ಇದು ಬರಿ ಬೆಳಗಲ್ಲೋ ಅಣ್ಣ

ಬಿಕೋ ಎನ್ನುವ ಬೀದಿಯಲ್ಲಿ ಬೆಳ್ಳಂಬೆಳಗಿನಲ್ಲಿ ಬಿದ್ದ ಪಾರಿಜಾತ ಹೂವುಗಳನ್ನು ಆರಿಸುತ್ತಿರುವ ಅಜ್ಜಿಯನ್ನು ಅದೆಷ್ಟೋ ದಿನದ ನಂತರದ ನನ್ನ ಬೆಳಗಿನ ನಡಿಗೆಯಲ್ಲಿ ಕಂಡಾಗ ಹಲವು ದೃಷ್ಯಗಳು ಜೊತೆಯಾದವು.. ಹಳ್ಳಿಯಲ್ಲಿ ಅಪ್ಪ ಬೆಳಗ್ಗೆ ಎದ್ದೊಡನೆಯೆ ಬೈದು ಓಡಿಸಿ ಪಾರಿಜಾತದ ಹೂವನ್ನು ಆರಿಸಲು ಕಳುಹಿಸುತ್ತಿದ್ದರು. ಬೇರೆ ಯಾರೋ ನಮಗಿಂತಲೂ ಮುಂಚೆ ಬಂದು ಪಾರಿಜಾತದ ಹೂವುಗಳನ್ನು ಆಯ್ದು ಹೋದರೆಂದು ತಿಳಿದು ಜಗಳಕ್ಕಿಳಿಯುತ್ತಿದ್ದ ಅಜ್ಜಿಯನ್ನು ಸಮಾಧಾನ ಮಾಡಲು ಅಪ್ಪನೇ ಬರಬೇಕಿತ್ತು. ಶ್ರೀ ಕೃಷ್ಣ ಪಾರಿಜಾತಂ ನಾಟಕ ನೋಡಿ ರಂಗ ಮಂದಿರದಲ್ಲಿನ ಕೃತಕ ಪಾರಿಜಾತದ ವೃಕ್ಷವನ್ನು ಕಂಡು ಅಯ್ಯೋ ಅಯ್ಯೋ ದೌರ್ಭಾಗ್ಯವೇ ನಮ್ಮ ಹಳೇ ಮನೆಯ ಮುಂದಿನ ಪಾರಿಜಾತದ ವೃಕ್ಷದ ಕೊಂಬೆಗಳನ್ನೇ ಇಟ್ಟಿದ್ದರೆ ಇದಕ್ಕಿಂತಲೂ ಅದ್ಭುತವಾಗಿರುತ್ತಿತ್ತಲ್ಲ ಎಂದಾಗ, ಅದು ದೇವಲೋಕದ ಪಾರಿಜಾತ ಅದರ ಹೂಗಳು ದೊಡ್ಡದಿರುತ್ತದೆ ಎಂದು ಹೇಳಿದ ತಾತನ ನಾಟಕದ ಆಸಕ್ತಿಗೆ ಅಜ್ಜಿ ಬಯ್ಯುತ್ತಿರಬೇಕಾದರೆ ಸುಮ್ಮನೆ ಅಜ್ಜ ನಗುತ್ತಿದ್ದ. ನಾವು ಮನೆ ಮಾರಿದ ಮಾರನೇ ದಿನವೇ ಕೊಂಡವರು ಪಾರಿಜಾತದ ಗಿಡವನ್ನು ಬುಡ ಸಮೇತ ಕಿತ್ತು ಹಾಕಿದ್ದು ಒಟ್ಟಿಗೆ ಎದುರಾಯಿತು. ನನ್ನ ಬೆಳಗಿನ ನಡಿಗೆಗೆ ಕರೋನ ಕಾಲದ ಒಂಟಿತನದ, ಗೃಹ ಬಂಧನದ, ಮನೆಯಿಂದ ಕೆಲಸದ, ಕರೋನ ಖಾಯಿಲೆಯ ಬಗೆಗಿನ ಭಯದಿಂದುಂಟಾದ ಬದುಕಿನ ಅಸ್ಥಿರತೆಯ, ಅನಿಶ್ಚಿತತೆಯ ದರ್ಶನವೋ ಎಂಬಂತೆ ಪಾರಿಜಾತ ಗಿಡವೂ, ಪಾರಿಜಾತದ ಹೂವೂ, ಅದನ್ನು ಆಸ್ಥೆಯಿಂದ ಆರಿಸುತ್ತಿರುವ ಅಜ್ಜಿಯೂ, ಇವೆಲ್ಲವುಗಳ ಹಿಂದಿನ ಸಮಗ್ರವಾದ ನೆನಪುಗಳೂ ಒಟ್ಟಾದವು.

 ಬೆಳಗನ್ನು ಕಂಡು ಬಹಳ ಕಾಲವಾಗಿತ್ತು. ಬೆಳಗು ಮರೆತೇ ಹೋಗಿತ್ತು ಎನ್ನುವಷ್ಟು. ತಿರುವೀತಿಯಮ್ಮನ್ ಕೋಯಿಲ್ ಬೀದಿಯಲ್ಲಿ ನಾಯಿಗಳು ತಮ್ಮ ತಮ್ಮ ಗಡಿಗಳನ್ನು ಬಹು ಖಚಿತವಾಗಿ ನಿರ್ಮಿಸಿಕೊಂಡಿದ್ದವು. ಅಲ್ಲಿನ ಮನೆಯಲ್ಲಿ ಅವರ ಮನೆಯವರೇ ಸಾಕಿದ ಹಲವು ನಾಯಿಗಳು ಒಂದು ಕಡೆಯಾದರೆ, ಎರಡು ಬೀದಿ ನಾಯಿಗಳು ಮಗದೊಂದು ಕಡೆ. ಬಾಗಿಲು ಹಾಕಿದ ದೇವಸ್ಥಾನದ ಮುಂದೆ ಗುಡಿಸಿ ನೀರು ಹಾಕಿ ದೊಡ್ಡ ರಂಗೋಲಿಯನ್ನು ಹಾಕುವಾಗ ಈ ನಾಯಿಗಳು ಆ ಅಜ್ಜಿಯ ಬಳಿಯೇ ತಿರುಗುವುದು, ಅವಳು ಬಯ್ಯುವುದು. ಪಕ್ಕದ ಬಾಗಿಲು ತೆಗೆದಿದೆ, ದೇವರ ದರ್ಶನಕ್ಕಾದರೆ ಆ ಸಣ್ಣ ಪಕ್ಕದ ಬಾಗಿಲಿನಲ್ಲಿ ಹೋಗಬೇಕು, ಮುಖ್ಯ ದ್ವಾರಕ್ಕೆ ಬೀಗ. ನಿತ್ಯವೂ ರಂಗೋಲಿ ಹೊಸ ಹೊಸ ಮಾದರಿಗಳು ತಪ್ಪುವುದಿಲ್ಲ.

 ನನಗೆ ವಾರಕ್ಕೆ ಒಂದು ದಿನ ಬೆಳಿಗ್ಗೆ ಎಂಟು ಗಂಟೆಗೇನೇ ತರಗತಿ ಇರುತ್ತಿದ್ದವು. ಆಗಂತೂ ಕಷ್ಟಪಟ್ಟು ಹೋಗಬೇಕೆಂದೆನಿಸಿದರೂ, ನಮ್ಮ ಸಂಸ್ಥೆಯನ್ನು ನೋಡಲಿಕ್ಕೆ ಹಬ್ಬವದು. ನಮ್ಮ ಸಂಸ್ಥೆಯಲ್ಲಿ ಜಿಂಕೆ ಕೃಷ್ಣಮೃಗಗಳು ಸಹಜೀವನ ನಡೆಸುತ್ತಿವೆ. ಅವುಗಳೆಲ್ಲವೂ ಒಟ್ಟೊಟ್ಟಿಗೆ ದಾರಿಯಲ್ಲಿರುತ್ತಿದ್ದವು, ಜೊತೆಗೆ ಬರುತ್ತಿದ್ದವು ಮೈದಡವಬಹುದಿತ್ತು ಎಲ್ಲವೂ ಸಾಧ್ಯವಿತ್ತು. ಜೊತೆಗೆ ಶತಮಾನಗಳಷ್ಟು ಹಳೆಯ ಬೃಹತ್ ಗಾತ್ರದ ವೃಕ್ಷಗಳು. ಇವೆಲ್ಲವುಗಳ ಮಧ್ಯೆ ಯಾಕಾದರೂ ಬೆಳಗಾಯಿತೋ ಎಂದು ಬೇಸರ ಪಟ್ಟುಕೊಳ್ಳುತ್ತ ರಾತ್ರಿ ತಡವಾಗಿ ಮಲಗಿ ಏಳಲಾರದೆ ಎದ್ದು ರಾತ್ರಿ ಮಲಗಿದ್ದ ಬಟ್ಟೆಗಳಲ್ಲಿಯೇ ಓಡುತ್ತಿರುವ ವಿದ್ಯಾರ್ಥಿಗಳು. ಒಟ್ಟಿನಲ್ಲಿ ನನ್ನ ಸೊಮಾರಿತನಕ್ಕೆ ವಾರಕ್ಕೆ ಒಂದು ದಿನದ ಬೆಳಗಿನ ದರ್ಶನ ಇದಾಗಿತ್ತು.
 

ನಾನು ನನ್ನ ಗೆಳೆಯನೊಟ್ಟಿಗೆ ಬೆಳ್ಳಂಬೆಳಿಗ್ಗೆ ಇಡ್ಲಿ ತಿನ್ನಲಿಕ್ಕೆ ಎಂದು ಮೆಜೆಸ್ಟಿಕ್ಕಿಗೆ ಹೋಗುತ್ತಿದ್ದೆವು. ಅಜ್ಜಿಯೊಬ್ಬರು ಡಬ್ಬಿಯಲ್ಲಿ ಇಡ್ಲಿ ತಂದು ಮಾರುತ್ತಿದ್ದರು. ಇಡೀ ರಾತ್ರಿ ಏನೋ ವಿಚಾರಗಳನ್ನು ಚರ್ಚಿಸುತ್ತಾ ಮಲಗುವುದನ್ನೇ ಮರೆತವರಿಗೆ ಬೆಳಗಲ್ಲಿ ಹಸಿವಾಗಿ ಇಡ್ಲಿ ತಿನ್ನಲು ಹೋಗುತ್ತಿದ್ದೆವು. ಮೆಜೆಸ್ಟಿಕ್ಕಿನ ಬೆಳಗು ಅದೆಷ್ಟು ಆಕರ್ಷಣೀಯವಾಗಿರುತ್ತಿತ್ತೆಂದರೆ ಆ ಬೆಳಗನ್ನು ನೋಡಲಿಕ್ಕೆಂದೇ ಅದೆಷ್ಟೋ ಬಾರಿ ಹೋದದ್ದಿದೆ. ಅಷ್ಟೇ ಅಲ್ಲ ಅಲ್ಲಿನ ಹೋಟೇಲಿನಲ್ಲಿ ರೂಮು ತೆಗೆದು ಬೆಳಗೆದ್ದು ಮೆಜೆಸ್ಟಿಕ್ಕಿನ ಬೀದಿಗಳನ್ನು ಕತ್ತಲು ಕಳೆದು ಬೆಳಕು ಆವರಿಸುವ ಪರಿಯ, ನಿಃಶಬ್ಧವು ಕಳೆದು ಶಬ್ಧ ಆವರಿಸುವ ಕ್ರಮವ ಕಾಣಲಿಕ್ಕೆಂದು ಕುಳಿತದ್ದಿದೆ. ಗಿಜುಗುಡುವ ಮೆಜೆಸ್ಟಿಕ್ ನ ಗಲ್ಲಿಗಳಲ್ಲಿ ಹೀಗೆ ನಿಃಶಬ್ಧವಾಗುವ ಪರಿ ಮತ್ತೆ ಶಬ್ಧಕ್ಕೊಳಪಡುವ ಪರಿಗಳೆರಡೂ ನನಗೊಂದು ಅಚ್ಚರಿ. ಆದರೆ ಈಗ ನೆನಪಾಗುತ್ತೆ ಈ ಕೋವಿಡ್ ಕಾಲದಲ್ಲಿ ಅದು ಸಂಪೂರ್ಣ ಸದ್ದಿಲ್ಲದೇ ಇತ್ತಲ್ಲ. ಬೀದಿ ಬೀದಿಗಳಲ್ಲಿ, ನಿನಗೇನು ಬೇಕು ಎಲ್ಲವನ್ನು ಎಲ್ಲವನ್ನೂ ಮಾರುತ್ತಿದ್ದವರು ಆಗ ಏನಾಗಿದ್ದರೋ, ಕಿವಿಗವಡುಗಚ್ಚುವಂತೆ ಕಿರುಚಿದ್ದ ಆ ಜೀವಿಗಳ ಸ್ವರಗಳು ಎಲ್ಲಿಗೆ ಹೋದವೋ? ಮತ್ತೆ ಮತ್ತೆ ಅವರ ಸದ್ದನ್ನು ಕೇಳಬೇಕೆಂದೆನಿಸುತ್ತದೆ. ಅಂದಿನ ಮೆಜೆಸ್ಟಿಕ್ಕಿನ ನಿಃಶಬ್ಧಕ್ಕೆ ಹಾತೊರೆಯುತ್ತಿದ್ದವಗೆ ಸದ್ದಿನ ಬಯಕೆಯಾಗಿದೆ. ಆಗಿನ ಶಬ್ಧ ನಿಃಶಬ್ಧಗಳೆರಡೂ ಹಗಲು ರಾತ್ರಿಗಳೊಡಲಿನ ಸಹಜ ಸ್ವಾಭಾವಿಕ ಸಂಗತಿಯಾಗಿ ಬೆರೆತರೆ ಕೋವಿಡ್ ಕಾಲದ ನಿಃಶಬ್ಧ ಮಾತ್ರ ಅಸ್ವಾಭಾವಿಕ ಸಂಗತಿಯ ಕುರಿತಾದ ಪ್ರಶ್ನೆಯಾಗಿ ಉಳಿದಿದೆ.


ಬೆಳಗಿನೊಟ್ಟಿಗೆ ಮತ್ತೊಂದಿಷ್ಟು ಸಂಗತಿಗಳು ನೆನಪಾಗುತ್ತಿದೆ. ನಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ಹಾಕಲು ಬೆಳ್ಳಂಬೆಳಗ್ಗೆ ಹೋಗುತ್ತಿದ್ದ ದಿನಗಳವು. ಬೆಳಗಿನ ಮೊದಲ ಬಸ್ಸು ಹಳ್ಳಿಯೊಳಗೆ ಬರುತ್ತಿದ್ದುದ್ದು ೫.೪೫-೬.೦೦ ಗಂಟೆಯ ಒಳಗೆ. ರಾತ್ರಿಯೇ ಎದ್ದು ಟಮೋಟೋ ಗಳನ್ನು ಹತ್ತು ಕೇಜಿ ಲೆಕ್ಕದ ಸಿಮೆಂಟ್ ಚೀಲದಲ್ಲಿ ತುಂಬಿಸುತ್ತಿದ್ದೆವು. ಎಲ್ಲವನ್ನೂ ಒಟ್ಟಿಗೇ ಬಸ್ಸಿಗೇರಿಸಿ, ಗೌರಿಬಿದನೂರಿನ ಮಾರುಕಟ್ಟೆಗೆ ಕೊಂಡೊಯ್ಯುವುದು. ನಮ್ಮ ತರಕಾರಿ ಹರಾಜು ಹಾಕಲಿಕ್ಕೆ ಕಾಯುವುದು. ಹರಾಜು ಕೂಗುವಾಗ ಅದೆಷ್ಟು ಹೆಚ್ಚು ಕೂಗುತ್ತಾರೋ, ಪ್ರತಿ ಕೂಗಿನ ನಂತರ ಮತ್ತೆ ಕೂಗಬಹುದು ಎಂದು ಎದುರು ನೋಡುವುದು. ತರಕಾರಿಗಳನ್ನು ತಂದ ಬೇರೆಯ ರೈತರ ಜೊತೆಗೆ ಅವರ ಕುಶಲೋಪರಿ ಕೇಳುತ್ತಾ, ಹಣ ಪಡೆಯಲು ತರಕಾರಿ ಮಾರಿಸಿದ ದಲ್ಲಾಳಿಗೆ ಕಾಯುತ್ತಾ, ಟೀ ಕುಡಿಯುತ್ತಾ, ನಾವು ಬೆಳೆದ ತರಕಾರಿಗಳನ್ನು ಕೊಂಡುಕೊಳ್ಳಲು ಬರುತ್ತಿದ್ದ ಸಣ್ಣ ತರಕಾರಿ ವ್ಯಾಪಾರಿಗಳನ್ನು ನೋಡುತ್ತಾ, ಅವರ ವ್ಯಾಪಾರ ಆಧಾರದ ಕಥೆ ಕೇಳುತ್ತಾ, ಮುಂದೆ ಬಿಡುಗಡೆಯಾಗಬಹುದಾದ ತೆಲುಗು ಚಿತ್ರದ ನಿರೀಕ್ಷೆಗಳನ್ನೋ, ಬಿಡುಗಡೆಯಾದ ಚಿತ್ರದಲ್ಲಿನ ನಾಯಕ ಹೊಡೆದುರುಳಿಸಿದ ವಿಲನ್ಗಳ ಸಂಖ್ಯೆಯನ್ನು ಖಚಿತವಾಗಿ ಹೇಳುವವನ ಬಗೆಗೆ ಮಾತಾಡುತ್ತ ಕಳೆದದ್ದರ ದಿನಗಳು. ಈಗ ತರಕಾರಿ ಬೆಳೆಯಲಾರದ ನಮ್ಮ ಭೂಮಿಯ ಸುತ್ತಮುತ್ತಲಿನ ನೀರಿನ ಪರಿಸ್ಥಿತಿ, ರೈತ-ವ್ಯಾಪಾರಿಯ ಇಂದಿನ ಮರೆತೇ ಹೋದ ಸ್ಥಿತಿ ಎಲ್ಲವೂ ಹಳ್ಳಿಯಿಂದ, ವ್ಯವಸಾಯದ ಜೊತೆಯ ನಂಟಿನಿಂದ ಬಹಳ ಬಹಳ ದೂರ ಬಂದವನಿಗೆ ಆ ಬೆಳಗಿನ ನೆನಪು ತಪ್ಪಾ ಇನ್ನೇನು ಇಲ್ಲವೆನಿಸಿದ್ದು ಈಗಲೇ.

ಹೈಸ್ಕೂಲಿಗೆ ಮನೆ ಪಾಠಕ್ಕೆ ಹೋಗುತ್ತಿದ್ದರಿಂದ, ೮.೩೦ಕ್ಕೇ ಪಾಠ ಆರಂಭವಾಗುತ್ತಿತ್ತು, ಆದುದರಿಂದ ಬೆಳಿಗ್ಗೆ ಬೇಗನೆ ಹೊರಡಬೇಕಿತ್ತು. ನಮ್ಮ ಊರಿನಿಂದ ಮುಖ್ಯ ರಸ್ತೆಗೆ ಒಂದು ಕಿಲೋಮೀಟರ್ ದೂರ, ಹಾಗೂ ಮುಖ್ಯ ರಸ್ತೆಯಿಂದ ಸುಮಾರು ೫ ಕಿಲೋ ಮೀಟರ್ ದೂರದ ಮಂಚೇನಹಳ್ಳಿಯಲ್ಲಿ ನಮ್ಮ ಹೈಸ್ಕೂಲು ಮನೆ ಪಾಠ ಎಲ್ಲವೂ. ನಮ್ಮ ನಿತ್ಯದ ಸವಾರಿಗೆ ಸಿಗುತ್ತಿದ್ದದ್ದೇ ವೆಂಕಟೇಶ್ವರ ಬಸ್ಸು. ಎರಡು ವೆಂಕಟೇಶ್ವರ ಬಸ್ಸುಗಳಿದ್ದವು. ಮೊದಲನೇ ವೆಂಕಟೇಶ್ವರ ಮತ್ತು ಎರಡನೇ ವೆಂಕಟೇಶ್ವರ ಎಂದು, ೭.೨೦ ಕ್ಕೊಂದು ನಂತರ ೭.೪೫ಕ್ಕೊಂದು ಹೀಗೆ ಎರಡು ಬಸ್ಸುಗಳು. ಸಾಮಾನ್ಯವಾಗಿ ನಾನು ಎರಡನೇ ವೆಂಕಟೇಶ್ವರಕ್ಕೆ ಹೋಗುತ್ತಿದ್ದೆ. ಅದೆಷ್ಟೋ ಬಾರಿ ಮನೆಯಿಂದ ಹೊರಡಲು ತಡವಾಗಿ ಹೋಗುತ್ತಿತ್ತು. ಬಸ್ಸಿನ ಹಾರನ್ನಿನ ಶಬ್ಧ ಕೇಳಿ ದೂರದಲ್ಲೆಲ್ಲೋ ನಡೆದು ಹೊಗುತ್ತಿದ್ದವರು, ನಾವು ಇಷ್ಟು ವೇಗವಾಗಿ ಓಡಿದರೆ ನಮಗೆ ಬಸ್ಸು ಸಿಗಬಹುದು ಎಂದು ಲೆಕ್ಕ ಹಾಕುವುದು ಒಂದು ಕಡೆಯಾದರೆ, ನಿಲ್ಡಾಣದಲ್ಲಿದ್ದವರನ್ನೆಲ್ಲಾ ಏರಿಸಿಕೊಂಡು ಇನ್ನೇನು ಹೊರಟೇ ಬಿಟ್ಟೆ ಎಂದು ಹಾರನ್ನನ್ನು ಒತ್ತುತ್ತಿರುವುದು ಮತ್ತೊಂದುಕಡೆ. ನಾ ಬಂದೆನೋ ಎಂದು ಕೂಗುವುದು, ಕೂಗು ಚಾಲಕನಿಗೆ ಕೇಳಿ ಮುಂದೆ ಹೋದಂತೆ ನಟಿಸಿ ವೇಗ ತಗ್ಗಿಸಿದ್ದೇ ತಡ, ಬಾಗಿಲ ಬಳಿಗೆ ಓಡಿದಾಗ ಕ್ಲೀನರ್ ಕೈನೀಡಿ ಆ ರಶ್ಶಿನಲ್ಲೂ ನಮ್ಮನ್ನು ಹತ್ತಿಸಿಕೊಳ್ಳುತ್ತಿದ್ದ. ಉಬ್ಬಸದ ಉಸಿರಿನೊಟ್ಟಿಗೇನೇ ಬಸ್ಸು ಹಿಡಿದ ಖುಶಿ. ಜೋರು ಧ್ವನಿಯಲ್ಲಿ ಪ್ರಸಾರವಾಗುತ್ತಿದ್ದ ತೆಲುಗು ಚಲನಚಿತ್ರ ಗೀತೆಗಳಿಗೆ ದೇವರ ನಾಮಗಳಿಗಿಂತ ಹೆಚ್ಚು ಶ್ರದ್ಧೆಯಿಂದ ವಂದಿಸುತ್ತಿರಬೇಕಾದರೆ ಆ ಕಡೆಯಿಂದ ನಿಮ್ಮ ಬ್ಯಾಗನ್ನು ತೆಗೆದು ಮೇಲಕ್ಕಿರಿಸಿ ಎಂದು ಬೈಯ್ಯುವ ಯಾವುದೋ ವೃದ್ಧರನ್ನು ಹಾಗೇ ದುರುಗುಟ್ಟಿ ನೋಡುತ್ತಲೇ ಆ ಬೃಹತ್ ಗಾತ್ರದ ಬ್ಯಾಗನ್ನು ಮೇಲೇರಿಸಲು ನಾವು ಪಡುವ ಸಾಹಸವನ್ನು ನೋಡಲಾರದೆ ಕಾಲೇಜಿಗೆ ಹೋಗುವ ಚೆಲುವೆಯೊಬ್ಬಳ ಸಹಾಯಕ್ಕಾಗಿ ಮುಗುಳ್ನಕ್ಕ ಸಮಯಕ್ಕೆ ಸರಿಯಾಗಿ ಟಿಕೆಟ್ ಕೇಳಲು ಬರುವ ಕಂಡಕ್ಟರಿಗೆ ಒಂದು ರೂಪಾಯಿ ನಾಣ್ಯ ಕೊಟ್ಟು ಮುಗುಳ್ನಗೆ ನೀಡಿದರೆ ಆಯಿತು ಅಂದಿನ ಶುಭ ದಿನ.


ಆ ಬೆಳಗಿನ ಬಸ್ಸಿನಲ್ಲಿ ಕೆಲವರು ನಿತ್ಯ ಪ್ರಯಾಣಿಕರು, ನಿತ್ಯ ಕೆಲಸಕ್ಕೆಂದು ಹೋಗುವವರು. ಇನ್ನು ಕೆಲವರು ಅಪರೂಪದ ಪ್ರಾಯಾಣಿಕರು. ಅಕ್ಕಪಕ್ಕದ ಊರಿನವರೇ ಆದುದರಿಂದ ಗೊತ್ತಿದ್ದವರೇ ಆಗಿರುತ್ತಿದ್ದರು. ಬಹಳ ಅಪರೂಪಕ್ಕೆ ಕುಳಿತುಕೊಳ್ಳಲು ಸೀಟು ಸಿಗುತ್ತಿದ್ದದ್ದು, ನಿತ್ಯವೂ ನಿಂತು, ಅದೂ ಡ್ರೈವರಿನ ಪಕ್ಕದಲ್ಲಿ ನಿಂತಿದ್ದರಂತೂ ದಾರಿಯಲ್ಲಿ ಬಸ್ಸು ಸಾಗುವಾಗ ಸಿಗುವ ಮೂರು-ನಾಲ್ಕು ಊರುಗಳ ಬೆಳಗಿನ ದರ್ಶನ. ನಮ್ಮ ಸುತ್ತಲಿನ ಪ್ರಪಂಚದ ನಿತ್ಯ ನಿರಂತರ ಬದಲಾಗುವ ಮಾದರಿ ನಿತ್ಯವೂ ಬೆಳಗಿನಲ್ಲಿ ದರ್ಶನವಾಗುತ್ತಿತ್ತು. ಅಪ್ಪಿ ತಪ್ಪಿ ನಾವು ಬೇಗ ಬಂದದ್ದೇ ಆಗಿ, ಅಥವಾ ಬಸ್ಸು ಸ್ವಲ್ಪ ತಡವಾದದ್ದೇ ಆದರೆ, ಅರಳಿ ಕಟ್ಟೆಯೇ ಬಸ್ಸಿನ ನಿಲುದಾಣವಾಗಿದ್ದ ಊರಲ್ಲಿ ಕೂತಿರುತ್ತಿದ್ದ ಜನರ ನಿತ್ಯ ಹರಟೆ ಕಟ್ಟೆ ಪುರಾಣದ್ದು ಮತ್ತೊಂದೇ ಕತೆ.


ಗಾಡಿಗಳಲ್ಲಿ ಬಿಸಿ ಬಿಸಿ ತಿಂಡಿಗಳನ್ನು ಇಟ್ಟುಕೊಂಡು ನಿತ್ಯವೂ ಹೊಟ್ಟೆಯನ್ನು ತಣಿಸುತ್ತಿದ್ದವರ ನೆನಪಿಲ್ಲದೆ ಬೆಳಗಾಗಲೀ, ಬೆಳಗಿನ ಬಗೆಗಿನ ಬರಹವಾಗಲೀ ಪೂರ್ಣಗೊಳ್ಳುವುದೇ ಇಲ್ಲ . ಹೂವಿನ ಮಾರುಕಟ್ಟೆ ಪಕ್ಕದ ಬೀದಿಯು ನಮ್ಮ ಕಾಲೇಜಿಗೆ ತ್ವರಿತವಾಗಿ ಹೋಗಬಲ್ಲಂತಹ ಹಾದಿ. ಸಾಲಾಗಿ ನಿಂತಿರುತ್ತಿದ್ದ ತಳ್ಳುಗಾಡಿಗಳಲ್ಲಿ ಬೆಳ್ಳಂಬೆಳಿಗ್ಗೆ ಬಿಸಿ ಬಿಸಿ ಇಡ್ಲಿ, ಟಮೋಟೋ ಭಾತ್, ಪೂರಿ ಕೆಲವೊಮ್ಮೆ ದೋಸೆ ನಮ್ಮನ್ನು ಸ್ವಾಗತಿಸುತ್ತಿತ್ತು. ಸರಕಾರಿ ಕಾಲೇಜಾದುದರಿಂದ ಅಲ್ಲಿ ಪ್ರೌಢಶಾಲೆ ಹಾಗೂ ಪಿ.ಯು.ಸಿ ಎರಡನ್ನು ನಡೆಸಬೇಕಾದುದರಿಂದ ಸ್ಥಳಾವಕಾಶದ ಅಭಾದಿಂದಾಗಿ ಪಿ.ಯು.ಸಿ ಹಾಗೂ ಪ್ರೌಢಶಾಲೆಯ ಶಾಲಾ ಸಮಯಗಳನ್ನು ಎರಡೂ ತರಗತಿಗಳಿಗೆ ಹೊಂದಿಕೆಯಾಗುವಂತೆ ಏರ್ಪಡಿಸಿದ್ದರು. ನಮಗೆ(ಪಿ.ಯು.ಸಿಗೆ) ಬೆಳಿಗ್ಗೆ ೮ಕ್ಕೇ ಕಾಲೇಜು ಆರಂಭ. ಹಾಗಾಗಿ ಕೆಲವೊಮ್ಮೆ ಮನೆಯಲ್ಲಿ ಆಹಾರ ಸಿದ್ಧವಾಗದೆ ಖಾಲಿ ಹೊಟ್ಟೆಯಲ್ಲಿ ಬಂದಿರುತ್ತಿದ್ದೆ. ಆಗ ನಮ್ಮನ್ನು ಸ್ವಾಗತಿಸಲು ನಿಂತ ಈ ತಳ್ಳು ಗಾಡಿಗಳ ತಿಂಡಿಯ ಬಗೆಗೆ ಅದರ ರುಚಿಯ ಬಗೆಗೆ ಅದೆಷ್ಟು ಬರೆದರೂ ಸಾಲದು. ಆಗ ಒಂದು ಪ್ಲೇಟ್ ಟೊಮೋಟೋ ಭಾತಿಗೆ ಆರು ರೂಪಾಯಿಗಳು. ಅದೂ ಹೊಟ್ಟೆ ತುಂಬಾ ದೊರೆಯುತ್ತಿತ್ತು. ಅದಕ್ಕೆ ತಕ್ಕಂತೆ ಚಟ್ಣಿ ಅದರ ರುಚಿಯೇ ಬೇರೆ. ತಳ್ಳು ಗಾಡಿಯ ಮಾಲೀಕರು ಪರಿಚಯಸ್ಥರಾಗಿ ಬಹು ಆತ್ಮೀಯರಾಗಿ, ಒಂದು ಪ್ಲೇಟಿನ ಬೆಲೆಯನ್ನು ೭ರೂ ಮಾಡಿದಾಗಲೂ ನಮಗೆ ಆರು ರೂಪಾಯಿಗೇ ನೀಡುತ್ತಿದ್ದರು. ನಂತರ ಬೆಂಗಳೂರಿಗೆ ಬಂದು ಹಲವಾರು ಬಾರಿ ಗೆಳೆಯನ ರೂಮಿನಲ್ಲಿ ವಾಸ್ತವ್ಯ ಹೂಡುವಾಗಲೂ ಈ ತಳ್ಳುಗಾಡಿ ಸಹವಾಸವನ್ನು ಬಿಡಲಾಗಲಿಲ್ಲ. ಬೆಂಗಳೂರಿನಲ್ಲಂತೂ ಈ ತಳ್ಳು ಗಾಡಿಯಲ್ಲಿ ದೊರೆಯುತ್ತಿದ್ದ ದೋಸೆಯ ನೆನೆಪು ಇನ್ನೂ ಮಾಸಿಲ್ಲ.
 

ಈ ತಳ್ಳುಗಾಡಿಯ ಬಳಿ ಕುಳಿತುಕೊಳ್ಳಲು ಸುಸಜ್ಜಿತ ಸ್ಥಳವಾಗಲೀ ಆಸನಗಳಾಗಲೀ ಇರುತ್ತಿರಲಿಲ್ಲ, ಅಲ್ಲೇ ಕಂಡ ಕಟ್ಟೆಯೋ, ಯಾವುದೋ ಸ್ಟೂಲು ಹೀಗೆ ಎಲ್ಲಿ ಕೂರಲು ಜಾಗ ಸಿಕ್ಕರೂ ಕೂತೇವು, ಇಲ್ಲವಾದರೆ ನಿಂತು ತಿನ್ನುವುದೇ. ಆ ಸಣ್ಣ ಜಾಗದಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡು ಕೂತು ತದೇಕ ಚಿತ್ತರಾಗಿ ಧ್ಯಾನಸ್ಥರಾಗಿ ಉಣ್ಣುವುದಿದೆಯಲ್ಲ ಆ ನೆನಪೇ ಈಗ ಆತ್ಮೀಯವೆನಿಸುತ್ತಿದೆ. ಅಲ್ಲಿ ಪ್ರತ್ಯೇಕ ಲೋಟಗಳು ಇರುತ್ತಿರಲಿಲ್ಲ. ಸಾಮಾನ್ಯವಾಗಿ ಒಂದು ಮಗ್ ಇರುತ್ತಿತ್ತು. ತುಟಿಗೆ ತಾಕಿಸದೆ ನೀರನ್ನು ಕುಡಿಯುತ್ತಿದ್ದೆವು. ಒಟ್ಟಿನಲ್ಲಿ ಅಲ್ಲೊಂದು ಬಗೆಯ ಒಳಗೊಳ್ಳುವಿಕೆ ಸಾಧ್ಯವಾಗಿ ಮನೆಯ ಭಾವವು ಬಹುತೇಕ ನಾಟುತ್ತಿತ್ತು. ಎಂದಿಗೂ ಅವು ಪ್ರತ್ಯೇಕವಾದ ಸ್ಥಳಗಳ ಭಾವನೆ ನೀಡುತ್ತಿರಲಿಲ್ಲ.


ನಿತ್ಯವೂ ಬೆಳ್ಳಂಬೆಳಿಗ್ಗೆ ಹೂವು ತಂದು ಕೊಡುತ್ತಿದ್ದ, ಮನೆಯ ಮುಂದಿನ ರಸ್ತೆಯಲ್ಲಿ ಒಂದು ಬೆಂಚನ್ನಿಟ್ಟುಕೊಂಡು ಹೂವು ಮಾರುತ್ತಿದ್ದ ಅಜ್ಜಿ ಅವಳ ಏನೂ ಕೆಲಸ ಮಾಡಲಿಚ್ಛಿಸದ, ಸದಾ ಕುಡಿಯುವ ಮಗನಿಗೆ, ಈ ವಯಸ್ಸಲ್ಲಿ ದುಡಿದು ಸಾಕಬೇಕಾದ ಅಜ್ಜಿ, ಲಾಕ್ ಡೌನ್ ಅಷ್ಟೂ ದಿನಗಳಲ್ಲಿ, ಒಂದಷ್ಟು ದಿನಗಳಾದರೂ ಹೂವು ತರಕಾರಿ ತಂದು ಕೊಟ್ಟು ನಮ್ಮನೆಯ ದೇವರನ್ನು ಸಂತುಷ್ಟಗೊಳಿಸಿದಳು. ಈಗ ನನಗರ್ಥವಾಗದ ಅವಳ ತಮಿಳಿನ ವೇಗ ಸ್ವಲ್ಪ ತಗ್ಗಿದೆಯಾದರೂ, ಯಾರೂ ಇಲ್ಲದೆ ಮನೆಯಲ್ಲಿ ಒಬ್ಬನೇ ಲಾಕ್ ಡೌನ್ನಲ್ಲಿ ಬಂಧಿಯಾಗಿದ್ದಾಗ ಮನೆಯವರು ಬಂದೇ ಬರುತ್ತಾರೆಂದು, ಎಲ್ಲವೂ ಸರಿ ಹೋಗುತ್ತದೆಂದು ನಿತ್ಯ ಹಾರೈಸುತ್ತಿದ್ದ ಅವಳ ಶಬ್ಧ ಮತ್ತೆ ಈಗ ಕೇಳಲಾರಂಭಿಸಿದೆ. ಬೆಳಗಿನ ವಾಕಿಂಗ್ ಮುಗಿಸಿ ಮನೆಯಕಡೆ ಬರುವಾಗ ಆ ಅಜ್ಜಿಯೂ ಅವಳ ಅಕ್ಕನೂ ಕೂತು ಹರಟುವ ಧ್ವನಿ ಕ್ಷೀಣವಾಗಿಯಾದರೂ ಕೇಳುತ್ತದೆ. ಅವರು ಜೋರಾಗಿ ನಗುತ್ತಾ ಮಾತನಾಡುವ ಶಬ್ಧ ಕೇಳಿಸೀತೆಂದು ಬಯಸುತ್ತಾ ಮನೆಗೆ ಸೇರುತ್ತೇನೆ.

ಬೆಳಗಿನ ಬಗೆಗೆ ಕತೆಗಳು ಮುಗಿಯುವುದಿಲ್ಲ. ಬೆಳಗೆಂದರೆ ಬೆಳಗಿನೊಟ್ಟಿಗೆ ನಡೆಯುತ್ತಿದ್ದ ಜನರ ಕಾರ್ಯ ಕಲಾಪಗಳು. ಮನುಷ್ಯರ ನಡುವಿನ ನಿತ್ಯ ವ್ಯವಹಾರದ ಆರಂಭವೇ ಬೆಳಕು. ಮನುಷ್ಯ ಮನುಷ್ಯರ ನಡುವಿನ ಸಂಬಂಧದ ಅಭಿವ್ಯಕ್ತಿಯೇ ಬೆಳಗು. ಇದು ಬರೀ ಬೆಳಗಲ್ಲೋ ಅಣ್ಣ.


2 ಕಾಮೆಂಟ್‌ಗಳು: