೦೧.
ಉರಿಬಿಸಿಲು - ಶಿವರಾತ್ರಿ ಮುಗಿದ ಹೊತ್ತು
ನಾಗಮಲ್ಲಿಗೆ ಮರದಲ್ಲಿ
ಎಲೆಗಳೇ ಇಲ್ಲ, ಹೂವೆಲ್ಲಿಯದು?
ಗಂಟಲು ಒಣಗಿ ನೋಯುತಿದೆ
ಸುಟ್ಟಿರಬಹುದು ಹುಣ್ಣಾಗಿರಬಹುದು
ಉರಿಯುತ್ತಿರುವ ಮರದ ನೆರಳಲ್ಲಿ
ಮಟ ಮಟ ಮಧ್ಯಾಹ್ನದಲ್ಲಿ
ನಿನ್ನ ಚಲುವ ಪೂಜಿಸಿದೆ
ಆ ಚಿರು ನಗೆಯ ಪೂಜಿಸಿದೆ
ಪೂಜಿಸುವುದ ಪೂಜಿಸಿದೆ
೦೨.
ಮೈಯೆಲ್ಲಾ ಉಬ್ಬುತಿದೆ
ಬಣ್ಣ ಬಿಡುತಿದೆ
ಬೆಳೆದ ಮರವು ದಿಡೀರನೆ
ಬಿದ್ದಿದೆ ಗಾಳಿಗೆ ಮಳೆಗೆ
ನದಿಯು ಸಾಗರವಾಗಿ
ಸಾಗರವು ಮರಳುಗಾಡಾಗಿ
ನೀ ಕುಣಿಯುತ್ತಿರುವೆ
ಬಾಹಿರಳು ನೀನು
ನಾ ಕುಣಿಯುತ್ತಿರುವೆ
ಬಾಹಿರನು ನಾನು -
೦೩.
ಮರಳಿ ಹೊರಳಿ ಉರುಳಿ
ವಿಜೃಂಬಿಸುವುದಕೇಕೆ ನಾಚಬೇಕೇಕೆ
ಸಕಲವೂ ನೀನಾಗಿರಲಾಗಿ
ಅತಿರೇಕದಲ್ಲೊಮ್ಮೆ ಮೈಯೆಲ್ಲಾ
ನಿನ್ನ ಕಣ್ಸನ್ನೆ
ನೀ ಸರಳ
ನೀ ಸಕಲ
ನೀ ಸಹಜ
೦೪.
ದತ್ತ ಗುರುವೆಂದ ಮೊತ್ತ ಮೊದಲು
ಹೀಗೆ ದೇಶ ಕಾಲವು ಹುಟ್ಟಿತು
ರಾಮನೆಂದ ದೇಶಕಾಲವೆಂಬೋ ಶಬ್ದವೆಲ್ಲಿತ್ತು
ನಿನ್ನ ಬಳಿಸಾರಲಿಕ್ಕೆ
ಆ ಜಾಗವಾದರೇನು ಈ ಜಾಗವಾದರೇನು
ಆ ಕಾಲವಾದರೇನು ಈ ಕಾಲವಾದರೇನು
೦೫.
ಮರೆತ ಉನ್ಮತ್ತನು
ಅಲ್ಲದೆ ನಿನ್ನ ಬಳಿಸಾರುವುದೆಂತು
ಅಲ್ಲೇನೂ ಇರಲಿಲ್ಲ
ಕಣ್ ತೆರೆದಾಗ ನೀನಿದ್ದ
ಜಗವಾಗಿದ್ದೆ -
ಮತ್ತಳು ನೀನು