ಬಯಕೆ


ಅವಳ್ಯಾರು ?

ನನ್ನ ದೇಹ ಪ್ರಜ್ಞೆಗಳಿಂದ ವಿಸ್ತರಿತಳಾದವಳು

ಹಾಗಾದರೆ ನೀನು

ಅವಳಿಂದ ವಿಸ್ತರಿತನಾದವ

ಹಾಗಾದರೆ ನೀವಿಬ್ಬರ್ಯಾರು ?

ಇಬ್ಬರೆಂಬುದಿಲ್ಲವಲ್ಲ

ಹಾಗಾದರೆ ಒಬ್ಬರಾದರೂ ಯಾರು ?

ಕೇಳುತ್ತಿರುವ ನೀನು ನಾನಲ್ಲವೆ


ನೀನು ನನ್ನ ದೇಹದ ವಿಸ್ತರಿತ ದೇಹ

ಅಥವಾ ನಾನು ನಿನ್ನ ದೇಹದ

ಆದಿ ಅಂತ್ಯವಿರದ ಈ ವಿಸ್ತಾರಕೆ

ಮುರಳಿಯೆಡೆಗಿನ ನಿನ್ನ ನೋಟವೇ ಸಾಕ್ಷಿಯಾಗಿ

ನಾ ಹೆಣ್ಣಾಗ ಬಯಸಿದೆ


 

ಪ್ರಾರ್ಥನೆ



ಗಣಪ ಶರಣೆಂಬೆ

ಚಲಿಪ ಜಗವ ಸುಡುವ ಒಡಲ

ನಡುವೆ ಬೆಳೆವ ಕಾಣಿಸುವ ಜಗದ

ಅಧಿನಾಯಕಂಗೆ ಶರಣೆಂಬೆ


ತಿರು ತಿರುಗಿ ಸುರುಳಿ ಭದ್ರ ನೆಲೆ

ಹೊತ್ತುರಿದಿದೆ ಉರಿ ಭುವಿಯಿಂ ಬಾನಿನೆಡೆಗೆ

ಮೈಯೆಲ್ಲಾ ಕಪ್ಪು ಸುಟ್ಟ ಬೂದಿ

ಹೊಸದು ಹೊಸದು ಇದು


ಮುಗುಳು ನಗೆ ಮುಗ್ಧ ನಗೆ

ಕಣ್ಮುಚ್ಚಿದರೆ ಎದೆಯುಕ್ಕಿ ಕಣ್ಣಲ್ಲಿ ಹರಿದು

ಮೈಯೆಲ್ಲಾ ತೋಯ್ದು

ಅದೆಂತ ಬಾಲೆಯವ್ವ ನೀನು

ಮಗು ಅವ್ವ ನಾನು


ಹರಿವಿಗೆಲ್ಲಿಯ ಹೊಣೆ

ಅಣು, ಅಣುವಿನಣು

ತುಂಬಿ ತುಂಬುರನ

ಮೇರೆ ಮೀರಿ ಮೀಟಿದೆ

ಬೆತ್ತಲೆ ಮೈಯ ಕುಣಿತಕ್ಕೆ

ಯಾರ ಹೊಣೆ

ನಿಂತ ಮೇಲೆ ಉಳಿವುದೇನು

ಇಲ್ಲ ಎಂದರೆ ಇದೇಯಾ ?


ಹೊಸ ಮುಖ ಹೊಚ್ಚ ಹೊಸದಾಗಿ

ನನ್ನನ್ನೇ ಮರೆಸಿ ನೆನಪಿಸುವಂತೆ

ಪದಗಳೆಲ್ಲಾ ಬರೀ ಅಕ್ಷರಗಳಾಗಿ

ಅಕ್ಷರಗಳೆಲ್ಲಾ ದೈವವಾಗಿವೆ


ಶಾಂತಿಃ ಶಾಂತಿಃ ಶಾಂತಿಃ

ತತ್ತ್ವ


ಹೂವೇ ಹೂವಾಗಿ

ಮಳೆಯೇ ಮಳೆಯಾಗಿ

ಮಿಂಚೇ ಮಿಂಚಾಗಿ

ಹರಿವೇ ಹರಿವಾಗಿ

ಆಕಾಶವೇ ಆಕಾಶವಾಗಿ

ಬಾ

ಅವಳು ಅವಳಾಗಿ ಬಾ

ಅವನು ಅವನಾಗಿ ಬಾ

ಅವಳು ಅವನಾಗಿ ಬಾ

ಅವನು ಅವಳಾಗಿ ಬಾ

ನಾನು ನೀನಾಗಿ ಬಾ

ನೀನು ನಾನಾಗಿ ಬಾ

ನಾ ನೀನಾಗಿ ನೀ ನಾನಾಗಿ

ಬರುವೆವು


ಯ ಏವಂ ವೇದ 

ಅಜ್ಜಿ


ಕಿಟಕಿಯಂದದಿ ಕಾಣ್ವ

ಬೆಟ್ಟ ನೀರು ರೈಲು

ಎಲ್ಲವೂ ಒಂದೇ ಬಗೆ - ಮಂಜು ಮಂಜು

ಕಣ್ಣು ತೋರಿಸಿರೋ ಎಂದರೆ

ಬೇರೇನೂಮಾಡಲಿಕ್ಕಾಗುವುದಿಲ್ಲ

ವಯಸ್ಸಾಯಿತು, ಆಯಸ್ಸು ಮುಗಿತಕ್ಕೆ ಬಂತು

ಎಲ್ಲವೂ ಬೆಳ್ಳಗೇ ಕಾಣೋದು

ಎಂದವರ

ಕಪಾಳಕ್ಕೆರೆಡು ಬಾರಿಸಬೇಕೆಂದು ಜೋರುಮಾಡುತ್ತಲೇ

ತಾನು ನಿತ್ಯ ಓದಬೇಕಿರುವ ಪತ್ರಿಕೆಯೂ

ಜಾಗತಿಕ ಶೃಂಗಸಭೆಯಲ್ಲಿ ಪ್ರಸ್ಥಾವನೆಗೊಳ್ಳಬೇಕಿರುವ

ದೀರ್ಘ ಮುನ್ನೋಟದ ಅಂಶವೂ 

ಹಾಗೆ ಹೇಳುವವನಿಗಿರಲಿಕ್ಕಿಲ್ಲ

ಎಂಬ ವಾದವೂ ಕೇಳುವವರಿಲ್ಲ


ರೈಲು ಕಂಡಾಗ ಕಣ್ಣರಳಿಸಿದವಳು

ಅಪ್ಪನು ಮಠದ ಸ್ವಾಮಿಗೇ ಪಾಠ ಹೇಳಿದವನೆಂದು

ಬೀಗುತ್ತಲೇ

ಮೊಮ್ಮಕ್ಕಳಿಗೊಬ್ಬರಿಗೂ ಬರೆಯಲು

ಬಾರದ ಕನ್ನಡದ ಬಗೆಗೆ ಕೊರಗುವವಳಿಗೆ

ಟಿ.ವಿ. ಸೀರಿಯಲ್ ನೋಡಲಿಕ್ಕೆಂದು ಕೊಟ್ಟ

ಕಿವಿಯುಲಿಯ ಭಾರಕ್ಕೆ ಕಿವಿಯೇ ಜೋತು

ದೂರದಲ್ಯಾರೋ ಹಸುಮಂದೆಯನ್ನೋಡಿಸುವ ಸದ್ದು 



ಹಾದಿಬದಿಯಲ್ಲಿ ಘಮ್ಮೆನ್ನುವ ಮಸಾಲೆದೋಸೆಯೊಳಗಿನ

ಕೆಂಪುಚಟ್ನಿಯನ್ನು ತನ್ನದೇ ಬಗೆಯಲ್ಲಿ ಮಾಡಿ

ಚಾ ಜೊತೆಗೆ ತಿಂದರೇನೇ -

ನಿತ್ಯ ಬಾಲ್ಕನಿಯಿಂದ ಬೀಳುತ್ತೇನೆನ್ನುವ ಮಗಳೂ

ಮಗಳ ಮಗನನ್ನೂ ನೋಡುತ್ತಾ

ಕಟ್ಟಿದ ಹಸುಗಳೂ ಬಚ್ಚಿಟ್ಟು ಮಾರಿದ ತುಪ್ಪವೂ

ನೆನಪಾಗಿ - ಸವಿಯುವುದಕ್ಕೂ ಯೋಗವುಂಟು

ನೆನಪು ಕಟ್ಟು ಕತೆಯಲ್ಲವೇ

ಪಕ್ಕದ ಹಳಿಯಲ್ಲಿ ರೈಲು ಎಂತಹ ಜೋರು ಮಳೆಗೂ

ಲೆಕ್ಕಿಸದೆ ಗಾಂಭಿರ್ಯದಲ್ಲಿ ಹೊರಟಿದೆ



ಎರಡು ಹಳಿಗಳ ನಡುವಲ್ಲಿ 

ದೂರ ಬೆಟ್ಟದ ಸಾಲನ್ನು

ಕಾಣುತ್ತಾ ಕೂತವನ ಕೈಯಲ್ಲಿನ ದಿವ್ಯಮಣಿಯಾದರೂ

ಏನೆಂಬುದು 

ಬಲವಂತಕ್ಕೆ ಹೊಟ್ಟೆಕರಗಿಸಲಿಕ್ಕೆ

ವ್ಯಾಯಾಮಕ್ಕಿಳಿದವನಿಗೆ ಬಹುಶಃ

ಅರ್ಥಕ್ಕೆಟುಕದ ಪ್ರಶ್ನೆ

ನೆನಪು ಕಟ್ಟು ಕತೆ ಎಂದಾದಾಗಲೂ

ಅದಕ್ಕೊಂದು ಬೆಲೆ ಕಟ್ಟಿ

ಮಾರಲ್ಲಿಕ್ಕೆಂದೇ ಮಹಡಿ ಕಟ್ಟಿ

ಜನ ಹೋ ಹೋ ಎನ್ನುತ್ತಲೂ

ಹಾಡಿಗೆ ಕವನಕ್ಕೆ, ಕುಣಿತಕ್ಕೆ ಬೆಂಕಿ ಬಿದ್ದಂಗೆ -

ಅವಳ ವರಾತ


ಒಟ್ಟೊಟ್ಟಿಗೆ ಆಗಾಗ ಸುಮ್ಮನೆ ರೈಲಿನ ಇಂಜಿನ್ನುಗಳು

ಬೋಗಿಗಳಿಲ್ಲದೆ ಚಲಿಸುವುದೇಕೆ ಎಂದದ್ದಕ್ಕೆ

ಬೇಕಿರುವುದು ಕರ್ಕಶ ಸದ್ದು

ನಮಗೊಂದು ಕಾಲಕ್ಕೆ ದಿಕ್ಕು ಬೇಕಲ್ಲ

ಸದ್ದಡಗಿದರೆ ಹಿಂದೂ ಮುಂದೂ

ಎರಡೂ ಕಾಣಲಿಕ್ಕುಂಟು

ಎಷ್ಟೆಂದರೂ ಗಣಿತೀಯ ಆಕೃತಿ

ದೇಶಕಾಲ ಎಂದ ಮೊಮ್ಮಗನ

ತಲೆಗೆ ಮೊಟುಕುತ್ತಲೇ

ರಾಮಾಯಣದ ಪುಟ ತಿರುವುತ್ತಾ ಕೂತಳು




ಊರೊಳಗಿನ ಜಾಗವೇ ಹಾಗೆ


ಊರೊರಗಿನ ಜಾಗವೇ ಹಾಗೆ

ಮೊದಲಿಗೆಲ್ಲಾ ಒಂಟಿ ಮನೆಗಳು

ಅಲ್ಲಿಯೇ ಮನೆಯ ಚರಂಡಿ

ಧಿಡೀರ್ ರಸ್ತೆ ಹಾದು ಹೋದರೆ

ಯಾವುದೋ ಕೆರೆ ಕಟ್ಟೆ ನುಂಗಿ

ಬೆಳೆದದ್ದಕ್ಕೆ ಮಳೆಗಾಲದ ರಾತ್ರಿ ನಿದ್ರೆಯ

ಹಂಗಿಗಿಲ್ಲ ಅಪಜಯದ ಸೋಗು

ಗ್ಯಾರೇಜುಗಳಿಂದ ತಟ್ಟುವ ಗದ್ದಲಕ್ಕೆ

ಮಾರಮ್ಮ ಗುಡಿಯ ಗಂಟೆಗೆ

ಗೋಪುರಕ್ಕೆ ಸಮಿತಿ ಅಧ್ಯಕ್ಷತೆ


ವರ್ತುಲ ವರ್ತುಲ ಹೊರ ವರ್ತುಲ

ಎನ್ನುವಾಗಲೆಲ್ಲಾ ತಪ್ಪೋದುವ

ಬಟ್ಟೆ ಬ್ಯಾಗು ನೇತಾಕಿಕೊಂಡ ಮಗನ

ಭಾಷಾ ಶುದ್ಧತೆಗೆ ಹಾತೊರೆವವ

ತನ್ನ ಆಟೋದಲ್ಲಿ ಕೇಳುವ ಎಫ್ ಎಮ್

ಬದಲಿಸಿ ಎನ್ನೋ ಪಯಣಿಗನಿಗೆ

ನಾರಾಯಣಪ್ಪ ಎಂಬೋ ಹೆಸರನ್ನ

ಪೋಲೀಸಿನವರು ನಾರಾಯಪ್ಪ ಎಂದು

ಬರೆದದ್ದನ್ನು ಬದಲಿಸಲಿಕ್ಕೆ ಸುತ್ತಿದ್ದರಲ್ಲಿ

ವರ್ತುಲ ವರ್ತುಲ ರಸ್ತೆ ಎದ್ದಿದೆ


ಆ ರಸ್ತೆಗೊಂದು ಹೆಸರಿಡಬೇಕು ಆ ಸಂಸ್ಥೆಗೊಂದು

ಲಾಂಛನ ಕೆತ್ತಬೇಕಂತೆ ಕಟ್ಟಿಗೆಯಲ್ಲಿ ಕಲಂಕಾರಿಯಲ್ಲಿ

ಹೆಮ್ಮೆಯಂತೆ ಕಲಾ ಪೋಷಕರು

ವರ್ತುಲ ರಸ್ತೆ ಪಕ್ಕದ ಊರೊರಗಿನ

ರಾಷ್ಟ್ರೀಯ ವಿದ್ಯಾಸಂಸ್ಥೆಯ ಪ್ರಾಚಾರ್ಯರು


ಊರೊಳಗಿನ ಜಾಗವೇ ಹಾಗೆ