ರಪಂಚದ ಹೊಸ ಆಶಯಗಳಿಗೆ ಧ್ವನಿಯಾಗುತ್ತಿರುವ ಪ್ರವಾದಿಯಾಗಿ ಕಂಡರೆ ಹಿರಿತಲೆಗಳಿಗೆ ಈ ಅಪರಿಚಿತನಾಗಿಯೇ ಉಳಿದ ವ್ಯಕ್ತಿ ತೀರ ಕಿರಿಕಿರಿಯೆನಿಸಿದ್ದು ಸತ್ಯ. ಈ ಎರಡೂ ತಲೆಮಾರುಗಳ ತಲ್ಲಣಗಳಿಗಾಗಲಿ, ತಿಕ್ಕಲಾಟಗಳಿಗಾಗಲೀ ತಾನು ಕಾರಣನೂ ಅಲ್ಲ ಅಕಾರಣನೂ ಅಲ್ಲ ಎಂಬಂತೆ ಪದ್ದಣ್ಣ ಇದ್ದುಬಿಟ್ಟಿದ್ದ. ಹಳೆ ತಲೆಗಳು ಪ್ರಾಕೃತಿಕ ನಿಯಮದಂತೆ ಸತ್ತು ಹೊಸತಲೆಗಳು ಪ್ರವರ್ಧಮಾನಕ್ಕೆ ಬರತೊಡಗಿದಾಗ ಪದ್ದಣ್ಣನ ಬಗೆಗೆ ಗೌರವ ಬೆಳೆಯುತ್ತಾ ಅವನಿಗೇ ತಿಳಿಯದಂತೆ ಒಬ್ಬ ಪ್ರಮುಖವ್ಯಕ್ತಿಯಾಗತೊಡಗಿದ್ದ.

ಪದ್ದಣ್ಣ ಪ್ರಮುಖ ವ್ಯಕ್ತಿಯಾಗುವ ಸಂಧರ್ಭದಲ್ಲಿ ಅವನ ಬಗೆಗಿನ ವಿಷಯಗಳಿಗೆ ಉತ್ತರಗಳು ಅವನ ಮುಖಾಂತರವಾಗಿ  ದೊರಯದೆ ಹೋದಾಗ ಸಹಜವಾಗಿಯೆ ಅವನ ಜೊತೆಗಿದ್ದ ಶ್ರೀನಿವಾಸನ ಕಡೆಗೆ ತಿರುಗಿತು. ಶ್ರೀನಿವಾಸನಿಗೂ ಪದ್ದಣ್ಣನ ಬಗೆಗೆ ಏನೂ ಗೊತ್ತಿರಲಿಲ್ಲ. ಹಾಗಂದೆ ಅವನೆಂದೂ ಪದ್ದಣ್ಣನ ಬೆಗೆಗೆ ಸುಳ್ಳನ್ನೂ ಹೇಳಿದವನಲ್ಲ. ಆದರೆ ಶ್ರೀನಿವಾಸನಿಗೆ ಕತೆ ಕಟ್ಟುವ ಕತೆ ಹೇಳುವ ಅದ್ಬುತವಾದೊಂದು ಕಲೆ ಒಲಿದಿತ್ತು. ಎಂತವರನ್ನೂ  ತನ್ನ ಕತೆಯಿಂದ ಕಟ್ಟಿ ಕೂರಿಸುವ ಅಗಾಧವಾದ ಶಕ್ತಿ ಅವನಲ್ಲಿತ್ತು. ಪದ್ದಣ್ಣ ದಿನಾ ಸುಮ್ಮನೆ ಎದ್ದು ಕೂರುವುದನ್ನೂ ಕತೆ ಮಾಡುವ ಸಾಮರ್ಥ್ಯ ಅವನಿಗಿತ್ತು. ಅವನು ಸತ್ಯವನ್ನೇ ಹೇಳುತ್ತಿದ್ದ, ಪದ್ದಣ್ಣನ ಕುರಿತಾಗಿ ತಾನು ಕಂಡದ್ದನ್ನೇ ಹೇಳುತ್ತಿದ್ದ. ಆದರೆ ಬಹಳ ರಮ್ಯವಾಗಿ ಹೇಳುತ್ತಿದ್ದ. ಅವನು ಎಂದಿಗೂ ಪದ್ದಣ್ಣನ ಬಗೆಗ ಅವನಲ್ಲಿ ಕೇಳಲೇ ಇಲ್ಲ. ಒಂದು ರೀತಿಯಲ್ಲಿ ಅವನಿಗದು ಅವಶ್ಯವೇ ಇರಲಿಲ್ಲ. ಪದ್ದಣ್ಣನ ನಿತ್ಯ ಜೀವನವೇ ಕತೆಯಾಗತೊಡಗಿದುದರಿಂದ ಉಳಿದವುಗಳು ಬೇಕಿರಲಿಲ್ಲ. ಹೀಗೆ ನಿತ್ಯ ಕರ್ಮವೇ ಕತೆಯಾಗ ತೊಡಗಿದ, ಸತ್ಯವಾಗತೊಡಗಿದ ಅವಸ್ಥೆಯಲ್ಲಿ, ಪದ್ದಣ್ಣನ ಬದುಕಿನ ಯಾವುದೋ ಒಂದು ಭಾಗದಲ್ಲಿ ಇದ್ದ ಶ್ರೀನಿವಾಸ ಮುಂದೆ ಮುಂದೆ ಕತೆಯೊಳಗೆ ನುಸುಳುತ್ತಾ ಕತೆಗಳ ಕೇಂದ್ರಬಿಂದುವಾಗತೊಡಗಿದ. ಅವನ ಪ್ರೇಮ ಕತೆಯ ಸಾಹಸ, ದುರಂತ, ಕ್ರೌರ್ಯ, ಬಯಕೆ, ಸಾಧನೆ ಎಲ್ಲವೂ ಪದ್ದಣ್ಣನ ಕತೆಯ ಹೆಸರಲ್ಲಿ ಶ್ರೀನಿವಾಸನ ಕತೆಯಾಗತೊಡಗಿತು. ಪದ್ದಣ್ಣ ಹೊಲದ ನಡುವಲ್ಲಿ ಒಂದು ಪುಟ್ಟ ರೂಮನ್ನು ಕಟ್ಟಿಸಿಕೊಂಡು ಅಲ್ಲಿಯೇ ಇರುತ್ತಿದ್ದ. ಹೀಗಾಗಿ  ಸಂಸಾರ ನಿರ್ವಹಣೆಗಾಗಿ ಅವನ ಹಳೆ ಮನೆಯನ್ನು  ಶ್ರೀನಿವಾಸ ಹೋಟೇಲಾಗಿ ಪರಿವರ್ತಿಸುತ್ತೇನೆಂದಾಗ ಪದ್ದಣ್ಣ ಒಪ್ಪಿ ಅವನಿಗೇ ಆ ಮನೆಯನ್ನು ಬಿಟ್ಟು ಬಂದಿದ್ದ. ಹೀಗೆ ಶ್ರೀನಿವಾಸ ಆರ್ಥಿಕವಾಗಿ ಬೆಳೆಯುತ್ತಾ ಮುಖ್ಯವಾಗತೊಡಗಿದಾಗ ಪದ್ದಣ್ಣನ ಬಗೆಗಿನ ಕುತೂಹಲ ಕಡಿಮೆಯಾಗುತ್ತಾ ಸಾಗಿದಂತೆ ಶ್ರೀನಿವಾಸ ಶ್ರೀನಿವಾಸಯ್ಯನಾಗತೊಡಗಿದ.

ಶ್ರೀನಿವಾಸನಿಗೆ ಪದ್ದಣ್ಣನ ಬಗೆಗೆ ಅಪಾರವಾದ ಗೌರವ ಭಯ ಭಕ್ತಿ . ಕತೆಯ ಸಂಧರ್ಭಗಳಲ್ಲಿ ಅವನು ಎಂದಿಗೂ ತನ್ನ ಕತೆಗಳನ್ನು ಜನರಿಗೆ ತಿಳಿಸುತ್ತಿದ್ದೀನೆಂದು ಭಾವಿಸಿರಲಿಲ್ಲ. ತನ್ನ ಕತೆಗಳ ಮುಖಾಂತರವೂ ತಾನು ಪದ್ದಣ್ಣನ ಬಗೆಗಿನ ಕತೆಗಳನ್ನೇ ಹೇಳುತ್ತಿದ್ದೇನೆಂದೇ ಭಾವಿಸಿದ್ದ. ಪ್ರತೀ ದಿನವು ಅವನು ಅವನ ದಿನಚರಿಯನ್ನೂ ಅಂದಿನ ಅವನ ಬೆಳವಣಿಗೆಯನ್ನೂ ಪದ್ದಣ್ಣನಿಗೆ ಹೇಳಿದರೇನೆ ನೆಮ್ಮದಿ. ಬೆಳೆಗಿನ ಕಾಫಿಯನ್ನು ತಾನೇ ಮಾಡಿ ಪತ್ರಿಕೆಯ ಜೊತೆಗೆ ಕೊಡಬೇಕು. ತಿಂಡಿ, ಊಟ ಎಲ್ಲವನ್ನೂ ತಾನೆ ಪದ್ದಣ್ಣನಿಗೆ ನೀಡಬೇಕು, ಆಗಲೆ ಅವನಿಗೆ ನೆಮ್ಮದಿ. ಪದ್ದಣ್ಣನ ಬಗೆಗಿನ ಯಾವ ವಿಚಾರವನ್ನೂ ತಾನು ಎಂದಿಗೂ ಕೇಳಬಾರದೆಂದು ಶ್ರೀನಿವಾಸ ಎಂದೋ ನಿರ್ಧರಿಸಿದ್ದ. ಅದು ಅವನು ಪದ್ದಣ್ಣನ ಮೇಲೆ ಇಟ್ಟಿದ್ದ ಗೌರವವಾಗಿತ್ತು. ಅವನ ಮಕ್ಕಳು ಬೆಳೆಯುತ್ತಾ ಸಾಗಿದಹಾಗೆ, ಅವನೂ ಬೆಳೆಯುತ್ತಿದ್ದ ಹಾಗೆ, ಅವರಿಬ್ಬರ ನಡುವಿನ ಸಂಬಂಧವೂ ಬೆಳೆಯುತ್ತಿತ್ತು. ಎಂದಿಗೂ ಯಾವ ಸಲಹೆಯನ್ನೂ ಕೊಡದ ಪದ್ದಣ್ಣನ ಮುಂದೆ ಅವನ ಜೀವನದ ಪ್ರತೀ ನಿರ್ಧಾರವನ್ನೂ, ಗೆಲುವನ್ನೂ, ಸೋಲನ್ನೂ  ಶ್ರೀನಿವಾಸ ತಿಳಿಸುತ್ತಿದ್ದ. ಪದ್ದಣ್ಣನ ಮುಗುಳ್ನಗೆ ತಪ್ಪ ಮತ್ಯಾವ ಪ್ರತಿಕ್ರಿಯೆ ದೊರೆಯುವುದಿಲ್ಲವೆಂದು ತಿಳಿದಿದ್ದರೂ ಅದು ಅವನ ಜೀವನದ ಒಂದು ಮುಖ್ಯ ಆಚರಣೆಯಾಗಿತ್ತು. ದೇವರ ಮುಂದೆ ಭಕ್ತನೊಬ್ಬ ಎಲ್ಲವನ್ನೂ ನಿವೇದಿಸಿಕೊಳ್ಳುವ ರೀತಿಯಲ್ಲಿ ಶ್ರೀನಿವಾಸ ಪದ್ದಣ್ಣನ ಮುಂದೆ ಎಲ್ಲವನ್ನೂ ನಿವೇದಿಸಿಕೊಳ್ಳುತ್ತಿದ್ದ. ಅವನಿಗೆ ಪದ್ದಣ್ಣ ದೇವರೆ ಆಗಿದ್ದ.

ತಾನು ಯಾರಿಗೊ ದೇವರಾಗುತ್ತಿದ್ದೀನಿ ಎಂಬುದು ಪದ್ದಣ್ಣನಿಗೆ ತಿಳಿದಿತ್ತೋ ಇಲ್ಲವೊ ಹೇಳುವುದು ಸ್ವಲ್ಪ ಕಷ್ಟ. ಎಲ್ಲವೂ ತಿಳಿದಿದ್ದರೂ ಏನೂ ತಿಳಿದಿಲ್ಲದವನಂತೆಯೂ, ಏನೂ ತಿಳಿಯದಿದ್ದರೂ ಎಲ್ಲವೂ ತಿಳಿದವನಂತೆಯೂ, ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣುತ್ತಿದ್ದುದರಿಂದ ಅವನ ಬಗೆಗೆ ಯಾರೂ ಯಾವ ನಿರ್ಧಾರಕ್ಕೂ ಬರಲಿಕ್ಕಾಗುತ್ತಿರಲಿಲ್ಲ. ಶ್ರೀನಿವಾಸ ಅವನ ಜೊತೆ ಬಂದು ಇರಲು ಆರಂಭಿಸಿದಂದಿನಿಂದ ಅವನ ಜೀವನ ನಿರ್ವಹಣೆ ಸುಲಭವಾದದ್ದು  ಅವನಿಗೆ ಸಂತೋಷವನ್ನೇ ನೀಡಿತ್ತು. ಅವನು ಕೊಂಡ ಹೊಲದಿಂದ ಬಂದ ಪಸಲಿನಲ್ಲಿ ಒಂದು ಭಾಗವನ್ನು ಶ್ರೀನಿವಾಸನಿಗೆ ಕೊಟ್ಟು ಉಳಿದದ್ದನ್ನು ಮಾರಿ ಬಂದ ಹಣ  ಸಾಕಾಗಿತ್ತು. ಅಲ್ಲದೆ FD ಇಂದ ಸ್ವಲ್ಪ ಬಡ್ಡಿಯೂ ಬರುತ್ತಿತ್ತು.  ನಿತ್ಯವೂ ಕಾಫಿ ತಿಂಡಿ ಊಟ ಎಲ್ಲವನ್ನೂ ಶ್ರೀನಿವಾಸನೇ ನೋಡಿಕೊಳ್ಳುತ್ತಿದ್ದುದರಿಂದ ಎಂದಿಗೂ ಜೀವನ ನಿರ್ವಹಣೆಯ ಬಗೆಗೆ ಹೆಚ್ಚು ಆಲೋಚಿಸುತ್ತಿರಲಿಲ್ಲ. ಹೆಚ್ಚಿನ ಸಮಯವೆಲ್ಲ    ಹತ್ತಿರದಲ್ಲೇ ಇದ್ದ ಗೌರಿಬಿದನೂರಿನ ನ್ಯಾಷನಲ್  ಕಾಲೇಜಿಗೆ ಹೋಗಿ ಅಲ್ಲಿನ ಲೈಬ್ರರಿಯಲ್ಲಿ ಕೂತು ಓದುವುದೂ, ಅಲ್ಲಿಂದ ಪುಸ್ತಕಗಳನ್ನು ತರುವುದು ಎಂದು ಪುಸ್ತಕಗಳ ಜೊತೆಯಲ್ಲಿ ಕಳೆಯುತ್ತಿತ್ತು. ಅಲ್ಲಿನ ಒಬ್ಬ ಪ್ರಾಧ್ಯಾಪಕರು ಪದ್ದಣ್ಣನಿಗೆ ಪರಿಚಯದವರಾದುದರಿಂದ ಲೈಬ್ರರಿಯಿಂದ ಪುಸ್ತಕಗಳನ್ನು ತೆಗೆದು ಕೊಂಡು ಹೋಗುವ ಓದುವ ಸ್ವಾತಂತ್ರ್ಯವಿತ್ತು. ಅವನು ಎಲ್ಲವನ್ನೂ ಓದುತ್ತಿದ್ದ, ಅಲ್ಲಿನ ಯಾವ ಪುಸ್ತಕವನ್ನೂ ಬಿಡದೆ ಓದುತ್ತಿದ್ದ. ಆ ವಿಚಾರಗಳ ಬಗೆಗೆ ಗಾಢವಾಗಿ ಚಿಂತಿಸುತ್ತಿದ್ದ. ಚಿಂತನೆಗಳು ಸೃಜನಾತ್ಮಕವಾಗಿ ಹೊರ ಬರಲೇ ಬೇಕು ಎನ್ನುವ ಒಂದು ಸಿದ್ಧಾಂತದ ವಿರೋಧಕ್ಕೆ ಅವನು ಉದಾಹರಣೆಯಾಗಿದ್ದ.ಯಾರು  ಏನೇ ಕೇಳಿದರೂ  ಉತ್ತರಿಸುತ್ತಿರಲಿಲ್ಲ. ಸುಮ್ಮನೆ ನಕ್ಕುಬಿಡುತ್ತಿದ್ದ.  ಎಂದೋ ಯಾರೋ ಎಲ್ಲೋ ದಾರಿಯಲ್ಲೋ ಕಾಲೇಜು ಕ್ಯಾಂಟೀನಲ್ಲೋ ಸಿಕ್ಕರೆ ಅವ ಅಪರಿಚಿತನಾಗಿ ಕಂಡರೆ ಅವನೇನಾದರೂ ಆಸಕ್ತಿಯುತವಾಗಿ ಕಂಡರೆ ಅವನೊಡನೆ ಮಾತನಾಡುತ್ತಿದ್ದ. ಹಲವು ವಿಷಯಗಳ ಆಳವಾದ ಹೊಳಹುಗಳನ್ನು ನೀಡುತ್ತಿದ್ದ. ಹಾಗೆ ಪದ್ದಣ್ಣನು ಯಾರೊಡನೆಯಾದರೂ ಮಾತನಾಡಿದನೆಂದರೆ ಅದು ಆ ವ್ಯಕ್ತಿಯ ಘನತೆಯನ್ನು ಆ ಕಾಲೇಜಿನಲ್ಲಿ ಎತ್ತರಿಸುತ್ತಿತ್ತು. ಕೇವಲ ಆ ಪ್ರಾಧ್ಯಾಪಕ ಮಿತ್ರನಿಗೆ ಮಾತ್ರ ಹಲವು ಬಾರಿ ಹಲವು ವಿಷಯಗಳ ಬಗೆಗೆ ಮಾತನಾಡಿದ್ದ. ಯಾರಾದರೂ ಅವನನ್ನು  ಏನನ್ನಾದರೂ ಕೇಳಲು ಬಂದರೆ ಅಥವಾ ಅವನ ಬಗೆಗೆ ಆಸಕ್ತಿ ತೋರಿಸುತ್ತಿದ್ದಾರೆಂದು ತಿಳಿದರೆ ಆ ಸಂಬಂಧವನ್ನು ಯಾವ ಕನಿಕರವೂ ಇಲ್ಲದೆ ತುಂಡರಿಸಿಬಿಡುತ್ತಿದ್ದದ್ದು ಪದ್ದಣ್ಣನ ರೀತಿಯಾಗಿತ್ತು. ಆ ಪ್ರಾಧ್ಯಾಪಕ ಮಿತ್ರನೂ ಏನಾದರೂ ಕೇಳಿದರೆ ಪದ್ದಣ್ಣ ಹೇಳುತ್ತಿರಲಿಲ್ಲ, ಅವನಿಗೆ ಏನಾದರೂ ಹೇಳಬೇಕೆಂದರೆ ಮಾತ್ರ ಹೇಳುತ್ತಿದ್ದ. ಇದಿಷ್ಟೆ ಪದ್ದಣ್ಣನ ಜೀವನ ಕ್ರಮವಾಗಿತ್ತು. ಯಾವ ಬದಲಾವಣೆಗಳಿಲ್ಲದ ಒಂದು ಬದುಕಿನ ಕ್ರಮವನ್ನು ಉಳಿದ ಎಲ್ಲಾ ಕ್ರಮ ನಿಯಮಗಳನ್ನು ತೊರೆದು  ರೂಡಿಸಿಕೊಂಡಿದ್ದ.

ನಾಸ್ತಿಕನೂ ಅಲ್ಲದ ಆಸ್ತಿಕನೂ ಅಲ್ಲದ ಶ್ರೀನಿವಾಸಯ್ಯನಿಗೆ ಮಗಳ ಆತ್ಮಹತ್ಯೆ, ಆ ಆತ್ಮಹತ್ಯೆಗೆ ತಿಳಿಯದಾದ ಕಾರಣಗಳಿಂದಾಗಿ ಮಹಾ ಆಸ್ತಿಕನಾಗತೊಡಗಿದ. ಹಿಂದಿನ ಹಲವು ಪಂಚಾಯತಿ ಚುನಾವಣೆಗಳಲ್ಲಿ ಸುಲಭವಾಗಿ ಗೆದ್ದು ಬರುತ್ತಿದ್ದವ ಹಿಂದಿನ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಲ್ಲಿ ಪ್ರಾಯಾಸದ ಗೆಲುವನ್ನು ಕಂಡಿದ್ದ. ಮಗಳ ಸಾವಿಗಿಂತ ಆ ಸಾವಿನ ಹಿಂದಿದ್ದ ನಿಗೂಢತೆ ಅವನನ್ನು ಬಹಳ ಖಿನ್ನನನ್ನಾಗಿಸಿತ್ತು. ಸಾವಿನ ಹಿಂದಿನ ರಹಸ್ಯ ಹುಡುಕುವ ಬದಲು ಬದುಕಿನ ಮೇಲೆ ಜಿದ್ದು ಬೆಳೆದು ಮುಂದೆ ಬರಲಿದ್ದ ಚುನಾವಣೆಯಲ್ಲೆ ತಾನು ಗೆಲ್ಲಲೇ ಬೇಕು ಎಂದು ಹಟಕ್ಕೆ ಬಿದ್ದ. ಅಲ್ಲಿಯವರೆಗೂ ಗೂಢವಾಗಿದ್ದ ಅದೆಷ್ಟೋ ಗೆಲುವುಗಳೂ ಸೋಲುಗಳೂ ಸೇರಿ ಬದುಕಿನ ಮೇಲೆ ಜಿದ್ದಿಗೆ ಬಿದ್ದ. ಬದುಕಿನೊಡನೆ ಹೋರಾಡಲಿಕ್ಕಾಗಿ ದೇವರ ಮೊರೆ ಹೊಕ್ಕ. ದೇವರ ಮೇಲಿನ ಭಕ್ತಿ ಹೆಚ್ಚಾದಂತೆ  ಅವನ ಹಾವ ಭಾವ ಬಟ್ಟೆ ಮಾತು ಎಲ್ಲವೂ ಒಂದರ ನಂತರ ಒಂದರಂತೆ ಬದಲಾಗುತ್ತಿತ್ತು. ಸಾಮಾನ್ಯ ಹೋಟೇಲಿನಲ್ಲಿ ಕೆಲಸ ಮಾಡುತ್ತಲೆ ಸಂತನ ರೀತಿ ಉಪದೇಶಿಸುತ್ತ ಸಂತನಾಗುತ್ತಿದ್ದ. ಚುನಾವಣೆಯ ರಾಜಕೀಯ ತನಗೆ ಬೇಡವೆಂದು ಹೇಳುತ್ತಾ ಯಾರದೋ ಒತ್ತಾಯದ ಮೇಲೆ ನಿಲ್ಲುತ್ತಿದ್ದೇನೆಂದು ಹೇಳುತ್ತಲೆ ಅತಿ ಹೆಚ್ಚು  ಬಹುಮತದಿಂದ ಚುನಾವಣೆಯಲ್ಲಿ ಗೆದ್ದು ಪಂಚಾಯತಿ  ಪ್ರಧಾನಿಯೂ ಆದ. ಹೀಗೆ ಒಂದು ಸೋಲಿನ ವಿರುದ್ದದ ಚಲಕ್ಕೆ ಬಿದ್ದು   ಶ್ರೀನಿವಾಸಯ್ಯ  ಶ್ರೀನಿವಾಸಯ್ಯನವರು ಆದ. ಹೀಗೆ  ಶ್ರೀನಿವಾಸಯ್ಯ  ಶ್ರೀನಿವಾಸಯ್ಯನವರು ಆಗುವ ಸಂಧರ್ಭದಲ್ಲಿಯೂ ನಿತ್ಯವೂ ತಪ್ಪದೆ ತಾನೆ ಕಾಫಿ, ತಿಂಡಿ, ಊಟ ಪದ್ದಣ್ಣನಿಗೆ ನೀಡುತ್ತಿದ್ದರೂ ಒಂದು ತಿಳಿಯದ ದೂರ ಬೆಳೆಯುತ್ತಿತ್ತು. ಉಪದೇಶ ಮಾಡುವ ಯಾವುದೋ ಕ್ಷಣದಲ್ಲಿ ಮೊದಲ ಬಾರಿಗೆ ಪದ್ದಣ್ಣ ಯಾಕೆ ಹೀಗೆ ಎಂಬ ಪ್ರಶ್ನೆ ಉದ್ಭವಿಸಿತು.

ಬದುಕಿನೊಡನೆಯ ಜಿದ್ದು ಒಂದು ಗೆಲುವಿನಲ್ಲಿ ಸಮಾಪ್ತಿಯಾಗಲಿಲ್ಲ. ಆ ಜಿದ್ದಿನ ಪರಿಣಾಮವಾಗಿ ಎಲ್ಲಾ ನಿಗೂಢ ಪ್ರಪಂಚದ ರಹಸ್ಯಗಳನ್ನೆಲ್ಲವನ್ನೂ ಬೇಧಿಸಬೇಕೆಂದುಕೊಂಡ. ಹೀಗಾಗಿ ಅತ್ಯಂತ ನಿಗೂಢವಾಗಿದ್ದ ಪದ್ದಣ್ಣನ ಬದುಕು ಅವನಿಗೆ ಮೊದಲ ಹಾಗು ಬಹು ಮುಖ್ಯ ಸವಾಲಾಯಿತು. ಆದರೂ ಅವನಿಗೆ ಪದ್ದಣ್ಣನ ಮೇಲಿನ  ಗೌರವವಾಗಲಿ, ಭಕ್ತಿಯಾಗಲೀ ಕಡಿಮೆಯಾಗಿರಲಿಲ್ಲ. ಅವನನ್ನು ನೇರವಾಗಿ ನೀನು ಯಾರು ಎಂದಾಗಲೀ, ಎಲ್ಲಿಂದ ಬಂದೆಯೆಂದಾಗಲೀ ಕೇಳಬೇಕೆಂದೇನೂ ಅನ್ನಿಸಲಿಲ್ಲ. ಪದ್ದಣ್ಣನ ಪ್ರತೀ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಅವನು ಎಷ್ಟು ಹೊತ್ತಿಗೆ ಏಳುತ್ತಾನೆ ಎಂಬುದರಿಂದ ಹಿಡಿದು ಎಷ್ಟು ಹೊತ್ತಿಗೆ ಮಲಗುತ್ತಾನೆ ಅದರ ನಡುವೆ ಏನೆಲ್ಲಾ ಮಾಡುತ್ತಾನೆ, ಹೇಗೆ ಮಲಗುತ್ತಾನೆ ಹೇಗೆ ಏಳುತ್ತಾನೆ ಹೀಗೆ ಎಲ್ಲವನ್ನೂ ತೀಕ್ಷ್ಣವಾಗಿ ಗಮನಿಸುತ್ತಿದ್ದ. ಕಾಲೇಜಿನ ಗ್ರಂಥಾಲಯಕ್ಕೆ ಹೋದಾಗ ಅವನು ಯಾವ ಪುಸ್ತಕವನ್ನು ಓದುತ್ತಾನೆ ಯಾರ ಜೊತೆಗೆಲ್ಲ ಮಾತನಾಡುತ್ತಾನೆ ಏನನ್ನು ಮಾತನಾಡುತ್ತಾನೆ ಹೀಗೆ ಎಲ್ಲವನ್ನೂ ಗಮನಿಸುತ್ತಿದ್ದ. ಎಲ್ಲಾ ಮಾಹಿತಿಗಳನ್ನು ಸೇರಿಸಿದಾಗ ಅವನಿಗೇ ನಿರಾಸೆಯಾಯಿತು. ಪದ್ದಣ್ಣನ ನಿತ್ಯ ದಿನಚರಿಯು ಒಂದೇ ರೀತಿ ಇರುತ್ತಿತ್ತು. ಅಲ್ಲಿ ನಿಗೂಢತೆಯನ್ನು  ಭೇದಿಸಲಿಕ್ಕೆ ಅವಕಾಶವೇ ಇರಲಿಲ್ಲ. ಒಂದು ತಿಂಗಳು ಸತತವಾಗಿ ಗಮನಿಸಿದ ನಂತರ ಮುಂದಿನ ದಿನದ ದಿನಚರಿಯನ್ನು ಸುಲಭವಾಗಿ ತಿಳಿಸಿಬಿಡಬಹುದಿತ್ತು. ಅಷ್ಟು ಸಾಮಾನ್ಯವಾಗಿತ್ತು ಅವನ ಬದುಕು. ಈ ಸೋಲಿನ ನಡುವಲ್ಲೂ  ಶ್ರೀನಿವಾಸನಿಗೆ ಒಂದು ಸಂಗತಿ ಹೊಳೆಯಿತು. ಪದ್ದಣ್ಣ ಎಲ್ಲಿಗೇ ಹೋದರೂ ಅವನೊಡನೆ ಒಂದು ಪಾಟೀಚೀಲವನ್ನು ಹಾಕಿಕೊಂಡಿರುತ್ತಿದ್ದ. ಅದರಲ್ಲಿ ಒಂದು ಪುಸ್ತಕವಿರುತ್ತಿತ್ತು. ಹಾಗೆ ಯಾವಾಗಲೂ ಪದ್ದಣ್ಣನ ಬಳಿಯಲ್ಲಿ ಆ ಪಾಟೀಚೀಲವಿರುವುದೂ ಅದರೊಳಗೆ ಒಂದೇ ಪುಸ್ತಕವಿರುವುದೂ ಅದರೊಳಗೆ ಪದ್ದಣ್ಣನ ಯಾವುದೋ ರಹಸ್ಯ ಅಡಗಿರಬಹುದೆಂದು ತೀರ್ಮಾನಿಸಿದ. ಹಾಗಾಗಿ ಆ ಚೀಲದೊಳಗೆ ಅಡಗಿರುವ ಆ ಪುಸ್ತಕವನ್ನು ತಾನು ತೆರೆದು ನೋಡಿದರೆ ಪದ್ದಣ್ಣನ ಕುರಿತಾದ ವಿಷಯವೇನಾದರೂ ತಿಳಿದೇ ತಿಳುಯುತ್ತದೆಯೆಂದೆನಿಸಿತು. ಹಾಗೆ ಪದ್ದಣ್ಣನ ಚೀಲವನ್ನು ನೋಡುವುದು ತಪ್ಪಾದೀತೆಂದು ಅನ್ನಿಸಿದರೂ ತಾನೇನೂ ಪದ್ದಣ್ಣನನ್ನು ಅವಮಾನಿಸುತ್ತಿಲ್ಲವೆಂದೂ ಅವನ ಬಗೆಗಿನ ಸತ್ಯ ತಿಳಿದರೆ ಅದನ್ನು ಜಗತ್ತಿಗೆ ತಿಳಿಸಿ ಪದ್ದಣ್ಣನ ಗೌರವವನ್ನು ಹೆಚ್ಚಿಸಬಹುದೆಂದೇ ಅಲೋಚಿಸಿದ. ಇನ್ನೂ  ಮುಂದಕ್ಕೆ ಚಿಂತಿಸಿ ಪದ್ದಣ್ಣನ ಸಕಲ ವಸ್ತುಗಳಿಗೂ ತಾನೆ ವಾರಸುದಾರನಲ್ಲವೆ ಆದುದರಿಂದಾಗಿ ಹಾಗೆ ಆ ಚೀಲವನ್ನು ನೋಡುವ ಹಕ್ಕು ತನಗೆ ಇದೆ ಎಂದು ನಂಬಿಬಿಟ್ಟನು.

ಪದ್ದಣ್ಣನಿಗೆ  ಶ್ರೀನಿವಾಸನ ಬದಲಾವಣೆಗಳ ಬಗೆಗೆ ತಿಳಿದಿತ್ತೆ ಎಂದರೆ ಮತ್ತೆ ಹೇಳುವುದು ಕಷ್ಟವೇ ಸರಿ.  ಶ್ರೀನಿವಾಸನಿಗೆ ಕಂಡಂತೆಯೆ ನಿತ್ಯವೂ ಪದ್ದಣ್ಣ ಒಂದೇ ರೀತಿಯ ದಿನಚರಿಯಿಂದ ಯಾವುದೇ ಆಸಕ್ತಿಯಿಲ್ಲದೆ ಬದುಕುತ್ತಿರುವಂತೆ ಕಂಡರೂ ಪದ್ದಣ್ಣನಿಗೆ  ತನ್ನ ನಿತ್ಯದ ಅದೇ ಪರಿಸರ ಅದೇ ಜನರು ಎಲ್ಲರೂ ಹೊಸದೇ ರೀತಿಯಲ್ಲಿ ಕಾಣುತ್ತಿದ್ದರು. ಅವನು ಅವನನ್ನೂ, ಎಲ್ಲವನ್ನೂ , ಪ್ರತೀ ನಿತ್ಯವೂ ಹೊಸದಾಗಿ, ಯಾವುದರ ನೆನಪೂ ಇಲ್ಲದವನಂತೆ, ನೆನಪೇ ಇಟ್ಟುಕೊಳ್ಳದವನಂತೆ, ಹೊಸ ಪರಿಚಯದಂತೆ, ಹೊಸದಾಗಿ ಆಗತಾನೆ ಈ ಊರಿಗೆ ಬಂದವನಂತೆ ಕಾಣುತ್ತಿದ್ದನು. ತನ್ನ ಓದು ತನ್ನ ಚಿಂತನೆ ತನಗೇನು ನೀಡುತ್ತಿದೆ ಎಂಬ ಪ್ರಶ್ನೆ ಅವನಿಗೆ ಜಗತ್ತು ಹೊಸದಾಗುತ್ತಿರುವ ಪ್ರತೀ ದಿನವೂ ಪ್ರತೀ ಕ್ಷಣವೂ ಹೊಸದಾಗಿ ಕಾಣುತ್ತಿರುವ ಅನುಭವ ನೀಡುತ್ತಿತ್ತು. ತಾನು ಕಳೆದುಕೊಳ್ಳುತಿರುವ ಕಳೆದುಕೊಳ್ಳುವ ನೆನಪು ಹೊಸ ಅನುಭವವಾಗಿ ತನ್ನೆದುರು ಬಂದಾಗ ಸಂಭ್ರಮಿಸುತ್ತಿದ್ದ. ಹೀಗಾಗಿ  ಶ್ರೀನಿವಾಸನದೇ ಏನು, ಇಡೀ ಲೋಕದ ಕುರಿತಾಗಿಯೆ ಆಸಕ್ತಿ ಇರಲಿಲ್ಲ. ಆಸಕ್ತಿ ಇರಲಿಲ್ಲ ಎಂದರೆ ಹೇಗಿದ್ದರೂ ಮರು ಕ್ಷಣವೆ ತನ್ನ ದೃಷ್ಟಿಯಲ್ಲಿ ಬದಲಾಗುವ ಹೊಸದಾಗೆ ಕಾಣುವ ಜಗತ್ತಿನೊಂದಿಗೆ ನಿತ್ಯವೂ ಉಳಿದಿರುವ ಒಂದು ಸಂಬಂಧದ ಅಗತ್ಯವೇ ಕಂಡಿರಲಿಲ್ಲ. ಹೀಗೆ ಪದ್ದಣ್ಣ ಕ್ರಮಗಳನ್ನೆಲ್ಲ ಒಡೆದ ಒಂದು ಕ್ರಮದೊಂದಿಗೆ ಬದುಕುತ್ತಿದ್ದ.

 ಶ್ರೀನಿವಾಸನ ಹುಡುಕಾಟಕ್ಕೆ ಕಡೆಕೂ ಫಲ ಸಿಕ್ಕಿತು. ಒಂದು ದಿನ ಆಕಸ್ಮಿಕವಾಗಿ ಪದ್ದಣ್ಣ ಅವನ ಚೀಲವನ್ನು ಹೋಟೇಲಿನ ಜಗುಲಿಯ ಮೇಲೆ ಬಿಟ್ಟು ಬಂದಿದ್ದ. ಹಾಗೆ ಮರೆತುಹೋದದ್ದನ್ನು ಗಮನಿಸುವುದನ್ನು  ಶ್ರೀನಿವಾಸ ಮರೆಯಲಿಲ್ಲ. ಮೊದಲಿಗೆ ಆ ಚೀಲವನ್ನು ತೆರೆದು ನೋಡಲು ಭಯವಾದರೂ ಸಹ ಹಿಂದಿನಂತೆಯೆ ತನ್ನ ಹಕ್ಕುದಾರಿಕೆಯ ಸಮರ್ಥನೆ ಕಂಡಿದ್ದರಿಂದ ತೆರೆದು ನೋಡಿದ. ಆ ಚೀಲದಲ್ಲಿ ಎಲ್ಲರಿಗೂ ತಿಳಿದಂತೆ ಒಂದು ಪುಸ್ತಕವಿತ್ತು. ಹಳೇ ನೋಟ್ ಪುಸ್ತಕ. ಬಣ್ಣ ಬದಲಾದ ಪುಸ್ತಕ. ಅದರಲ್ಲಿ ಪದ್ದಣ್ಣ ಒಂದೇ ಒಂದು ಅಕ್ಷರವನ್ನೂ ಬರೆದಿರಲಿಲ್ಲ. ಅದು ಖಾಲೀ ಪುಸ್ತಕವಾಗಿತ್ತು. ನಿರಾಸೆಯಾಗಬೇಕಿದ್ದ  ಶ್ರೀನಿವಾಸನಿಗೆ ಅದರಲ್ಲೊಂದು ಫೋಟೋ ಸಿಕ್ಕಿತು. ಆ ಖಾಲೀ ಪುಸ್ತಕದ ನಡುವಲ್ಲಿ ಹಳದಿ ತಿರುಗಿದ್ದ ಹಾಳೆಗಳ ಮಧ್ಯ ಹೆಣ್ಣಿನ ಫೋಟೋ ಒಂದು ಅಡಗಿ ಕೂತಿತ್ತು. ತಟ್ಟನೆ  ಅವನಿಗೆ ಆ ಹೆಣ್ಣು ತೀರ ಹತ್ತಿರದ ಪರಿಚಯದಂತೆ ಅನ್ನಿಸಿದರೂ ಬೇಗನೆ ನೆನಪಾಗಲಿಲ್ಲ. ಸ್ವಲ್ಪ ಹೊತ್ತಿಗೇನೆ ಆ ಹೆಣ್ಣಿನ ಗುರುತು ಸಿಕ್ಕಿತು. ಅದು ಸೆಕ್ಸ್ (ಬಿ ಗ್ರೇಡ್) ಸಿನಿಮಾಗಳಲ್ಲಿ ನಟಿಸುತ್ತಿದ್ದ ತೆಲುಗಿನ ನಟಿ ಸಕೀರಾಳದ್ದು. ಸಕೀರಾಳ ಫೋಟೋವನ್ನು  ಪದ್ದಣ್ಣನ ಆ ಚೀಲದೊಳಗಿನ ಖಾಲೀ ಪುಸ್ತಕದಲ್ಲಿ ಕಂಡಾಗ  ಶ್ರೀನಿವಾಸನು ತನ್ನ ಹಲವು ಕ್ರಿಯೆಗಳಿಗೆ ಬೇಕಿದ್ದ ಉತ್ತರವನ್ನು ಕಂಡವನಂತೆ ಆನಂದಿಸಿದ. ಎಂದಿಗೂ ಅವನಿಗೆ ಇಷ್ಟು ಖುಶಿಯಾಗಿರಲಿಲ್ಲ. ಪದ್ದಣ್ಣನಂತ ವ್ಯಕ್ತಿಯ ಚೀಲದಲ್ಲಿನ ಖಾಲೀ ಪುಸ್ತಕ್ದಲ್ಲಿ ಒಂದು ಹೆಣ್ಣಿನ ಅದೂ ಸೆಕ್ಸ್ ಸಿನಿಮಾ ನಟಿಯಾದ ಸಕೀರಾಳ ಫೋಟೋ ಕಂಡಾಗ ತಾನು ನಂಬಿದ್ದ ಬೆಳೆಸಿಕೊಂಡಿದ್ದ ಪದ್ದಣ್ಣನ ವ್ಯಕ್ತಿತ್ವಕ್ಕೆ ಪರ್ಯಾಯವಾಗಿ ಮತ್ತೊಂದು ನಿರ್ಮಾಣವಾಗತೊಡಗಿ ಆ ಪರ್ಯಾಯ ವ್ಯಕ್ತಿತ್ವದಲ್ಲಿ  ಶ್ರೀನಿವಾಸನ ವ್ಯಕ್ತಿವ ಅವನಿಗೆ ಹೊಳೆಯತೊಡಗಿದಾಗ ತನ್ನ ಬದುಕಿನ ವಿರುಧ್ಧದ ಜಿದ್ದಿನ ಹೋರಾಟವನ್ನು ಗೆದ್ದವನಂತೆ ಸಂಭ್ರಮಿಸಿದ. ಅಂದಿನಿಂದ ಅವನು ಪದ್ದಣ್ಣನನ್ನು ನೋಡುವ ಕ್ರಮವೇ ಬದಲಾಯಿತು. ಪದ್ದಣ್ಣನ ಪ್ರತೀ ಕ್ರಿಯೆಗೂ ಅವನದೇ ದೃಷ್ಟಿಯಲ್ಲಿ ಒಂದು ಕತೆ ನಿರ್ಮಾಣವಾಯಿತು. ಹಿಂದೆ ಅದೇಗೆ ಪದ್ದಣ್ಣನ ಕುರಿತಾಗಿ ಕತೆಗಳನ್ನು ಕಟ್ಟಿದನೊ ಹಾಗೆಯೆ ಈಗಲೂ ಕತೆಗಳನ್ನು ಕಟ್ಟಿದನು. ಹಿಂದೆ ಪದ್ದಣ್ಣನ ಕತೆಯ ಒಂದು ಭಾಗವಾಗಿ ಕಾಣುತ್ತಿದ್ದ  ಶ್ರೀನಿವಾಸ, ಈಗಿನ ಈ ಹೊಸ ಕತೆಗಳಲ್ಲಿ ಕಾಣೆಯಾಗಿದ್ದ ಹಾಗೂ ಸ್ವತಂತ್ರ್ಯವಾಗಿ ಅವನದೇ ಕತೆಗಳು ನಿರ್ಮಾಣವಾಗತೊಡಗಿದವು. ಹೀಗೆ ಗೆಲ್ಲುತ್ತಾ ಹೋದ  ಶ್ರೀನಿವಾಸನಿಗೆ ಈಗ ತಾನು ಪದ್ದಣ್ಣನ ಪೂರ್ವಾಪರ ವಿಚಾರಿಸುವ ಅಱತೆಯಿರುವುದು ಗಮನಕ್ಕೆ ಬಂತು. ಪದ್ದಣ್ಣನ ಬಗೆಗಿನ ವಿಚಾರದ ತಿಳುವಳಿಕೆ ಈಗ   ಶ್ರೀನಿವಾಸನಿಗೆ ನೈತಿಕ ಧರ್ಮವಾಗಿ ಕಂಡು,ಆ ಧರ್ಮದ ಉಳಿವಿಗಾಗಿ ಪದ್ದಣ್ಣನನ್ನು ಕೇಳುವುದೆಂದು ತೀರ್ಮಾನಿಸಿದ.

"ಪದ್ಮನಾಭ, ನೋಡು ಇಷ್ಟು  ವರ್ಷಗಳ ನಂತರ ನಿನ್ನನ್ನು ಹೆಸರಿಟ್ಟು ಕರೆಯುತ್ತಿದ್ದೀನಿ. ಇಷ್ಟು ವರ್ಷಗಳಲ್ಲಿ ನನಗೆಂದೂ ಕೇಳಬೇಕೆಂದು ಅನ್ನಿಸದೇ ಇದ್ದವುಗಳನ್ನು ಕೇಳುತ್ತಿದ್ದೇನೆ. ನಿನ್ನ ಕ್ರಿಯೆಗಳಿಂದ ಹುಟ್ಟಿದವುಗಳೆಂದು ಭಾವಿಸಿದ್ದೀಯೇನೊ, ವಾಸ್ತವವಾಗಿ  ನಿನ್ನ ಬಗೆಗಿನ ಪ್ರಶ್ನೆಗಳು ನನ್ನ ಕೃತ್ಯಗಳಿಂದಾಗಿ ಹುಟ್ಟಿದವುಗಳು. ನೀನು ಯಾರು? ಇಲ್ಲಿಗೇಕೆ ಬಂದೆ? ಇನ್ನೂ ಏನೇನೋ ಕೇಳಬೇಕೆನಿಸಿದೆ. ಸದ್ಯಕ್ಕೆ ಈಗ ಇವುಗಳಿಗೆ ಉತ್ತರಿಸು."
"ಹೆಸರು ಮರೆತುಹೋಗಿತ್ತು. ನೆನಪಿಸಿದ್ದಕ್ಕೆ ಧನ್ಯವಾದಗಳು. ಇರಲಿ, ಈಗ ಸತ್ಯ ಯಾಕಾಗಿ? ನಾನು ಯಾರು, ಎಲ್ಲಿಂದ ಬಂದೆ, ಎಂಬ ಪೂರ್ವಾಪರಗಳು ಯಾಕೆ? ನೀನು ಹೇಳಿದೆ ನಿನ್ನ ಕೃತ್ಯಗಳಿಂದಾಗಿಯೆ ನಿನಗೆ ನನ್ನ ಬಗೆಗಿನ ಸತ್ಯದ ಅಗತ್ಯ ಕಂಡಿತು ಎಂದು. ಮನುಷ್ಯನಿಗದು ಸಾಮಾನ್ಯ. ತನ್ನ ಬದುಕಿನಿಂದಾಗಿ ಏಳುವ ಪ್ರಶ್ನೆಗಳಿಗೆ ಹೊರಗಿನವರಿಂದ ಉತ್ತರಗಳನ್ನು ಕಾಣಲು ಬಯಸೋದು. ಇರಲಿ. ಎದುರಿಗಿನವನ ಪ್ರಶ್ನೆಗಳಿಗೆ ಉತ್ತರಿಸಬೇಕೆಂಬ ನಿಯಮವನ್ನು ನಾನೆಂದೂ ಪಾಲಿಸಿದವನಲ್ಲ. ಹಾಗಾಗಿ ಈಗ ಬರುತ್ತೇನೆ. "
ಎಂದು ಜೋರಾಗಿ ನಕ್ಕು ಹೊರಟು ಬಿಟ್ಟ.

********

ಹಾಗೆ  ಕುಸಿದು ಬಿದ್ದ  ಶ್ರೀನಿವಾಸನಿಗೆ ಪದ್ದಣ್ಣ ಊರು ಬಿಟ್ಟಿರುವುದೂ ತನ್ನನ್ನೂ ಬಿಟ್ಟಿರುವುದು ಖಾತ್ರಿಯಾಯಿತು. ಆ ರೂಮಿನಲ್ಲಿ ಏನನ್ನೋ ಹುಡುಕ ತೊಡಗಿದ. ಅವನಿಗೆ ತಿಳಿಯದೆ ಕಣ್ಣಲ್ಲಿ ನೀರಾಡುತ್ತಿತ್ತು. ಜೀವನದ ಅಮೂಲ್ಯ ವಸ್ತುವೊಂದನ್ನು ಕಳೆದುಕೊಂಡವನಂತೆ, ಅದು ಇಲ್ಲೆಯೇ ಕಳೆದು ಹೋದಂತೆ ಅದನ್ನು ಕಂಡರೆ ಮಾತ್ರವೆ ತನ್ನ ಜೀವವುಳಿಯುವುದೆಂದು ಭಾಸವಾಯಿತು. ಆ ಪುಟ್ಟ ರೂಮಿನಲ್ಲಿನ ಎಲ್ಲಾ ವಸ್ತುಗಳನ್ನು ಜಾಲಾಡುತ್ತಿದ್ದ.  ಪದ್ದಣ್ಣ ಹಿಂದಿನ ವಿಷಯಗಳೇನಾದರೂ ತಿಳಿದರೆ ಅವನೆಲ್ಲಿರುವನೊ ತಿಳಿದು ಕರೆದುಕೊಂಡುಬರಬಹುದೆಂದು ಅವನಿಗನ್ನಿಸಿತು. ಈಗ ಅವನಿಗೆ ಪ್ರಾಮಾಣಿಕವಾಗಿ ಪದ್ದಣ್ಣನ ಆಸರೆ ಬೇಕೆನಿಸಿತು. ಹೀಗೆ ಹುಡುಕುತ್ತಿದ್ದಾಗ ಅವನಿಗೆ ಒಂದು ಹಳೆಯ ಡೈರಿ ಕಂಡಿತು. ಅದು ೧೯೮೭ರ ವರ್ಷದ ಡೈರಿ. ಮಾರ್ಚ್ ೧೪ ರವರೆಗಿನ ಹಾಳೆಗಳನ್ನು ಹರಿದು ಹಾಕಿದ್ದ. ಮುಂದೆ ಏನನ್ನೂ ಬರೆದಿರಲಿಲ್ಲ. ಅದರಲ್ಲೊಂದು ಹಾಳೇ ಕಂಡಿತು.

"ಪ್ರೀತಿಯ  ಶ್ರೀನಿವಾಸನಿಗೆ,
ನೀನು ಈ ಕಾಗದವನ್ನು ಓದುತ್ತಿದ್ದೀಯೆಂದರೆ ನಾನು ಊರು ಬಿಟ್ಟಿದ್ದೇನೆಂದೆ ಅರ್ಥ. ನೀನು ನನ್ನ ಡೈರಿಯನ್ನು ತೆಗೆದು ಓದುವ ಹಂತಕ್ಕೆ ಬಂದಿದ್ದೀಯೆಂದರೆ ನಿನಗೆ ನನ್ನ ಬಗೆಗೆ ಆಸಕ್ತಿ ಹುಟ್ಟಿದೆಯೆಂದೇ ಅರ್ಥ. ನನ್ನ ಬಗೆಗೆ ಆಸಕ್ತಿ ಶುರುವಾಗಿದೆ ಎಂಬ ಸುಳಿವು ಸಿಕ್ಕ ಕೂಡಲೆ ನಾನು ನಿನ್ನನ್ನು ಬಿಟ್ಟಿರುತ್ತೇನೆ. ಈ ಕಾಗದಕ್ಕೆ ದಿನಾಂ ಹಾಕಿಲ್ಲ. ಆ ಆಸಕ್ತಿ ನಿನಗೆ ಹುಟ್ಟಿದಾಗ ನೀನು ಕೇಳುವ ಪ್ರಶ್ನೆಯೇ ನಾನು ಯಾರು ಎಂದು. ಹಾಗೆ ಕೇಳಿದ ನಂತರ ನಾನು ಇಲ್ಲಿರುವುದಿಲ್ಲ. ಅದಕ್ಕಾಗಿಯೆ ನಿನಗೆ ಈ ಪತ್ರವನ್ನು ಇಟ್ಟಿದ್ದೇನೆ. ಈ ಡೈರಿಯಲ್ಲಿನ ಒಂದು ದಿನಾಂಕದ ಹಿಂದಿನ ಹಾಳೆಗಳನ್ನು ನಾನೆ ಹರಿದು ಹಾಕಿದ್ದೀನಿ. ಹಿಂದಿನ ದಿನಗಳ ನೆನಪಿನ ಅವಶ್ಯಕತೆ ಇರಲಿಲ್ಲ. ನಂತರದ ಹಾಳೆಗಳು ಖಾಲಿಯಾಗಿವೆ. ನೆನಪಲ್ಲಿ ಇಟ್ಟುಕೊಳ್ಳಬೇಕಾದದ್ದು, ಬರೆಯಬೇಕಾದದ್ದು ಏನೂ ಇದೆ ಎಂದು ನನಗೆ ಅನ್ನಿಸಲೇ ಇಲ್ಲ.
ಇಲ್ಲಿನ ಜಮೀನು, ಮನೆ ಎಲ್ಲವನ್ನೂ ನೀನು ತೆಗೆದುಕೊಳ್ಳಬಹುದು.
ಇಂತಿ
ಪದ್ದಣ್ಣ"

********************************

ಭಾಗ ೨

ಪದ್ದಣ್ಣನನ್ನು ತನ್ನ ಮೊದಲ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೇಗಾದರೂ ಮಾಡಿ ಬರಲು ಒಪ್ಪಿಸಬೇಕೆಂದು ವೇಣು ತೀರ್ಮಾನಿಸಿದ್ದ. ಪದ್ದಣ್ಣ ಎಲ್ಲಿಗೂ ಹೊರಗೆ ಬರುವುದಿಲ್ಲವೆಂದು ತಿಳಿದಿದ್ದರೂ ತನ್ನ ಪ್ರಯತ್ನವನ್ನು ಮಾಡಿಯೇ ಸಿದ್ಧ ಎಂದು ಕಾಲೇಜಿನ ಪ್ರಾಧ್ಯಾಪಕರ ಮುಖಾಂತರವಾಗಿ ಪುಸ್ತಕ ಬಿಡುಗಡೆ ಸಮಾರಂಭದ ವಿವರಗಳನ್ನೂ, ಆಹ್ವಾನ ಪತ್ರಿಕೆಯನ್ನೂ ಕಳುಹಿಸಿದ್ದ. ತನ್ನ ಖಾಸಗೀ ಮೊಬೈಲ್ ಫೋನಿನ ಸಂಖ್ಯೆಯನ್ನೂ ನೀಡಿ ಪದ್ದಣ್ಣನು ಬರುವುದಾದರೆ ತನಗೆ ತಿಳಿಸುವುದೆಂದೂ, ತಾನೆ  ವಸತಿ ಊಟ ಸಾರಿಗೆ ಎಲ್ಲಾ ಸೌಕರ್ಯಗಳನ್ನು ಏರ್ಪಾಡುಮಾಡುತ್ತೇನೆಂದು ತಿಳಿಸಿದ್ದ. ಪದ್ದಣ್ಣ ಬರುವ ಖಾತ್ರಿಯೇನು ಇಲ್ಲದಿದ್ದರೂ ಬಂದರೆ ತನ್ನೊಳಗಿನ ಹಲವು ತುಮುಲಗಳನ್ನೂ ಪ್ರಶ್ನೆಗಳನ್ನೂ ಹೇಳಬೇಕೆಂದುಕೊಂಡಿದ್ದ. ಪದ್ದಣ್ಣ ಮಾತನಾಡುತ್ತಾನೋ ಇಲ್ಲವೊ ತಿಳಿಯದಿದ್ದರೂ ತಾನು ಎಲ್ಲವನ್ನೂ ತಿಳಿಸಬೇಕೆಂದು, ಈಗಿನ ಪುಸ್ತಕ ಅನುವಾದವೇ ಆದರೂ ಈ ಅನುವಾದ ಕ್ರಿಯೆಯಲ್ಲಿ ತಾನು ಎದುರಿಸಿದ ಸವಾಲುಗಳು, ತನ್ನೊಳಗೆ ಆಗತೊಡಗಿದ್ದ ರೂಪಾಂತರಗಳು, ತಾನು ರೂಪಗೊಳ್ಳುತ್ತಿರುವ ಬಗೆಗಿನ ಧ್ವಂದ್ವಗಳನ್ನೆಲ್ಲಾ ವಿವರಿಸಬೇಕೆಂದುಕೊಂಡಿದ್ದ. ಅವನು ಸ್ವಂತ ರಚನೆಯಲ್ಲಿ ತೊಡಗಿದ್ದರೂ ಸಹ ಆ ರಚನೆಗಳಲ್ಲಿ ಏನೋ ಕೊರತೆ ಕಂಡಿತ್ತು. ಕತೆ, ಕವನ, ವಿಮರ್ಶೆ ಹೀಗೆ ಏನಾದರೂ ಬರೆದು ಬ್ಲಾಗಿಗೆ ಹಾಕುವುದು ವೇಣುವಿನ ಅಭ್ಯಾಸವಾಗಿತ್ತು. ಬದುಕಿನಲ್ಲಿ ಎದುರಾಗುತ್ತಿದ್ದ ಅನುಭವಗಳೊಳಗಿನ ಕಾರಣವನ್ನೂ ಅದರ ಅರ್ಥವ್ಯಾಪ್ತಿಯನ್ನೂ ಹುಡುಕಲಿಕ್ಕೆಂದೇ ಅವ ಬರೆಯುತ್ತಿದ್ದ. ಶಾಮಲಿಯು ಅವನ ಬದುಕಲ್ಲಿ ಆಕಸ್ಮಿಕವಾಗಿ ಪ್ರವೇಶಿಸಿದ ನಂತರದ ಘಟನೆಗಳೂ, ಆ ಘಟನೆಗಳಿಂದಾಗಿ ಏಳುತ್ತಿದ್ದ ಪ್ರಶ್ನೆಗಳಿಗೆ ತನ್ನ ಬರಹ ಸೋಲುತ್ತಿರುವುದು ಅವನಿಗೆ ಸ್ಪಷ್ಟವಾಗಿ ಗೋಚರಿಸಿತ್ತು. ಒಮ್ಮೆ ಶಾಮಲಿಯು ಮೆಜೆಸ್ಟಿಕ್ಕಿನಲ್ಲಿದ್ದ ವೇಶ್ಯೆಯರನ್ನು ನೋಡಬೇಕೆಂದೂ ಅವರನ್ನು ಸಂದರ್ಶಿಸಬೇಕೆಂದೂ ಹಟ ಹಿಡಿದಾಗ ಒಬ್ಬಳೆ ಹೋಗುವುದು ಅಪಾಯವಾದುದರಿಂದ ಅವನೂ ಜೊತೆಗೆ ಹೋಗಿದ್ದ. ಹಾಗೆ ಒಬ್ಬ ವೇಶ್ಯಯೆ ಕೈಯಲ್ಲಿ "ಸಕೀರಾಳ ಆತ್ಮಕತೆ" ಪುಸ್ತಕದ ತೆಲುಗಿನ ಮೂಲ ಆವೃತ್ತಿ ನೋಡಿದ. ವೇಶ್ಯಯೆ ಕೈಯಲ್ಲಿ ಆ ಪುಸ್ತಕ ಇದ್ದದ್ದು ಅವನನ್ನು ಸೆಳೆಯಿತು.. ಅವನಿಗೆ ತೆಲುಗು ಓದಲೂ ಬರೆಯಲೂ ಬರುತ್ತಿದ್ದುದರಿಂದ ಆ ಪುಸ್ತಕದ ಕೆಲವು ಪುಟಗಳನ್ನು ಓದುತ್ತಿದ್ದಂತೆ ಇಡೀ ಪುಸ್ತಕವು ಅವನನ್ನು ಆಕರ್ಷಿಸಿತು. ಮನೆಗೆ ಬಂದವನೆ ಆ ಪುಸ್ತಕವನ್ನು ತಂದು ಓದಲು ಆರಂಭಿಸಿದ. ಹಾಗೆ ಓದುತ್ತಿದ್ದವನಿಗೆ ಒಂದು ವಿಶಿಷ್ಟ ವಿಚಿತ್ರ ಪ್ರಪಂಚವೊಂದರ ಅನುಭವವಾಗತೊಡಗಿತು. ಇಷ್ಟು ದಿನಗಳ ಕಾಲ ತಾನು ಕಂಡಿದ್ದ ಪ್ರಪಂಚಕ್ಕೂ,  ಅದರ ಮೂಲಕ ತಾನು ಕಟ್ಟಿಕೊಂಡಿದ್ದ ಸಿದ್ಧಾಂತಕ್ಕೂ ಬಿನ್ನವಾದ ಮತ್ತೊಂದು ಪ್ರಪಂಚ, ಅನುಭವ ತೆರೆದುಕೊಂಡಿತು. ಇಷ್ಟು ದಿನಗಳ ತನ್ನ ಓದು ಬರಹ ಕೇವಲ ಒಂದೆ ಪ್ರಪಂಚದ ತನ್ನದೇ ನಿರ್ಮಿತ ಪ್ರಪಂಚದ ಒಳಗೇ ಇದ್ದು  ಮತ್ತೊಂದು ಪ್ರಪಂಚವಿದೆಯೆಂಬ  ಕಲ್ಪನೆಗೂ ಅವಕಾಶ ನೀಡದ್ದು ಕಂಡು ಬೇಸರಗೊಂಡ. ಅವನ ಆ ಪುಸ್ತಕದ ಓದು ಆ ಇಡೀ ಪುಸ್ತಕವನ್ನು ಪುನರ್ನಿಮಿಸಲು ಪ್ರಚೋದಿಸಿತು. ತನ್ನ ಕಲ್ಪಿತ ಪ್ರಪಂಚದಿಂದ ತನ್ನ ಏಕಮಾತ್ರ ಸಿದ್ದಾಂತಗಳಿಂದ ಕಳಚಿಕೊಂಡು ಹೊರಬರಲು ಈ ಪುಸ್ತಕವನ್ನು ಅನುವಾದಿಸುವುದು ಹಾಗು ಹಾಗೆ ಅನುವಾದಿಸುವಾಗ ಆ ಹಲವು ಪ್ರಪಂಚಗಳ ಅನುಭವವನ್ನು ದರ್ಶಿಸುವುದು ಮಾತ್ರವೇ ದಾರಿಯೆಂದು ಅವನಿಗನ್ನಿಸಿತು. ಹಾಗಾಗಿ ಸಕೀರಾಳನ್ನೂ ಅವಳ ಆತ್ಮಕತೆಯ ಪುಸ್ತಕದ ಪ್ರಕಾಶಕರನ್ನು ಸಂಪರ್ಕಿಸಿ ಅನುವಾದದ ಹಕ್ಕನ್ನು ಪಡೆದು "ಸಕೀರಾಳ ಆತ್ಮಕತೆ" ಎಂದು ಅದನ್ನು ಕನ್ನಡಕ್ಕೆ ಅನುವಾದಿಸಿದ್ದ. ಹಾಗೆ ಅನುವಾದವಾದ ಪುಸ್ತಕ ಬಿಡುಗಡೆ ಸಮಾರಂಭ ನಾಳೆ ನಡೆಯಲಿತ್ತು. ಅದೇ ಸಮಯಕ್ಕೆ ಪದ್ದಣ್ಣ ಅವನಿಗೆ ಕರೆ  ಮಾಡಿ ತಾನು ಬೆಂಗಳೂರಿಗೆ ಬಂದಿರುವುದಾಗಿಯೂ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬರುವುದಾಗಿಯೂ ತಿಳಿಸಿ ತಾನು ಹೋಟೇಲಿನಲ್ಲಿ ಇಳಿದುಕೊಂಡಿರುವುದರಿಂದ ತನ್ನ ವಸತಿ ಕುರಿತಾಗಿ ಚಿಂತಿಸುವುದೇನೂ ಬೇಡವೆಂದು ತಿಳಿಸಿದ್ದ.

ಆ ಅನುವಾದದ ಸಮಯದಲ್ಲಿ ವೇಣುವಿಗೆ ಅವನ ಜೀವನದಲ್ಲಿ ಕಂಡ ಹಲವು ವ್ಯಕ್ತಿಗಳು, ಹಲವು ಸನ್ನಿವೇಷಗಳು ಸಕೀರಾಳ ಆತ್ಮಕತೆಯ ಯಾವುದೋ ಒಂದು ಪಾತ್ರದ ರೀತಿಯಲ್ಲೋ ಸನ್ನಿವೇಷದಲ್ಲೋ ಕಾಣುತ್ತಿತ್ತು. ಪ್ರತಿಯೊಬ್ಬರದೂ ಒಂದೊಂದು ಆತ್ಮಕತೆಗಳಿರುವಂತೆ ಮೇಲ್ನೋಟಕ್ಕೆ ಕಂಡರೂ ಒಳನೋಟದಲ್ಲಿ ಎಲ್ಲರದೂ ಒಂದೇ ಆತ್ಮಕತೆಯಂತೆ, ಆ ಒಂದೇ ಆತ್ಮಕತೆಯ ವಿವಿಧ ಪಾತ್ರಗಳು ವಿವಿಧ ಆತ್ಮಕತೆಗಳಂತೆ ಕಂಡವು. ಸೆಕ್ಸ್ ಸಿನಿಮಾ ಲೋಕದ ದುರಂತ ಅಧ್ಯಾಯವನ್ನು  ತೆರೆಯುತ್ತ ಸಕೀರಾಳ ಆತ್ಮಕತೆಯು ವ್ಯಕ್ತಿಗಳ ಕತ್ತಲ ದುರಂತ ಅಧ್ಯಾಯವನ್ನು ಅನಾವರಣಗೊಳಿಸಿತ್ತು. ಆ ಕತ್ತಲ ದುರಂತ ಅಧ್ಯಾಯದ ಒಳ ಹೊರಗಲ್ಲಿ ನಡೆಯುತ್ತಿದ್ದ ಮಾನವೀಯ ಸಂಬಂಧಗಳ ಹುಡುಕಾಟ, ಹೋರಾಟ, ಹೊಡೆದಾಟ ಎಲ್ಲವೂ ವ್ಯಕ್ತಿಗತವಾಗಿ ಅವನಿಗೆ ಅನುಭವಕ್ಕೆ ಬರುತ್ತಿತ್ತು. ಹೀಗೆ ಅನುವಾದಿಸುವಾಗ ಆ ಆತ್ಮಕತೆಯ ಸನ್ನಿವೇಷಗಳಿಗೆ ಅವನ ಬದುಕಿನ ಯಾವುದೋ ಸನ್ನಿವೇಷಗಳನ್ನೋ ಅಥವಾ ತಾನು ಕೇಳಿದ ಯಾರದೋ ಬದುಕಿನ ಕತೆಯನ್ನೊ ತುಳುಕು ಹಾಕಿ ಅದರ ಒಳ ಹೊರಗನ್ನು ಈ ಆತ್ಮಕತೆಯ ಮೂಲಕ ಕಾಣುತ್ತಿದ್ದ. ತಾನು ರೂಪಗೊಳ್ಳುತ್ತಿರುವ ಬಗೆಗೆ ತಿಳಿಯಲೆತ್ನಿಸಿ ಹಾಗೆ ತಿಳಿಯಲಾರದೆ ಸೋತಾಗ ಆ ಸೋಲಿನ ಕಾರಣವನ್ನು ಯಾರದೋ ಆತ್ಮಕತೆಯ ಅನುವಾದದಲ್ಲಿ ಕಂಡು ಗೆದ್ದಿದ್ದ. ಅವನ ಬದುಕಲ್ಲಿ ಕಂಡಿದ್ದ ಎಲ್ಲಾ ವ್ಯಕ್ತಿಗಳ ಒಂದು ಛಾಯೆಯನ್ನು  ಆ ಆತ್ಮಕತೆಯಲ್ಲಿ ಕಂಡಿದ್ದನಾದರು ನಿಗೂಢವೆಂಬಂತೆ  ಶಾಮಲಿ ಹಾಗು ಪದ್ದಣ್ಣನ ಪಾತ್ರಗಳ ಯಾವ ಛಾಯೆಯೂ ಎಲ್ಲಿಯೂ ಕಂಡಿರಲಿಲ್ಲ.

ವೇಣುವಿಗೆ ಮೊದಲಿನಿಂದಲು  ಒಂದು ಬಯಕೆಯಿತ್ತು. ತಾನು ಬಸ್ಸಿನಲ್ಲಿಯೊ  ರೈಲಿನಲ್ಲಿಯೋ ಹೋಗುವಾಗ ಪಕ್ಕದ ಸೀಟಿನಲ್ಲಿ ಕೂತ ಹುಡುಗಿಯು ಪರಿಚಿತಳಾಗಿ ಆ ಪರಿಚಯ ಪ್ರೇಮವಾಗಬೇಕು ಎಂದು ಪ್ರತೀ ಬಾರಿ ಬಸ್ಸು /ರೈಲು ಹತ್ತುವಾಗಲೂ ಬಯಸುತ್ತಿದ್ದ. ಕೆಲವಾದರೂ ಸಂಬಂಧಗಳು ಆಕಸ್ಮಿಕವಾಗಿ ಆಗಿ ಬಿಡಬೇಕು ಎಂದು ಬಯಸಿದ್ದ. ಹೀಗೆ ಅವನಿಗೆ ಶಾಮಲಿ ಸಿಕ್ಕಿದ್ದು. ಬಸ್ಸಿನಲ್ಲಿಯೋ ರೈಲಿನಲ್ಲಿಯೊ ಸಿಗಲಿಲ್ಲ. ಒಮ್ಮೆ ಅವನು ಬರೆದಿದ್ದ ಕವನವನ್ನು ಬ್ಲಾಗಿನಲ್ಲಿ ಓದಿ ಮೆಚ್ಚಿ ಅವನಿಗೆ ಮೇಲ್ ಕಳುಹಿಸಿದ್ದಳು. ಅದಾದ ನಂತರ ಫೇಸ್ ಬುಕ್ಕಿನಿಂದ ಅವಳ ಬಗೆಗಿನ ಮಾಹಿತಿ ಪಡೆದು ಅವಳ ಕವನವನ್ನೂ ಓದಿ ಮೆಚ್ಚಿ ಮೇಲ್ ಬರೆದಿದ್ದ. ಹೀಗೆ ಫೇಸ್ ಬುಕ್ಕಿನಿಂದ ಆರಂಭವಾದ ಪರಿಚಯ, ಒಂದು ದಿನ ಭೇಟಿಗೆ ಬಂದು, ನಂತರ ಸಿನಿಮಾ, ನಂತರ ಹೋಟೇಲ್ಲು, ನಂತರ ನಾಟಕ ಹೀಗೆ ಒಂದು ಗಟ್ಟಿ  ಗೆಳೆತನ ಏರ್ಪಾಡಾಗಬೇಕಾದ ಪರಿಸರವನ್ನು ನಿರ್ಮಿಸಿಕೊಂಡು ಬೆಳೆಯಿತು.

ಶಾಮಲಿಯು ವೇಣುವಿಗೆ ಇಷ್ಟವಾಗಲು ಮುಖ್ಯ ಕಾರಣವೆ ಅವಳಿಗೆ ಅವನ ಕವನ ಮೆಚ್ಚಿಗೆಯಾದದ್ದಾಗಿತ್ತು. ಅವನ ಕವಿತೆಗಳೆಂದರೆ ಸಾಮಾನ್ಯ ಹಾಡುಗಳಂತಿರದೆ ಹಲವು ಪದರಗಳಲ್ಲಿ ವ್ಯಕ್ತಗೊಳ್ಳುವ ಸಂಕೀರ್ಣ ರಚನೆಗಳಾದುದರಿಂದ ಸಾಮಾನ್ಯರಿಗೆ ದಕ್ಕುವುದಿಲ್ಲವೆಂದೇ  ತೀರ್ಮಾನಿಸಿದ್ದ. ಹಾಗಾಗಿ ಅವನ ಕವನವನ್ನು  ಮೆಚ್ಚಬೇಕೆಂದರೆ ಅದಕ್ಕೆ  ಬೌಧ್ಧಿಕವಾಗಿ ಮೇಲ್ಮಟ್ಟದಲ್ಲಿರಬೇಕೆಂದೂ ಇನ್ನು ವಿಮರ್ಶಿಸಬೇಕೆಂದರೆ ಕಾವ್ಯ ತತ್ವದ ಪ್ರಾಥಮಿಕ ಅರಿವಿರಬೇಕೆಂದು ತಿಳಿದವನಾಗಿದ್ದ. ಶಾಮಲಿಯೊಡನೆ  ಕವಿತೆಗಳನ್ನು ಓದಿದಾದ ಅವಳ ಪ್ರತಿಕ್ರಿಯೆಗಳನ್ನು ಕೇಳಿ ಅವನಿಗೆ ಒಂದು ರೀತಿಯ ರೋಮಾಂಚನವಾಯಿತು. ಆ ಕವಿತೆಗಳಲ್ಲಿ ತಾನು ಕಾಣುತ್ತಿರುವುದು ಕಾಣಬೇಕೆಂದಿರುವುದು ಅವಳಿಗೂ ಕಾಣಹತ್ತಿದಾಗ ಶಾಮಲಿಯು ಅವನಿಗೆ ಅಪೂರ್ವ ಗೆಳತಿಯಾಗಿ ಕಂಡಳು. ಪ್ರತೀ ಬೌದ್ಧಿಕ ವಾಗ್ವಾದಗಳಿಗೆ ಆಳದ ಪ್ರಶ್ನೆಗಳಿಗೆ ಅವಳೊಡನೆ ನಡೆಯುತ್ತಿದ್ದ ಚರ್ಚೆಗಳು ಅವನಿಗೆ ಸಹಾಯವಾಗುತ್ತಿದ್ದಂತೆಯೆ ಶಾಮಲಿಯೊಡನೆ ಆಕರ್ಷಣೆಯೂ ಹೆಚ್ಚಾಗುತ್ತಿತ್ತು.

ಅವಳ ಪ್ರತಿಕ್ರಿಯೆಗಳು  ಥೇಟ್ ತನ್ನ ಪ್ರತಿಕ್ರಿಯೆಗಳಂತೆಯೇ ಇರುತ್ತಿದ್ದದ್ದು ಅವನ ಗಮನಕ್ಕೆ ಬಂದಿತ್ತು. ಅವಳ ಹಲವು ಹವ್ಯಾಸಗಳು ಅವನದ್ದಾಗಿರುವಂತೆಯೆ ಅವಳ ಖಿನ್ನತೆಗಳೂ ಅವನಿಗಿತ್ತು. ಒಂದು ಮಧ್ಯರಾತ್ರಿ ಕರೆ ಮಾಡಿ ಆ ರಾತ್ರಿ ನಿದ್ರೆ ಬರುತ್ತಿಲ್ಲವೆಂದೂ ಬದುಕಿನ ಕುರಿತಾದ ಅರ್ಥದ ಕುರಿತಾದ ಪ್ರಶ್ನೆಗಳು ತನ್ನನ್ನು ಕಾಡುತ್ತಿರುವುದೆಂದು ಶಾಮಲಿಯು ಹೇಳಿದ್ದಳು. ಅವಳ ಆ ಪರಿಸ್ಥಿತಿಯನ್ನು  ಥೇಟ್ ಅದೇ ಪರಿಸ್ಥಿತಿಯನ್ನು ಅವನೂ ಹಾದು ಬಂದಿದ್ದ. ಅವಳ ಬದುಕಿನ ಸಮಸ್ಯೆಗಳು, ಅವಳ ಶೈಕ್ಷಣಿಕ ಸಮಸ್ಯೆಗಳು ಎಲ್ಲವೂ ಅವನು ದಾಟಿ ಬಂದವುಗಳೇ ಆಗಿತ್ತು. ಅವನು ಯಾವ ರೀತಿ ಬದುಕಬೇಕೆಂದಿದ್ದನೋ ಅದೇ ರೀತಿ ಅವಳು ಬದುಕುತ್ತಿದ್ದಳು. ಅವನಿಗೆ ಅವಳು ಬಿಂಬವೋ ಅವಳಿಗೆ ಅವನು ಬಿಂಬವೋ ತಿಳಿಯದಾದ. ಎರಡು ಕನ್ನಡಿಗಳ ಮಧ್ಯೆ ಮತ್ತೇನೋ ಇದ್ದು  ತಾವಿಬ್ಬರೂ ಆ ಮತ್ತೇನೋ ಒಂದರ ಬಿಂಬಗಳ ಎಂದು ಅನ್ನಿಸಿತ್ತು. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಮಾತ್ರ ಅವಳನ್ನು ಕರೆದಿರಲಿಲ್ಲ. ಯಾಕೆ ಕರೆಯಲಿಲ್ಲ ಎಂದು ಎಷ್ಟು ಚಿಂತಿಸಿದರು ಅವನಿಗೆ ಉತ್ತರ ತಿಳಿಯಲಿಲ್ಲ. ಶಾಮಲಿಯು ಸಕೀರಾಳ ಆತ್ಮಕತೆಯಲ್ಲಿ ಕಾಣದೇ ಹೋದದ್ದು ಒಂದು ರೀತಿಯಲ್ಲಿ ಖುಷಿಯೆನಿಸಿದರೂ ಅವಳನ್ನು ಬೇರೆಲ್ಲಿ ಹುಡುಕುವುದೆಂದು ಅವನಿಗೆ ತಿಳಿಯಲಿಲ್ಲ. ಬಹುಷಃ ಮುಂದೆಂದಾದರು ತಾನು ಆತ್ಮಕತೆಯನ್ನೇನಾದರೂ ಬರೆದರೆ ಅದರಲ್ಲಿ ಅವಳು ಕಾಣಬಹುದೆಂದೂ ಕಾಣಲೇ ಬೇಕೆಂದು ನಿರ್ಧರಿಸಿ ಸುಮ್ಮನಾದ.

ಹೀಗೆ ಶಾಮಲಿಯನ್ನು ನೆನೆಯುತ್ತಿದ್ದ ವೇಣುವಿಗೆ ಏನೋ ನೆನಪಾಯಿತು. ಹಿಂದೆ ಶಾಮಲಿಯು ಸಕೀರಾಳ ಆತ್ಮಕತೆಯ ಇಂಗ್ಲೀಷ್ ಆವೃತ್ತಿಯನ್ನು ಓದಿ ಅವಳ ಇಷ್ಟವಾದ ಭಾಗವೊಂದನ್ನು ಕನ್ನಡಕ್ಕೆ ಅನುವಾದಿಸಿ ಕಳುಹಿಸಿದ್ದಳು. ಈಗ ಅವನಿಗೆ ಅವಳ ಅನುವಾದವನ್ನೂ ತನ್ನದನ್ನೂ ಜೊತೆಯಲ್ಲಿ ಇಟ್ಟು ನೋಡಬೇಕೆನಿಸಿತು. ಮೇಲ್ ನ ಇನ್ ಬಾಕ್ಸ್ ಅಲ್ಲಿ ಇದ್ದ ಅವಳು ಕಳುಹಿಸಿದ್ದ ಅನುವಾದದ ಪ್ರತಿಯನ್ನು ಪ್ರಿಂಟ್ ತೆಗೆದು ಅವನ ಪುಸ್ತಕದಲ್ಲಿ ಎಲ್ಲಿ ಆ ಭಾಗವು ಬರುತ್ತದೆಂದು ನೋಡಿ ಎರಡನ್ನು ಹೋಲಿಸಿ ನೋಡಿದ. ಇಡೀ ಅನುವಾದದ ಸ್ಥಾಪಿತ ಸಿದ್ಧಾಂತವಾದ ಪ್ರತಿಯೊಬ್ಬರೂ ಅವರದೇ ರೀತಿಯಲ್ಲಿ ಅನುವಾದಿಸುತ್ತಾರೆ ಎಂಬ, ಯಾವ ಎರಡು ಅನುವಾದಗಳೂ ಒಂದೆ ರೀತಿ ಇರಲಿಕ್ಕೆ ಸಾದ್ಯವಿಲ್ಲವೆಂಬ ಸಂಗತಿಯು ಕುಸಿದು ಬಿದ್ದದ್ದು ಕಂಡಿತು. ಅವನ ಹಾಗು ಅವಳ ಎರಡೂ ಅನುವಾದಗಳು ಒಂದೇ ತೆರನಾಗಿತ್ತು. ಒಂದೇ ರೀತಿ ಎಂದರೆ ಅರ್ಥದಲ್ಲಿ ಮಾತ್ರವೇ  ಅಲ್ಲ, ಭಾವದಲ್ಲಿ ಮಾತ್ರವೇ ಅಲ್ಲ, ಅಕ್ಷರ ವಾಕ್ಯ ಎಲ್ಲದರಲ್ಲೂ ಒಂದೇ ರೀತಿಯಲ್ಲಿತ್ತು. ಅವಳು ಇಂಗ್ಲೀಷಿನಿಂದ ಅನುವಾದಿಸಿದ್ದು ಅವನು ತೆಲುಗಿನಿಂದ ಅನುವಾದಿಸಿದ್ದು ಎರಡೂ ಒಂದೇ ರೀತಿಯಲ್ಲಿತ್ತು. ನಾಳಿನ ಪುಸ್ತಕ ಬಿಡುಗಡೆ ಸಮಾರಂಭದ ನೆನಪಾಗಿ ಆ ಕ್ಷಣದಲ್ಲಿ ಅವನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಲೈಟ್ ಆರಿಸಿ ಮಲಗಿದವನಿಗೆ ನಿದ್ರೆ ಬಾರದಂತಾಗಿ ಎದ್ದು ಅವಳು ಅನುವಾದಿಸಿದ್ದ ಆ ಭಾಗವನ್ನು ಒಂದು ಹಾಳೆಯಲ್ಲಿ ಬರೆಯುತ್ತ ಕೂತ.
"ನಾನು ಸೆಕ್ಸ್ ಸಿನಿಮಾಗಳ ನಾಯಕಿಯಾಗಿದ್ದರೂ ಸಹ ವೇಷ್ಯೆಯಾಗಿರಲಿಲ್ಲ. ಸಿನಿಮಾಗಳಲ್ಲಿ ತೋರಿಸುವಾಗಿನ ಆ ಮುಲುಗಾಟಗಳು ಕೇವಲ ನಟನೆಯಾಗಿತ್ತು. ಅದು ನಿಜವಾಗಿರಲಿಲ್ಲ.ಹಾಗೆಂದು ನನಗೇನೂ ಶಾರೀರಿಕ ಸಂಬಂಧವೇ ಇರಲಿಲ್ಲವೆಂದೇನೂ ಅಲ್ಲ. ಆಗಲೇ ಹೇಳಿದಂತ ನನ್ನ ಬದುಕಲ್ಲಿ ಹಲವು ಗಂಡಸರು ಬಂದು ಹೋಗಿದ್ದರು. ಹಲವರೊಡನೆ ಶಾರೀರಿಕ ಸಂಬಂಧವಿತ್ತು. ಆದರೆ ಈ ಹುಡುಗ ಬೇರೆಯದೇ ರೀತಿಯಲ್ಲಿ ಇಷ್ಟವಾಗಿದ್ದ. ಅವನು ಹಾಡು ಬರೆಯುತ್ತಿದ್ದ. ನನ್ನಎದುರು ಅವನೇ ಬರೆದ ಹಾಡು ಹೇಳುತ್ತಿದ್ದ. ನನಗೇನೂ ಅರ್ಥವಾಗುತ್ತಿರಲಿಲ್ಲ. ಅವನು  ನನ್ನೊಡನೆ ನನ್ನ ಜೊತೆಗಿನ ಶಾರೀರಿಕ ಸಂಬಂಧಕ್ಕಾಗಿಯೇ ಬಂದನೆಂದು ಪ್ರಾಮಾಣಿಕವಾಗಿ ತಿಳಿಸಿದ್ದ. ನನ್ನ ಎಷ್ಟೋ ವರ್ಷಗಳ ಡೈರಿಯಲ್ಲಿನ ಬರಹಗಳಲ್ಲಿ ನಾನು ಜಾಗರೂಕತೆಯಿಂದ ಇಟ್ಟುಕೊಂಡದ್ದು ಅವನು ಬಂದು ಹೋದ ಆ ರಾತ್ರಿಯದು. ಅಂದು ಅಂದರೆ ಮಾರ್ಚ್ ೧೪, ೧೯೮೭.
ಅವನ ಕಣ್ಣುಗಳಲ್ಲಿನ ಆ ಪ್ರಾಮಾಣಿಕತೆ ನನ್ನನ್ನು ಆಕರ್ಷಿಸಿತು. ಎಷ್ಟೋ ಸಂಬಂಧಗಳಿದ್ದರೂ ಅವನೊಡನೆ ಅಂದು ಮನಃ ಪೂರ್ವಕವಾಗಿ ಗಂಡನಿಗೆ ಹೆಂಡತಿ ಅರ್ಪಿಸಿಕೊಳ್ಳುವಂತೆ ನನ್ನನ್ನು ಅರ್ಪಿಸಿಕೊಂಡೆ. ಹಲವರೊಡನೆ ನನಗೆ ಸಂಬಂಧಗಳಿದ್ದವು, ಕೆಲವರಿಗೆ ನಾನು ಭಾವನಾತ್ಮಕ ಅವಲಂಬನವಾಗಿಯೋ ಕೆಲವರಿಗೆ ಬೌಧ್ಧಿಕ ಅವಲಂಬನೆಯಾಗಿಯೊ  ಬೇಕಿತ್ತು. ಆ ಹುಡುಗನಿಗೆ ಮಾತ್ರ ನಾನು ಕೇವಲ ಹೆಣ್ಣಾಗಿ ಒಂದು ಶರೀರವಾಗಿ ಬೇಕಿತ್ತು. ಹಾಗೆ ಶರೀರವಾಗಿ ಅನುಭವಿಸಿ ಹೋಗಿದ್ದ. ಬೆಳಗೆದ್ದಾಗ ಅವನಿರಲಿಲ್ಲ. ಗೊತ್ತಿತ್ತು ಅವನು ಮತ್ತೆ ನನಗೆ ಕಾಣುವುದಿಲ್ಲ ಎಂದು. ಅವನು ಕಾಣಬೇಕೆಂದೂ ನಾನು ಬಯಸಿರಲಿಲ್ಲ. "

******************************


 2 ಕಾಮೆಂಟ್‌ಗಳು:

  1. ಪ್ರಿಯ ಅರವಿಂದ್
    ನೀವು ಬರೆದ ಕತೆಯನ್ನು ಓದಿದೆ: ಪ್ರಜ್ಞೆಯ ಆರಂಭ ಎಂದು ನೀವು ಅಂದುದು ಇದನ್ನು ಓದುವಲ್ಲಿ ಸಹಾಯಕವಾಗಬಹುದು ಎನಿಸಿತು. ನಿಮ್ಮ ವಿವರಣೆಗಳು ಚೆನ್ನಾಗಿವೆ. ಕನ್ನದದ ನಿರೂಪಣೆ ಸೊಗಸಾಗಿದೆ. ಕನ್ನಡದಲ್ಲಿ ಈ ತರದ ಕತೆಗಳು ಅಪರೂಪ. ಇನ್ನುಳಿದುದು ವಿಮರ್ಶಕರಿಗೆ/ ಓದುಗರಿಗೆ.

    ಪ್ರತ್ಯುತ್ತರಅಳಿಸಿ
  2. We are the stories we tell our selves.

    ನಾವು ನಮಗೆ ನಾವು ಹೇಳೋ ಕಥೆಗಳೇ...

    ಪ್ರತ್ಯುತ್ತರಅಳಿಸಿ