ಪ್ರತಿಮಾ ಸೃಷ್ಟಿ

ಬೆಂಕಿ ಇಲ್ಲ  ವಿಪರೀತ ಚಳಿ
ದಿನ ಪತ್ರಿಕೆಗಳು 
ಸುಮಾರು ಹಲವಾರು ಕಾಲದ್ದು
ಕತ್ತರಿಸಿ ಉರಿವ ಬೆಂಕಿ ಚಿತ್ರಗಳ  
ಶಿರೋನಾಮೆಯ ಸಹಿತ
ಕೈ ಕಟ್ಟಿ ಕುಳಿತು
ಹರವಿಕೊಂಡು ಮುಂದೆ
ವಿಪರೀತ ಚಳಿ

ಹೊತ್ತಲ್ಲದ ಹೊತ್ತು
ಪತ್ರ ಮಾರಲಿಕ್ಕಲ್ಲ ತೂಕಕ್ಕೆ
ತುಕ್ಕಿನ ಪೋಸ್ಟ್  ಬಾಕ್ಸುಗಳು
ಸಂಗ್ರಹಕಾರನ ಸ್ವತ್ತು
ಎಂಟಾಣೆ ಸ್ಟಾಂಪ್ ಕಾಗದವೂ

ಹೂವು ಪಾರಿಜಾತ
ಅತೀ ಸಣ್ಣಗೆ ಸೂಕ್ಷ್ಮ
ಕೊಯ್ದ ರಕ್ತನಾಳ
ಕಳೆದ ಚೂಡಾಮಣಿ
ನೆನಪು ಆಕಾಶಮಲ್ಲಿಗೆ
ಬಿದ್ದಿರಲೇ ಬೇಕು ಈ ಜೋರು ಮಳೆಗೆ 

ಜೀರುಂಡೆ ಪಳ ಪಳ
ತಾಕಿ ಬಣ್ಣ ಮೈ ಬದಲಾಗಿ
ಚೀರುತ್ತಿದೆ ಹಕ್ಕಿ
ಯಾಕಾಗೋ ಏನು  ಕತೆಯೋ
ಡೆಲಿವರಿಗೆ ಬಂದ ಬಾಕ್ಸೊಳಗಿನ
ಗಡಿಯಾರದ ಟಿಕ್ ಟಿಕ್ ಸದ್ದಿಗೆ
ಮಧ್ಯವಯಸ್ಕನ ಎಪ್ಪತ್ತರ ದಶಕದ
ಭಾವಗೀತೆಗೆ
ಅಮಲು ಮೈಲಿಗೆ

ರೆಕ್ಕೆಯಿಲ್ಲದೆ ಬಿದ್ದಿದೆ ರಾಶಿ
ಎಲ್ಲೆಂದರಲ್ಲೆ ರಾತ್ರಿ ಮಳೆಗೆ
ಮಳೆಹುಳು   ಗೆದ್ದಲು
ಹುತ್ತದೊಳಗಿಂದೆಲ್ಲವೂ ಒಮ್ಮೆಗೆ
ಹಾರಿವೆ ರೆಕ್ಕೆ ಬಡಿದು
ಇರುವೆ ಜಿರಲೆ ಹಕ್ಕಿ ಕಾಗೆ
ಬರೋಬ್ಬರಿ ಭೋಜನ
ಮಳೆ ಬರುವ ಹೊತ್ತು

ಜೋರು ಮಳೆ 
ಧಗಧಗನುರಿವ ಹಸಿರು ಮರ  
ಮರದ್ದು ಹೊಸಿಲು
ಮನೆ ದೂರ
ನೆಂದಿದ್ದೇನೆ, ಭಯ ಬಿದ್ದಿದ್ದೇನೆ
ಚಳಿಯಿದೆ, ಬೆಂಕಿ ಉರಿಯುತ್ತಿದೆ. 

ಮಳೆ ಬಂದು ನಿಂತ ನೀರು
ಮರಗಳೆಲೆಯ
ಬಿಂಬವ ಫೋಟೋ ತೆಗೆಯಬೇಕು
ಕೊಂಬೆಯ ಮೇಲಿನ ಹಕ್ಕಿ ಹಾರಿದೆ
ಬಿದ್ದ ಹನಿ ನೀರು
ಎಲ್ಲವನ್ನೂ ಕದಡಿದೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ