ತಿರುಬೋಕಿಯ ಸ್ವಗತ ೩



ಪರಸ್ಪರ ವಿರೋಧಾತ್ಮಕವಾಗಬಲ್ಲ ಪ್ರತೀ ರಚನೆಯೂ ಸ್ವ-ಸ್ಥಿರವಾಗಿರುತ್ತದೆ.
ಅಥವಾ
ಪ್ರತೀ ಅಸಂಗತ ರಚನೆಯೂ ಸ್ವ-ಸ್ಥಿರವಾಗಿರುತ್ತದೆ.
ಅಥವಾ
ಯಾವುದೇ ಶಬ್ದಕ್ಕೂ ಅರ್ಥಗಳಿರುವುದಿಲ್ಲ.
ಅಥವಾ
ಪ್ರತೀ ಶಬ್ದಕ್ಕೂ ಜೀವವಿರುತ್ತದೆ.



ಕತ್ತಲ ರಾತ್ರಿಗಳು ಒಂಟಿಯಾಗಿದ್ದಾಗ ಭೀಕವೆನಿಸುತ್ತದೆ. ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಹತ್ತುವುದಿಲ್ಲ. ಏನೋ ದಿಗಿಲು, ಭಯ. ಶಬ್ದವೇ ಇಲ್ಲದ ಕಡೆ ಏನೋ ಶಬ್ದವನ್ನ ಭಾವಿಸೋದು. ಶೂನ್ಯದಿಂದ ಏನೋ ರೂಪಗೊಳ್ಳುತ್ತಾ ಇದೆ ಅಂತ ಅಂದು ಕೊಳ್ಳುವುದು. ಹಗಲಿನಲ್ಲಿ ಇದನ್ನೇ ಏಕಾಂತ ಅಂತ ತಬ್ಬಿಕೊಂಡದ್ದು. ಈಗ ರಾತ್ರಿಯಾದಾಗ ತಬ್ಬಿಕೊಂಡದ್ದು ಶರೀರವನ್ನೇ ಸುಡುತ್ತಿದೆ. ಭಯ ಯಾಕೆ ಅಂತ ಚಿಂತಿಸತೊಡಗಿ, ಆ ಚಿಂತನೆಯೇ ಭಯದ ಮೂಲವಾಗಿ ಹೋದಾಗ ತೀವ್ರ ಭಯದಿಂದ ನರಳುತ್ತೇನೆ. ಒಮ್ಮೆ ಮನೆಯ ಬಾಗಿಲುಗಳನ್ನೆಲ್ಲಾ ಗಟ್ಟಿಯಾಗಿ ಭದ್ರಪಡಿಸಿ ಬರುತ್ತೇನೆ. ಸಾದ್ಯವಾಗುವುದಿಲ್ಲ, ಮತ್ತೇ ಹೋಗಿ ಎಲ್ಲಾ ಬಾಗಿಲುಗಳನ್ನ ಹಾಕಿದ್ದೀನ ಅಂತ ಪರೀಕ್ಷಿಸುತ್ತೇನೆ. ಎಷ್ಟೇ ಬಾರಿ ಪರೀಕ್ಷಿಸಿದರೂ ಭಯವೇನು ಹೋಗಲಿಲ್ಲ. ಕಡೆಗೆ ಬಚ್ಚಲಿಗೋಗಿ ಬಂದು ಎಲ್ಲಾ ಬಾಗಿಲುಗಳನ್ನ ಹಾಕಿದ್ದೀನಿ ಎಂಬೋ ನಂಬಿಕೆಯಲ್ಲಿ ಮಲಗುತ್ತೇನೆ. ನಿದ್ರೆ ಬಾರದಾದಾಗ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಎಲ್ಲೋ ದೂರದಲ್ಲಿ ನಾಯಿಯೊಂದು ಬೊಗಳುತ್ತಿರುತ್ತದೆ. ಗಾಳಿಗೆ ಕ್ಯಾಲೆಂಡರಿನ ಹಾಳೆಗಳು ಪಟ ಪಟ ಅಂತ ಸದ್ದುಮಾಡಿದಾಗ ಬೆದರಿ ಕಾಲದ ಪರಿವೆಯೆ ಭೀಕರತೆಯನ್ನ ತೆಗಳಿ ,ಇಡೀ ಕ್ಯಾಲೆಂಡರನ್ನೇ ಹೊರಗೆಸೆದು ಬಂದ ನಂತರವೂ, ಮತ್ತೇನೋ ಭಯವಾಗ ತೊಡಗುತ್ತೆ. ಕತ್ತಲಲ್ಲಿ ಯಾವುದೋ ನೆರಳಿನ ರೂಪವೊಂದು ಕೂತಂತೆ ಕಾಣುತ್ತದೆ. ಬೆಚ್ಚಿ ದೀಪವಾಕಿದಾಗ ಏನೂ ಕಾಣುವುದೇ ಇಲ್ಲ. ಭಯಕ್ಕೆ, ದೀಪವಾಕಿಯೇ ಮಲಗುತ್ತೇನೆ. ನಿದ್ರೆಯೇ ಬರುವುದಿಲ್ಲ. ಹೀಗೆ ರಾತ್ರಿಗಳಹೊತ್ತು ನಿದ್ರೆ ಹೋಗುವುದನ್ನೇ ಮರೆತುಬಿಟ್ಟೆ.

ಎಲ್ಲೋ ಅಡುಗೇಮನೆಯಲ್ಲಿ ನಲ್ಲಿಯಲ್ಲಿ ನೀರು ತೊಟ್ಟಿಕ್ಕುವ ಸದ್ದು ಕೇಳಿ ಒಮ್ಮೆಲೇ ಬೆಚ್ಚಿಬಿದ್ದು, ಅಡುಗೇ ಮನೆಗೋಗಿ ನಲ್ಲಿಯನ್ನ ಭದ್ರಪಡಿಸುವಾಗ ನಲ್ಲಿಯೇ ಕಿತ್ತು ನೀರು ಹರಿಯುತ್ತದೆ. ನನ್ನ ಕೈಚೆಲ್ಲಿ ಹೋಗುತ್ತಾ ನಿಂತ ನೀರನ್ನ ನೋಡುತ್ತಾ ಕೂರುತ್ತೇನೆ. ನೀರು ಮನೆಯನ್ನ ತುಂಬುತ್ತದೆ, ನಾನು ನೋಡುತ್ತಾ ನೋಡುತ್ತಾ ಕೂರುತ್ತೇನೆ. ಮನೆಯಿಂದ ನೀರು ಹೊರನುಗ್ಗಿತು, ಇಡೀ ಊರನ್ನ ಆಕ್ರಮಿಸಿದೆ. ಎಲ್ಲವೂ ನೀರಿನಲ್ಲಿ ತುಂಬಿಹೋಗಿದೆ. ನಾನು ನೋಡುತ್ತಾ ನಿಂತಿದ್ದೀನಿ. ಊರು, ರಾಜ್ಯ, ದೇಶ, ಎಲ್ಲವೂ ನೀರು ನೀರು. ಸರ್ವವೂ ಜಲ ರಾಶಿಯಲ್ಲಿ ಸಮಾದಿಯಾಗಿದೆ. ನನ್ನ ಭಯದಿಂದ ಕಿತ್ತ ನಲ್ಲಿಯಿಂದ ಹೊರಟ ನೀರು, ಜಗತ್ತನ್ನ ಜೀರ್ಣಿಸಿಕೊಳ್ಳತೊಡಗಿದೆ. ಆದರೂ, ನಾನಿನ್ನೂ ನೀರಿನಲ್ಲಿ ಮುಳುಗಿಲ್ಲ. ಪಾಪ ಪ್ರಜ್ಞೆಯೊಂದು ಕಾಡುತ್ತಿದೆ. ಹೊರಗೆ ನೋಡುತ್ತಿದ್ದೇನೆ, ಯಾವುದಾದರೂ ಚೀತ್ಕಾರಕ್ಕೆ, ಕೂಗಾಟಕ್ಕೆ. ಎಲ್ಲಿಯೂ ಯಾವ ಶಬ್ದವೂ ಕಾಣದ್ದನ್ನ ಕಂಡು ನಾನೂ ನೀರಿಗೆ ದುಮುಕಿದೆ. ಉಸಿರು ಕಟ್ಟುತ್ತೆ, ನರ ನರಗಳು ಬಿಗಿಸುತ್ತೆ. ಶರೀರದ ಪ್ರತೀ ಬಾಗವೂ ನೋಯುತ್ತೆ. ಸಾವು ಎದುರಿಗೆ ಬಂದು ನಿಂತಿದೆ. ಮೆಲ್ಲಗೆ ಹೋಗಿ ಮುಟ್ಟಿನೋಡಿದೆ. ಏನೋ ರೋಮಾಂಚನ! ಅರೆ ಸಾವು! ತುಂಬಾ ಮುದ್ದಾಗಿತ್ತು. ಹೋಗಿ ಅಪ್ಪಿಕೊಂಡೆ, ನಾ ಸಾವಾಗಿದ್ದೆ. ಯಾವ ಪ್ರಯತ್ನವೂ ಇಲ್ಲದೆ ನೀರಿನ ಮೇಲೆ ತೇಲುತ್ತಿದ್ದೆ. ಜಗದ ಜಲರಾಶಿಯಲ್ಲಿ ತೇಲುತ್ತಿದ್ದೆ.



ಯಾಕೆ ಹೀಗಾಯಿತು.......? ಸತ್ತ ನಂತರ ಕೇಳಿಕೊಂಡ ಮೊದಲ ಪ್ರಶ್ನೆ......!!!

ನನ್ನ ಎದುರಿಗೆ ನಿಂತ ಒಂದು ಹೆಣ್ಣು ಶರೀರದ ಮುಂದೆ ಪೂರ್ಣ ಶರಣಾಗಬೇಕು ಅಂತ ಅನ್ನಿಸಿದ್ದು ಈ ಹುಡುಗಿಯ ಮುಂದೆ ಮಾತ್ರಾ. ಪ್ರೀತಿ ಶರಣಾಗತಿಯ ಮಹೋನ್ನತ ತತ್ವವಾಗಿ ಕಂಡಾಗ ನನ್ನಹಂಕಾರಕ್ಕೆ ಸರಿ ಬಾರಲಿಲ್ಲ. ನನ್ನಂತರಂಗದ ದ್ವನಿ ಹೇಳಿತು, ಬೆತ್ತಲೆಯಾಗಿ ನಿಂತುಬಿಡು ಅವಳ ಮುಂದೆ, ಪ್ರೀತಿ ಅದ್ವೈತದ ಪರಮೋಚ್ಚ ಸ್ಥಿತಿ ಎಂದು. ಆದರೆ ನನ್ನಹಂಕಾರಕ್ಕೆ ಅದು ಸರಿಬಾರಲಿಲ್ಲ. ನನ್ನತನವನ್ನ ಕಳೆದುಕೊಳ್ಳಲು ನಾ ಸಿದ್ದನಾಗಲಿಲ್ಲ. ನಾ ಗೆಲ್ಲಲು ಹೊರಟೆ, ಪ್ರೀತಿ ನನ್ನಿಂದ ದೂರ ಸಾಗತೊಡಗಿತು. ನಾ ಗೆಲ್ಲುತ್ತಿದ್ದೇನೆ ಎಂಬೋ ಭ್ರಮೆಯಲ್ಲೇ ಇದ್ದೆ. ಬೆತ್ತಲೆ, ಬಯಲು, ಅದ್ವೈತ ಎಲ್ಲವೂ ಕೇವಲ ಪದಗಳಾಗಿ ಮಾತ್ರ ಉಳಿದುಬಿಟ್ಟಿತ್ತು. ಮತ್ತೇ ಮತ್ತೇ ಎಷ್ಟೇ ಸಾರೀ ಪ್ರಶ್ನಿಸಿಕೊಂಡರೂ ಉತ್ತರವೇ ಸಾದ್ಯವಾಗದ ಪ್ರಶ್ನೆಗಳ ಗೊಂದಲಕ್ಕೆ ತಲೆಕೊಟ್ಟುಬಿಟ್ಟಿದ್ದೇನೆ. ಅವಳಿಗೆ ಶರಣಾಗದೆ, ರೂಪಾಂತರ ನಿರಂತರವೇ? ನಿರಂತರವಾಗಿ ರೂಪಾಂತರಕ್ಕೊಳಗಾಗುವುದು ಸ್ಥಾವರವೆ? ಅಥವಾ ಜಂಗಮವೇ? ನಾನೇ? ಅವಳೇ?, ಎಂಬೋ ಪ್ರಶ್ನೆಗಳಿಗೆ ಎಂದಿಗೂ ಉತ್ತರ ದಕ್ಕದು. ಆದರೆ, ಆ ನನ್ನನ್ನ ತಡೆದುಕೊಳ್ಳುವ ತಾಕತ್ತು ಅವಳಿಗಿದೆಯೇ ಎಂಬೋ ಪ್ರಶ್ನೆಯೂ ಕಾಡಿದೆ.

ಅವಳು ಹೇಳಿದ್ದು ಇಷ್ಟೇ ಮಾತು,

"ಮಾಂಸದ ಮುದ್ದೆ ಕಣೋ ನೀನು. ಈಗ ತಾನೆ ಹುಟ್ಟಿದ ಮಗುವಿನ ದೇಹ ಉಂಟಲ್ಲ, ಅದೇ ನೀನು. ನಿನ್ನ ದೇಹದ ಗಂಧ ಗೊತ್ತ ನಿನಗೆ, ಆ ದೇಹದ ಗಂಧಕ್ಕೆ ನಾ ಹುಚ್ಚಿಡಿಸಿಕೊಂಡಿದ್ದೇನೆ. ನಿನ್ನ ಕಂಡಾಗ, ಆ ನಿನ್ನ ದೇಹಗಂಧಕ್ಕೆ ಮೂರ್ಚೆ ಹೋಗಿ ಒಂದು ಮಾತು ಆಡದೆ ನಿಂತುಬಿಡುತ್ತಿದ್ದೆ. ಆ ಗಂಧಕ್ಕೆ ನರ ನರಗಳು ಬಿಗಿಯುತ್ತೆ, ಉಸಿರು ಕಟ್ಟಿದಂತ ಬಾಸವಾಗುತ್ತೆ. ಉಸಿರೂ ಆಡದಂತೆ ನಿನ್ನ ಅಪ್ಪಿಕೊಂಡು ಸತ್ತು ಹೋಗಿಬಿಡಬೇಕು ಅಂತ ಅನ್ನಿಸುತ್ತೆ. ನಿನ್ನ ಶಾರೀರದ ಪ್ರತೀ ಕಣವನ್ನೂ ನಾನು ಬಯಸುತ್ತಿದ್ದೀನಿ ಕಣೋ! ಶವದ ಕಣ್ಣುಗಳಲ್ಲಿ ನಿನ್ನ ಮುಖವನ್ನ ನೋಡಿಕೊಳ್ಳೋ ನೀನು, ನನ್ನ ಕಣ್ಣುಗಳನ್ನು ನೋಡಲಿಲ್ಲ, ನನ್ನ ಶರೀರವನ್ನೂ ನೋಡಲಿಲ್ಲ"

ಆ ಕಣ್ಣುಗಳನ್ನ ನೋಡುತ್ತಾ ಇದ್ದೆ. ಮೃತ್ಯು ನನ್ನೆದುರಿಗೆ ನಿಂತಿತ್ತು. ಮೃತ್ಯುವಿಗೆ ಮಾತು ಬರುವುದಿಲ್ಲ. ನಾ ಕುಸಿದು ಹೋದೆ. ತಲೆಯನ್ನ ಅವಳ ಕಾಲಡಿಯಲ್ಲಿ ಇಟ್ಟು ನಮಸ್ಕರಿಸತೊಡಗಿದೆ, ನನ್ನ ಕಣ್ಣ ಹನಿಯೊಂದು ಅವಳ ಗೋರಂಟಿ ಹಾಕಿದ ಉಗುರಿಗೆ ತಾಕಿತು. ಅವಳ ಕಣ್ಣೀರು ಅವಳ ಬೆಂಕಿಯಲ್ಲಿ ಶಾಂತವಾಯಿತೆಂದು ನಾ ಭಾವಿಸಿದೆ. ಎಲ್ಲಿಂದಲೋ ಪುರುಷಸೂಕ್ತ ಕೇಳುತ್ತಲ್ಲಿತ್ತು. ಕಡೆಗೆ, ಶಾಂತಿ ಮಂತ್ರ, ಓಂ ಶಾಂತಿ ಶಾಂತಿ ಶಾಂತಿಃ.

ತಿರುಬೋಕಿಯ ಸ್ವಗತ ೨



ನಂದೊಂದು ದುರಂತ ಬದುಕು. ಈ ದುರಂತ ನಾಟಕ ಅಂತಾರಲ್ಲ ಹಾಗೆ. ಏನೋ ಸಂಭವಿಸಿಬಿಟ್ಟು ದುರಂತವಾಗಿಹೋಗಿದೆ ಅಂತ ಭಾವಿಸಬೇಡಿ. ಏನೂ ಸಂಭವಿಸಲೇ ಇಲ್ಲ ಅದಕ್ಕೇ ದೊಡ್ಡ ದುರಂತ ಅಂತ ಅಂದದ್ದು. ನನ್ನ ಬದುಕಲ್ಲಿ ಕಥೇನೇ ಇಲ್ಲ ಕಣ್ರೀ. ಕಥೇ ಇಲ್ಲದ ಬದುಕೂ ಒಂದು ಬದುಕೇನಾ? ಛೇ, ನನ್ನ ಬದುಕಲ್ಲಿ ಯಾಕೋ ಕಥೇನೇ ಸಂಭವಿಸಲಿಲ್ಲ. ಹಾಗಾಗಿ ನನ್ನ ಬದುಕು ದುರಂತವಾಗಿ ಹೋಯಿತು. ಅಷ್ಟೇ ಆಗಿದ್ದಿದ್ದರೆ ಪರವಾಗಿಲ್ಲ, ಒಂದೇ ಒಂದು ತತ್ವ, ಸಿದ್ದಾಂತ, ತಾತ್ವಿಕಥೆ ಏನೂ ಇಲ್ಲದೆ ಹಾಳು ಬಿದ್ದೋಯ್ತು. ಆದರೆ ಈಗ, ತಿರುಬೋಕಿ ಆದ ನಂತರ ಅನ್ನಿಸ್ತಿದೆ, ಬದುಕಿಗ್ಯಾಕೆ ಕಥೆ, ಅದಕ್ಯಾಕೆ ತತ್ವ.? ಒಂದು ತತ್ವವನ್ನಿಟ್ಟು ಬದುಕನ್ಯಾಕೆ ಕಥೆಯಾಗಿಸಬೇಕು ಅಂತ? ಇರಲಿ ಈ ಎಲ್ಲಾ ದ್ವಂದ್ವಗಳ ನಡುವೆಯೂ ಬದುಕು ಅದ್ಭುತ ಹಾಗು ಅಷ್ಟೇ ನಿಗೂಢ.

ನಮ್ಮೂರ ಕಂಬಾಲರಾಯನ ಒಂಟಿ ಕಲ್ಲಿನ ಗುಡ್ಡದ ಮೇಲೆ ಯಾರೋ ಕಟ್ಟಿದ ನಾಲ್ಕು ಕಂಬಗಳಿವೆ, ಅವುಗಳ ಪಕ್ಕ ಒಂದಿಷ್ಟು ಮಣ್ಣು, ಒಂದಿಷ್ಟು ಕಲ್ಲು. ಅಲ್ಲಿ ದೇವರು ತುಂಬಾ ಸುಲಭದಲ್ಲಿ ಸಿಕ್ಕಿ ಬಿಡುತ್ತಾನೆ. ಅಲ್ಲೇ ಇರೋ ಮೂರು ಕಲ್ಲನ್ನ ತೊಳೆದು ಅದಕ್ಕೆ ಹರಿಸಿನ ಕುಂಕುಮ ಹಚ್ಚಿಬಿಟ್ರೆ ಮುಗೀತು ಅದೇ ದೇವ್ರು. ನಮಸ್ಕಾರ ಮಾಡಿ, ದೇವ್ರೆ ಕಾಪಾಡಪ್ಪ ಅಂದರೆ ಮುಗೀತು. ಆಮೇಲೆ ಅದೇ ಕಲ್ಲನ್ನ ಬಿಸಾಕಿದ್ರೂ, ಅದನ್ನ ತುಳ್ಕೊಂಡು ಹೋದ್ರೂ ಯಾರೂ ಕೇಳೋಲ್ಲ. ಅಂತಾ ದೇವ್ರ ಜೊತೆ ಒಬ್ಬ ಮನುಷ್ಯ ಇದ್ದ. ನಾನು ಆತನ್ನ ಏನೋ ಒಂದು ಹೆಸರಲ್ಲಿ ಕರೀತಿದ್ದೆ. ಒಂದು ದಿನ ಆಸಾಮಿ ಕರೆದುಬಿಟ್ಟು, ಮಗಾ ನಂಗೊಂದು ಕಥೆ ಬರೆದುಕೊಡೋ ಅಂತ ಕೇಳಿದ. ಓದಿದ ಜಂಬದಿಂದ, ಹೇಳು ನಿನ್ನ ಕಥೇನ, ನಾ ಬರೀತೀನಿ ಅಂತಂದೆ. ಅವ್ನಂದ, ಆರಂಭ ಮತ್ತು ಅಂತ್ಯ ಎರೆಡೂ ಇಲ್ಲದೇ ಇರೋದೇ ಕಥೆ, ಅಂತ. ಮತ್ತೇ ನಾನು ಕಥೆ ಬರೀಲೇ ಇಲ್ಲ. ಆ ಮನುಷ್ಯ ಒಂದು ದಿನ ಸತ್ತು ಹೋದ. ಒಂದು ಸಾಲಲ್ಲಿ ಅವನ ಕಥೆ ಬರೆದುಬಿಟ್ಟೆ. ಅವನು ಹುಟ್ಟಿದ, ಅವನು ಸತ್ತ. ನಾಲ್ಕು ಪದ, ಒಂದೇ ಸಾಲು. ಕಥೆ ಮುಗೀತು ಅಂತೇಳಿ, ಅಲ್ಲೇ ಬಿದ್ದಿದ್ದ ಕಲ್ಲನ್ನ ತೆಗ್ದುಕೊಂಡು ನಮಸ್ಕಾರ ಮಾಡಿ ಮತ್ತೇ ದೂರ ಎಸೆದುಬಿಟ್ಟೆ, ಅರೆ, ಹಾಗಂತ ಇನ್ನೊಂದು ಕಥೆ ಬರೆದು ಬಿಟ್ಟೆ. ಅದು ಹುಟ್ಟಿತು, ಅದು ಸತ್ತಿತು. ಒಂದೇ ಸಾಲು.! ಅಷ್ಟೇಯ!!!

ರಾಜಪ್ಪ ಭಟ್ಟರ ಮನೇಲಿ ಮದುವೇ ಸಂಭ್ರಮ ಅಂತ ಇಂದು ಊಟಕ್ಕೆ ಅಲ್ಲಿಗೇ ಕರೆದಿದ್ದರು. ಗುಡಿಸಲು. ಎಲ್ಲವೂ ನೆನೆಪಾಗತೊಡಗಿತು. ನಾನು ಇಲ್ಲೇ ಅಲ್ಲವ ಇದ್ದದ್ದು ಅಂತ. ಇದೇ ಗುಡಿಸಲಿನಲ್ಲಿ ಅಲ್ಲವ, ಆ ರಾತ್ರಿ ನನ್ನನ್ನ ಮಾಂಸದ ಮುದ್ದೆಯಾಗಿ ಸೂಲಗಿತ್ತಿ ಹೊರಗೆ ತೆಗೆದು ಹಾಕಿದ್ದು . ಇದೇ ಮಣ್ಣ ನೆಲದಲ್ಲಿ ಬುಡ್ಡಿ ಇಟ್ಟುಕೊಂಡು ಸೀಮೇ ಎಣ್ಣೆ ವಾಸನೆ ಕುಡಿದು ಓದಿದ್ದು. ಈ ಗುಡಿಸಲು ಸಾಮಾನ್ಯವಲ್ಲ. ಸಂಜೆಗಳಲ್ಲಿ ಇದೇ ಗುಡಿಸಲಿನಿಂದ ನಾನು ಓಡುತ್ತಿದ್ದದ್ದು ಆಟದ ಮೈದಾನಕ್ಕಲ್ಲ, ಸ್ಮಾಶಾನಕ್ಕೆ, ಅದರ ದಾರಿಗಳಿಗೆ. ಅದೇನು ಹುಚ್ಚು ಆಗ, ಸ್ಮಾಶಾಣಕ್ಕೆ ಹೋಗಿ ಯಾವುದೋ ಗೋರಿಯಮೇಲೆ ಮಲಗೋದು. ಅದೆಂತಹ ನಿದ್ರೆ ಬರುತ್ತಿತ್ತು. ಅದೇ ಗೋರಿಗಳ ಮೇಲೆ ಕೂತು ಅರಬಿಂದೋರವರ on death ಹಾಗು Life Devine ಓದಿದ್ದು. ಯಾರೋ ಶವವನ್ನ ಸುಡುತ್ತಿರುವುದನ್ನ ನೋಡುತ್ತಲೇ ಗೀತೆ, ಉಪನಿಷತ್ತು, ಅರಬಿಂದೋ, ರಮಣ, ರಾಮಕೃಷ್ಣ ರನ್ನ ಓದಿದ್ದು. ಜಿಡ್ಡುವಿನ ಒಂದು ಪುಸ್ತಕಕ್ಕಾಗಿ ಅದೆಷ್ಟು ಪರದಾಡಿದ್ದು, ಎಲ್ಲರನ್ನೂ ಓದಿದ್ದು ಇಲ್ಲೇ ಅಲ್ಲವ. ಇದೇ ಹಳ್ಳಿಯ ಗುಡಿಸಲು ಮತ್ತು ಸ್ಮಾಶಾನ ಸೇರುವ ದಾರಿಗಳಲ್ಲಿ. ಊರಮುಂದಿನ ಬೊಮ್ಮಪ್ಪನ ಗುಡಿಯಲ್ಲಿ ರಾಮನವಮಿ ಪಾನಕ ಮಜ್ಜಿಗೆಯನ್ನ ಕುಡಿದು ಅದೇ ರಾತ್ರಿ ಅಡಿಗರ ರಾಮನವಮಿಯನ್ನ ಓದಿದ್ದು ಇದೇ ಗುಡಿಸಲಿನ ಸೀಮೆ ಎಣ್ಣೆಯ ಬುಡ್ಡಿಯಲ್ಲೇ. ಯಾವುದರ ಪ್ರತೀಕವಾಗಿ ಇಂದು ನನ್ನ ಕಣ್ಣೆದುರಿಗೆ ಆ ಗುಡಿಸಲು ನಿಂತಿತ್ತು?

ಗುಡಿಸಲು ಸ್ವಲ್ಪ ಬದಲಾಗಿತ್ತು. TV ಬಂದಿದೆ. ಅದೇ ಹಳೇಕಾಲದ ಶ್ರೀರಾಮರ ಪಟ್ಟಾಭಿಷೇಕದ ಚಿತ್ರ. ಮದುವೆಯ ಸಂಭ್ರಮವಾದದ್ದರಿಂದ ಎಲ್ಲವೂ ಹೊಸದರಂತೆ ಕಾಣುತ್ತಿತ್ತು. ಹುಡುಗಿ ಲಕ್ಷಣವಾಗಿದ್ದಾಳೆ. ಒಳ್ಳೆಯ ಮನೆಗೆ ಸೇರಿ ಸುಖವಾಗಿರಲಿ. ಈಗ ತಾನೆ ಹದಿನೆಂಟು ತುಂಬಿದೆ. ಹೆಚ್ಚು ಓದಿಲ್ಲ. ಅವಳನ್ನೇ ಗಮನಿಸುತ್ತಿದ್ದೆ. ಎಲ್ಲರೂ ಅವರವರ ಕೆಲಸಗಳಲ್ಲಿ ನಿರತರಾಗಿದ್ದರು. ಮದುಮಗಳಾದದ್ದರಿಂದ ಏನೂ ಮಾಡಬಾರದು ಅಂತೇಳಿ ಅವಳನ್ನ ಒಂದು ರೇಶ್ಮೆ ಸೀರೆ ಉಡಿಸಿ, ಒಂದು ಚೇರಾಕಿ ಕೂರಿಸಿದ್ದರು. ಕೈಯಲ್ಲಿದ್ದ ವಾಚನ್ನ ಬಿಚ್ಚಿ ಹಾಗೇ ಹೀಗೆ ತಿರುಗಿಸಿ ತಿರುಗಿಸಿ ನೋಡುತ್ತಿದ್ದಳು. ಬಹುಶಃ ಏನೋ ರಿಪೇರಿಯಿರಬೇಕು ನೋಡಿ ಸರಿಮಾಡಿಕೊಡುವ ಅಂತೇಳಿ ಹತ್ತಿರಕ್ಕೆ ಹೋಗಿ ಕೇಳಿದೆ
"ವಾಚು, ಏನಾಗಿದೆಯಮ್ಮ"
"ಇಲ್ಲ ಅಣ್ಣ, ವಾಚು ಚೆನ್ನಾಗಿಯೇ ಇದೆ"
"ಮತ್ತೆ ಯಾಕೆ ಹಾಗೆ ಅದನ್ನೆ ತಿರುಗಿಸಿ ತಿರುಗಿಸಿ ನೋಡುತ್ತಾ ಇದ್ದೀಯ"
"ಅಣ್ಣ ನಂಗೆ ವಾಚಲ್ಲಿ ಸಮಯ ನೋಡೋದು ಬರೋದಿಲ್ಲ, ನಂಗೆ ಸಮಯ ನೋಡೋದು ಯಾರೂ ಹೇಳೇ ಕೊಟ್ಟಿಲ್ಲ.
ಈ ವಾಚನ್ನ ಹುಡುಗ ತಂದು ಕೊಟ್ಟಿದ್ದು. ಅದಕ್ಕೆ ಅಮ್ಮ ಹೇಳಿದ್ರು ಇದನ್ನ ಕಟ್ಟಿಕೋಬೇಕು ಅಂತ. ಅದಕ್ಕೆ ಕಟ್ಟಿಕೊಂಡು ಕೂತೆ.
ಏನೂ ಮಾಡೋಕೆ ಕೆಲ್ಸ ಇರಲಿಲ್ಲವಲ್ಲ, ಅದಕ್ಕೆ ಈ ವಾಚಿನೊಂದಿಗೆ ಆಟವಾಡುತ್ತಾ ಇದ್ದೆ. ಅಷ್ಟೆ"
ನಾನು ಮರು ಮಾತಾಡದೆ ಸುಮ್ಮನೆ ನಡೆದು ಬಿಟ್ಟೆ. ಆ ಹುಡುಗಿ ತಾನು ತೊಟ್ಟಿದ್ದ ರೇಶ್ಮೆ ಸೀರೆಯನ್ನ ಬಹು ಮೆಚ್ಚಿಗೆಯಿಂದ ನೋಡುತ್ತ, ತನ್ನ ಕೈಯಲ್ಲಿದ್ದ ಗೋರಂಟಿಯನ್ನ ಮತ್ತೆ ಮತ್ತೆ ಮೂಸುತ್ತಾ, ತಲೆಯಿಂದ ಓಲೆಯನ್ನಲ್ಲಾಡಿಸುತ್ತಾ ಖುಷಿಪಡುತ್ತಿದ್ದಳು.
ಸ್ವಲ್ಪ ಹೊತ್ತಾದ ಮೇಲೆ, ಒಳಗೆ ಆ ಮದುಮಗಳಿಗೂ ಅವಳ ತಾಯಿಗೂ ದೊಡ್ಡ ಜಗಳವಾಗುತ್ತಿತ್ತು. ತಾನು ಆಟವಾಡುತ್ತಿದ್ದ ಪ್ಲಾಸ್ಟಿಕ್ ಬೊಂಬೆಗಳನ್ನೆಲ್ಲಾ ತಾನು ಸೂಟ್ ಕೇಸಿನಲ್ಲಿಟ್ಟಿದ್ದರೆ, ಅದನ್ನ ಅವಳ ತಾಯಿ ನೋಡಿ ಒಲೆಗೆಸೆಯಲು ಹೋಗಿದ್ದಳು. ಅದಕ್ಕೇ ಹುಡುಗಿ ಆ ಬೊಂಬೆಗಳನ್ನ ಕೊಡದೇ ಇದ್ದರೆ ತಾನು ಮದುವೆ ಮಾಡಿಕೊಳ್ಳೋಲ್ಲ ಅಂತ ಹಟ ಹಿಡಿದಿದ್ದಳು.


ಒಮ್ಮೆ ಹಂಪಿಗೆ ಹೋಗಿದ್ದೆ. ನಿಜಕ್ಕೂ ಹಂಪಿ ಅದ್ಬುತ. ಅಲ್ಲಿನ ಪ್ರತೀ ಕಲ್ಲೂ ಜೀವಂತ ಚೈತನ್ಯಕ್ಕೆ ಪ್ರತ್ಯಕ್ಷ ಸಾಕ್ಷಿ. ಪ್ರತೀ ಕಲ್ಲನ್ನ, ಪ್ರತೀ ಶಿಲ್ಪವನ್ನ ಮುಟ್ಟಿ ಮುಟ್ಟಿ ನೋಡಿದೆ. ಶಿಲ್ಪಗಳ ಮುಖಕ್ಕೆ ಮುಖಮಾಡಿ, ಕಣ್ಣೊಳಗೆ ದೄಷ್ಠಿನೆಟ್ಟು ಕಲೆಯೊಳಗಿನ ಜೀವಂತಿಕೆಯನ್ನ ಈ ಕಲ್ಲ ಮುಖಗಳೊಳಗೆ ಕಾಣತೊಡಗಿದೆ, ಬದುಕಿನ ವಿಶಿಷ್ಟ ಅನುಭವದ ಬಿಂಬವಾಗಿ ನನ್ನೊಳಗೆ ಅವತರಿಸುವ ಕ್ಷಣವನ್ನ ಮೌನವಾಗಿ ಅನುಭವಿಸತೊಡಗಿದೆ. ಬೆಳಗಿನ ಸೌಂದರ್ಯಕ್ಕೆ ಒಂದು ರೀತಿ, ಸಂಜೆಗೆ ಮತ್ತೊಂದು ರೀತಿ. ಪ್ರಕೃತಿಯ ವೈಭವಕ್ಕೆ ಸೆಡ್ಡು ಹೊಡೆದು ಮನುಷ್ಯ ಚೈತನ್ಯದ ಸೃಷ್ಟಿ ಶಕ್ತಿಯ ಮಹೋನ್ನತ ಪ್ರದರ್ಶಣಗಳಾಗಿ ನನಗೆ ಕಂಡಿತು. ಕಲ್ಲಿನ ರಥ ಇರುವ ವಿಠಲನ ದೇವಸ್ತಾನಕ್ಕೆ ಬಂದೆ, ಕಲ್ಲಿನ ರಥವನ್ನ ನೋಡುತ್ತ ನಿಂತಿದ್ದೆ. ಅದರ ಶಿಲ್ಪವನ್ನ ಅನುಭವಿಸುತ್ತಿದ್ದೆ. ಆಗ ಒಂದು ಹಳ್ಳಿ ಜನಗಳ ಗುಂಪು, ಮಹಿಳೆಯರು, ಪುರುಷರು, ಬಂದು ರಥವನ್ನ ಗಮನಿಸತೊಡಗಿದರು. ಆ ಗುಂಪಿನಲ್ಲಿದ್ದ ಒಬ್ಬಾಕೆ ಆ ಸವೆದುಹೋದ ಕಲ್ಲಿನ ರಥದ ಚಕ್ರಗಳನ್ನೂ, ಅದರ ಕೀಲನ್ನೂ ಕಂಡು, ತನ್ನವರಿಗ್ಯಾರಿಗೋ "ನೋಡಿ, ರಥ ಎಳೆದೂ ಎಳೆದೂ ಚಕ್ರಗಳು ಸವೆದಿವೆ" ಎಂದಳು. ಆ ಕ್ಷಣ ಆ ಮಾತನ್ನ ಕೇಳಿ ನನಗೆ ಆಶ್ಚರ್ಯ ಆನಂದ ಎರೆಡೂ ಆದವು. ಅರೆ, ಬದುಕನ್ನ ಹೀಗೂ ಕಾಣಬೊಹುದಲ್ಲ! ಅದು ಮುಗ್ದತೆಯ? ಅಮಾಯಕತೆಯ? ತಿಳಿಯಲಿಲ್ಲ, ತಿಳಿದುಕೊಳ್ಳುವ ಗೋಜಿಗೂ ಹೋಗಲಿಲ್ಲ. ಯಾವುದೋ ರೂಪಿತ ಸಿದ್ದಾಂತದ ಒಳಗೆ ಕೂತು ಅದನ್ನೇ ಕಟ್ಟುತ್ತಾ ಬದುಕೋದು ಅವಶ್ಯವಿದೆಯ? ಯಾವುದು ವಾಸ್ತವ? ಯಾವುದು ಭ್ರಮೆ? ಯಾವುದು ಕಲ್ಪನೆ?

ಏನನ್ನೋ ಹುಡುಕಿ ವಸ್ತು ಸಂಗ್ರಹಾಲಯಕ್ಕೆ ಹೋಗಿದ್ದೆ. ಅಲ್ಲಿ ಎರೆಡು ಶಿಲ್ಪಗಳು ನನ್ನನ್ನ ಬಹಳವಾಗಿ ಆಕರ್ಷಿಸಿದವು, ಅದು ಕೇವಲ ಆಕರ್ಷಣೆಗೆ ಸೀಮಿತವಾಗಿರಲಿಲ್ಲ. ಆಕರ್ಷಣೆಯನ್ನ ಮೀರಿದ ಚಿತ್ರವಾಗಿ ನನ್ನೊಳು ಹೊಕ್ಕು, ನಾನು ಬದುಕನ್ನ ನೋಡುವ ಕ್ರಮವನ್ನೇ ಬದಲಿಸಿಬಿಟ್ಟಂತೆ ಅನ್ನಿಸಿತು.
ಒಂದು, ದಕ್ಷಯಙ್ಞದಲ್ಲಿ ಪ್ರಾಣವನ್ನ ಅರ್ಪಿಸಿದ ಪಾರ್ವತಿಯ ಶರೀರವನ್ನ ತನ್ನ ಬುಜದಮೇಲೆ ಹಾಕಿಕೊಂಡು ಹುಚ್ಚನಂತೆ ಅಲೆಯುತ್ತಿರುವ ಈಶ್ವರನ ಶಿಲ್ಪ, ಮತ್ತೊಂದು ಬೆತ್ತಲೆಯಾಗಿ ಬಿಕ್ಷೆ ಬೇಡುತ್ತಿರುವ ಈಶ್ವರ.




..........................


ಶೋಭನಕ್ಕೊರಟ ಹುಡುಗಿಯ ಮುಡಿಗೆ
ಮಲ್ಲಿಗೆ ಕಟ್ಟಿಕೊಟ್ಟ
ಲಂಗ ಕುಪ್ಪಸ ತೊಟ್ಟ ಅವಿವಾಹಿತ ಅಜ್ಜಿಯ
ನೋಟ,
ಹೆಣ್ಣು ಗಂಡು ಬೆರೆತ ಬೆತ್ತಲೆ ದೇಹದ ಗಂಧ,
ಮಹಾಲಿಂಗದೇವ ನಕ್ಕ
ಜಗತ್ತು ತಣ್ಣಗಿನ ನಿಶ್ಶಬ್ದದಲ್ಲಿ ಕೊನೆಗೊಳ್ಳತೊಡಗಿತು.

ತಿರುಬೋಕಿಯ ಸ್ವಗತ ೧



ಬದುಕಿಗೆ ರಚನೆ ಎಂಬೋದೇ ಇಲ್ಲ. ಸ್ವಲ್ಪ ಕೇಳಿ ಇಲ್ಲಿ. ಕೇಳಲಿಕ್ಕೆ ಆಗದಿದ್ದರೆ ಓದಿ. ಓದಲಿಕ್ಕೆ ಆಗದಿದ್ದರೆ ಓಡಿಹೋಗಿ. ಸತ್ಯವನ್ನ ಎರೆಡೂ ಕಣ್ಣುಗಳಿಂದ ನೋಡಬೇಕು. ಕೆಲವೊಮ್ಮೆ ಸಾದ್ಯ ಆಗೋದಿಲ್ಲ. ಕಣ್ಣು ಮಿಟಿಕಿಸುತ್ತಲೇ ಇರಬೇಕಾಗುತ್ತೆ. ಆಗ ಸತ್ಯ ತಪ್ಪಿಸಿಕೊಂಡುಬಿಡುತ್ತೆ. ಆದ್ರಿಂದ ಕಣ್ಣುಮಿಟುಕಿಸ್ದೆ ಸತ್ಯಾನ ನೋಡ್ತಾ ಇರಿ. ನೋಡೋಕೆ ಆಗೋಲ್ಲ, ಅದಕ್ಕೇ ಸುಳ್ಳನ್ನ ಸತ್ಯ ಅಂತ ಬಾವಿಸಿಬಿಟ್ಟರೆ ಆಯ್ತು. ಯಾವ ಸಮಸ್ಯೇನೂ ಇಲ್ಲ. ಅಸ್ತಿತ್ವ, ಅದೊಕ್ಕೊಂದು ಮಹಾನ್ ಕುರುವು, ಅದನ್ನ ಸ್ಥಾಪಿಸಲಿಕ್ಕೆ ಹೋರಾಡೋದು. ಯಾವುದೋ ಪ್ರತಿಮೆ, ನನ್ನನ್ನ ನಾನು ಪೂಜ್ಯಗೊಳಿಸಿಕೊಂಡುಬಿಡಬೇಕು. ನೋಡಿ ಸ್ವಾಮಿಗಳೆ, ಮಹಾನ್ ಸ್ವಾಮಿಗಳೆ. ಬನ್ನಿ, ಬನ್ನಿ ನಾನೊಬ್ಬ ಮಹಾನ್ ಪೂಜ್ಯ ವ್ಯಕ್ತಿ. ಎಲ್ಲಿ ಹಾರ ತನ್ನಿ, ಒಂದು ಶಾಲೂ, ಜೊತೆಗೆ ಒಂದಿಷ್ಟು ಹಣ್ಣು, ಒಂದು ಸಮಾರಂಭ. ನಾನೀಗ ದೊಡ್ಡ ಮನುಷ್ಯ.

ಅಸ್ತಿತ್ವದ ಮಹಾನ್ ಕುರುವನ್ನು ಸ್ಥಾಪಿಸಲು ಹೋಗುತ್ತಿದ್ದೇನ ? ಯಾವ ಪ್ರತಿಮೆಯ ಹಿಂದೆ ಹೋಗುತ್ತಿದ್ದೇನೆ? ನನ್ನನ್ನು ನಾನೆ ಪೂಜ್ಯಗೊಳಿಸಿಕೊಳ್ಳೋಕೆ ಹೋಗುತ್ತಿದ್ದೇನೆ. ಯಾವುದೋ ಪ್ರತಿಮೆ, ಒಂದಾ ನಿರಾಕರಿಸಲಿಕ್ಕೆ, ಅಥವಾ ಸ್ವೀಕರಿಸಲಿಕ್ಕೆ. ಪ್ರತಿಮೆಗಳಿಲ್ಲದೆ ಬದುಕಲಿಕ್ಕೆ ಸಾದ್ಯವೇ ಇಲ್ಲವ? ಅಥವಾ ಬದುಕನ್ನೇ ಒಂದು ಪ್ರತಿಮೆಯನ್ನಾಗಿ ಮಾಡಿಬಿಟ್ಟಿದ್ದೇವೆಯೆ? ಏನೋ, ಏನೂ ತಿಳಿಯುತ್ತಿಲ್ಲ. ಸುಮ್ಮನೆ ಪದಗಳ ಅಬ್ಬರ.

ನಿಜ, ಎಂತದೂ ಇಲ್ಲ ಇಲ್ಲಿ. ಕೆಲಸಕ್ಕೆ ಬಾರದ ಪದಗಳು. ಇದೊಂತರ ತೆವಲು. ನಿಜಕ್ಕೂ ಏನೂ ತಿಳಿದಿಲ್ಲ, ಅಥವಾ ತಿಳಿಯುತ್ತಲೂ ಇಲ್ಲ. ಆದರೂ ಪದಗಳ ಅಬ್ಬರದಲ್ಲಿ ಸತ್ಯವನ್ನ, ವಾಸ್ತವವನ್ನ, ಬದುಕಿನ ಧ್ವನಿಯನ್ನ ಕಾಣಲಿಕ್ಕೆ ಹೋಗುತ್ತಿದ್ದೇನೆ. ಪದಗಳೇ ಇಲ್ಲದೆ ಬದುಕಿಬಿಡಬೇಕು. ಹಾಗೆ ಒಮ್ಮೆ ಬದುಕಿದ್ದೆ. ಬಾಲ್ಯದಲ್ಲಿ. ಕಥೆ ಕಟ್ಟುವ ಅವಶ್ಯಕತೆಯಿಲ್ಲದೆ ಬದುಕಿದ್ದ ದಿನಗಳವು. ಕಥೆ ಎಂಬೋದೇ ಮಹಾನ್ ರಚನೆ. ಆ ಕಥೆಯೇ ಎಲ್ಲ ಸಮಸ್ಯೆಗಳ ಮೂಲ. ಹಾಳು ಕಥೆ. ಒಂದಾ ಕಥೆ ಕಟ್ಟಲಿಕ್ಕೆ, ಪದಗಳನ್ನ ರಚಿಸೋದಕ್ಕೆ ಕೂಡೋದು, ಇಲ್ಲಾಂದ್ರೆ ನಾವೇ ಕಥೆ ಆಗಲಿಕ್ಕೆ ಸಾದ್ಯವ ಅಂತ ಹಂಬಲಿಸೋದು. ಒಟ್ಟಿನಲ್ಲಿ, ಚರಿತ್ರೆಯ ಪುಟದಲ್ಲಿ ಕಥೆಯಾಗಿಬಿಡಬೇಕು. ಕಥೆ ಬರೆದಾದರೂ ಕಥೆಯಾಗಿಬಿಡಬೇಕು. ನನಗೆ ಬೇಕಿಲ್ಲ. ಕಥೆಯಾಗುವುದೂ ಬೇಕಿಲ್ಲ, ಕಥೆಕಟ್ಟುವುದೂ ಬೇಕಿಲ್ಲ.

ಯಾಕೊ ಇಂದು ನನ್ನ ಬಾಲ್ಯದ ದಿನಗಳು ನೆನಪಾಗುತ್ತಿದೆ.


"ಲೇ ಏನೋ ಮಾಡ್ತಾ ಇದ್ದೀಯ?"
"ಅಮ್ಮ, ನೋಡಿಲ್ಲಿ. ಈ ಕಪ್ಪಗೆ ನೆರಳು ಇದ್ಯಲ್ಲಮ್ಮ, ಅದು ನನ್ನ ಕಾಲ ಕೆಳ್ಗೆ ಇದೆ ನೋಡಿದ್ಯ"
", ತರ್ಲೆ, ನೆರೆಳು ನಿನ್ನ ಕಾಲ್ಕೆಳ್ಗೆ ಇಲ್ದೆ ಇನ್ನೆಲ್ಲಿರುತ್ತೋ?"
"ಅಲ್ಲಮ್ಮ, ನೋಡು, ನಾನು ಆ ಬುಡ್ಡಿ ಹತ್ತಿರಕ್ಕೆ ಹೋದರೆ, ನೋಡು ನೆರಳು ದೊಡ್ಡದಾಗಿ ಕಾಣಿಸೋತ್ತೆ. ಅದೆ, ದೂರ ಹೋದರೆ ಚಿಕ್ಕದಾಗುತ್ತೆ, ಯಾಕಮ್ಮ ಹಂಗೆ?"
"ನಂಗೊತ್ತಿಲ್ವೊ, ತಲೆ ತಿನ್ಬೇಡ ಹೋಗು, ಲೇ ಇರೋದೊಂದು ಸೀಮೆಯೆಣ್ಣೆ ಬುಡ್ಡಿ, ಸೀಮೇ ಎಣ್ಣೆ ಆಗೋಗಿದೆ ಮನೇಲಿ. ಈ ಕಡೆ ಬಾ, ಏನೇನೋ ಮಾಡೋಕೋಗಿ ಬುಡ್ಡಿ ಹಾಳು ಮಾಡ್ಬೇಡ"

ಸೀಮೇ ಎಣ್ಣೆ ಬುಡ್ಡಿಯೊಂದಿಗೆ ನಾನು ಸುಮ್ಮನಿರದೆ ಆಡುತ್ತಾ ಕೂರುತ್ತಿದ್ದ ದಿನಗಳವು. ಹಳೇ ಮನೆ, ಹಳೇ ಬುಡ್ಡಿ, ಅಮ್ಮ ಸ್ವಚ್ಚವಾಗಿ ವರೆಸಿಟ್ಟ ಗಾಜಿನ ಬುಡ್ಡಿಯಿಂದ ಬರುತ್ತಿರೋ ಬೆಳಕಿನ ಜೊತೆಗೇನೆ ಬರುವ ಸೀಮೇ ಎಣ್ಣೆ ವಾಸನೆ. ಅದರ ಮುಂದೆ ಕೂತು ಕೈಯನ್ನ, ಕಾಲನ್ನ, ಚಿತ್ರ ವಿಚಿತ್ರವನ್ನಾಗಿಸಿ ಎದುರು ಗೋಡೆಯಲ್ಲಿ ಮೂಡುತ್ತಿದ್ದ ನೆರಳಿನೊಡನೆ ಆಟ ಆಡುವುದು, ಮತ್ತೆ ಏನೋ ಹೊಳದವನಂತೆ ಅಮ್ಮನ್ನ ಕರೆದು,
"ಅಮ್ಮ ಇಲ್ಲಿ ನೋಡು ಹಕ್ಕಿಗಳು ಹಾರ್ತ ಇದೆ"
"ಅಮ್ಮ, ಅದು ನೋಡು ಬೆಟ್ಟಗಳು"
"ರೀ ಇಲ್ಲಿ ನೋಡ್ರೀ ಎಷ್ಟು ಚೆನ್ನಾಗಿ ಮಾಡಿದ್ದಾನೆ"
ಅಂತ ನಾನು ಮಾಡಿದ ಎಲ್ಲಾ ವಿಚಿತ್ರಗಳೂ, ತನ್ನ ಮಗನ ಹೆಮ್ಮೆಯ ಕೃತ್ಯಗಳೆಂದು ಅಮ್ಮ ಅಣ್ಣನ್ನ ಕರೆದು ತೋರಿಸಿ , ಆಮೇಲೆ ಅಜ್ಜಿ ಬಂದು ನೋಡಿ ಏನೋ ಹೇಳಿ ಹೋಗೋಳು. ಸಂಜೆಯಾದರೆ ಅಮ್ಮ, ಅಪ್ಪ, ಅಜ್ಜಿ, ನಾನು, ಪಕ್ಕದ ಮನೆಯವರು, ಎದುರು ಮನೆಯವರೂ ಎಲ್ಲಾ ಒಟ್ಟಿಗೇ ಕೂತು ಮಾತನಾಡುತ್ತಾ ಸಂಜೆಯ ಬೆಳಕು ಮಾಸಿ ಕತ್ತಲಾಗುವುದನ್ನೂ, ಹಕ್ಕಿಗಳು, ಕಾಗೆಗಳು ಶಬ್ದಮಾಡುತ್ತ ಮನೆಯ ಪಕ್ಕವೇ ಇರೋ ಅರಳಿ ಮರದ ಗೂಡುಗಳಿಗೆ ಸೇರೋದನ್ನ ನೋಡುತ್ತ, ಅಜ್ಜಿಗೆ ಏನನ್ನೋ ಕೇಳುತ್ತಾ, ಕೂತಿರುತ್ತಿದ್ದೆ.
"ಅಜ್ಜಿ, ಕಾಗೆಗಳು ಯಾಕೆ ಮರದ ಮೇಲೆ ಮನೆ ಕಟ್ಟುತ್ತೆ?"
"ಅಜ್ಜಿ ಅವೂ ನಮ್ಮನೇ ತರ ಸೀಮೆಂಟು ಎಲ್ಲ ಹಾಕಿ ಕಟ್ಟುತ್ತ?"
"ನಮ್ಮನೇಲಿ ಇರೋ ತರ TV ಇದ್ಯ?"
"ಅವೂ ಸ್ಕೂಲಿಗೋಗುತ್ತ?"
ಹೀಗೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡವರಿಸುತ್ತರಬೇಕಾದರೆ ನನ್ನಜ್ಜಿ ಅಲ್ಲಿರೋ ಮಕ್ಕಳನ್ನೆಲ್ಲಾ ಕರೆದು, ಎಲ್ಲರೂ ಅವಲ್ಲಕ್ಕಿ ಪವಲಕ್ಕಿ ಆಟ ಆಡಿ ಅಂತ ಅಂದು ಬಿಡೋಳು. ಎಲ್ಲರೂ ಆಟದಲ್ಲಿ ತಲ್ಲೀನರಾಗಿಹೋಗಿ ಎಲ್ಲಾ ಪ್ರಶ್ನೆಗಳನ್ನೂ ಮರೆತುಬಿಡುತ್ತಿದ್ದೆವು.

ಈಗ ಮತ್ತೆ ಅದೇ ಪ್ರಶ್ನೆಗಳು ಮತ್ತೊಂದು ರೂಪದಲ್ಲಿ ಎದುರಿಗೆ ನಿಂತಿವೆ. ನೆರಳಿನ ಪ್ರಶ್ನೆ. ವಾಸ್ತವದ ಪ್ರಶ್ನೆ. ಸಿದ್ದ ಸೂತ್ರಗಳ, ಸಿದ್ದ ಉತ್ತರಗಳು ನನಗೆ ಸಾಕಾಗುತ್ತಿಲ್ಲ. ಎಲ್ಲವನ್ನೂ ಅನುಮಾನಿಸುವ ಹಂತಕ್ಕೆ ತಲುಪಿದ್ದೇನೆ. ಇಲ್ಲಿ ಏನೋ ತಾತ್ವಿಕತೆ, ಹಾಳೂ, ಮೂಳೂ ಇದೆ ಎಂಬೋ ಭಾವನೆ ಎಲ್ಲಾ ತಪ್ಪು. ಮತ್ತೇ ಅದೇ ನೆರಳು, ಅದೇ ಹಕ್ಕಿ, ಅದೇ ಮನೆ, ಅದೇ ಸಂಬಂಧಗಳು. ಪ್ರಶ್ನೆಗಳು ಅವೇ, ಆದರೆ ಉತ್ತರಗಳು...? ಅವೇ ಆಗಲಿಕ್ಕೆ ಸಾದ್ಯವೆ....? ಹುಚ್ಚನಾಗಲಿಕ್ಕೆ ಹುಚ್ಚುತನದ ಬೆನ್ನುಹತ್ತಿದ್ದೇನೆ. ಇಡೀ ಪದಗಳನ್ನೇ ಸುಟ್ಟುಬಿಡಬೇಕು. ಭಾಷೆಯೇ ಇಲ್ಲದ ಕಾಲಕ್ಕೆ ನಾನು ತಲುಪಿಬಿಡಬೇಕು. ಭಾಷೆಯೂ ಇಲ್ಲ! ಪ್ರಶ್ನೆಯೂ ಇಲ್ಲ! ಉತ್ತರವೂ ಇಲ್ಲ! ದೇವರೂ ಇಲ್ಲ!

....................................


ತಥಾಗತನನ್ನ ಅರಸಿ ಹೊರಟಿದ್ದೇನೆ
ನಿರಾಕರಿಸಲಿಕ್ಕ?
ನೆರಳಿಗಂಟಿದ ದೇಹ
ಚಲಿಸುತ್ತೆ
ನೆರಳ ನೆರಳಾಗಿ
ಸತ್ಯ ನಿಜಕ್ಕೂ ಸತ್ಯವ?!