...

 

ಮಲಗಿದ್ದ ಹಾಸಿಗೆಯ ಮೇಲೆ ಹಾಕಿದ್ದ 

ಚಾದರದ ಮೇಲಿನ 

ಬಣ್ಣ ಬಣ್ಣದ ಹೂವು ಮೊಗ್ಗು 

ಎಲೆ ಹಸಿರು - ನಿಜವಲ್ಲ 

ಕಣ್ಮುಚಿದ್ದಷ್ಟೆ 

ದೇವರು, ಕಿರೀಟವೇ ಇಲ್ಲ 

ದೇವಿಯೂ, ಹಲವರು ಕೈಗಳು 

ಕೋಟೆಗೆ ಹೊತ್ತ ಕಲ್ಲುಗಳು 

(ಮಾತಾಡುತ್ತಿದ್ದವು … ) 

ಮರಕ್ಕೆ ಹಬ್ಬಿದ ಬಳ್ಳಿಯಲ್ಲರಳಿದ ಹೂ 

ಕೆಳಗೆಲ್ಲೋ ರಕ್ತದ ಕೋಡಿ 

“ಮುನ್ನಾ, ಮುನ್ನಾ, ಮುನ್ನಾ…” 

ನಂತರದ್ದೂ ಇದೆ 

ಹೆಣ್ಣು ಎಲ್ಲಿ ನೋಡಿದರಲ್ಲಿ 

ಅದೇ ಬರಡು ಭೂಮಿ 

ಹಸಿರು ನೆಲ ಜೋರು ಮಳೆ 

ಎಲ್ಲವೂ 

ಹರಿದು ಹೋದವು ಹಾಗೇ 

ಎಲ್ಲಿ ಯಾರಲ್ಲಿ? 

ಕೇಳುವವರಾದರೂ ಯಾರು?

ಹೊದ್ದ ಚಾದರವೆ ? ಅದರ ಬಣ್ಣವೆ ? 

    


ವ್ಯಕ್ತಿ ಚಿತ್ರ -೦೧

 

ಹೊಸ ಊರು, 

ಎಂಟತ್ತು ಜನ ಕೂತ ಆಟೋ 

ಹೋಗೋದೆಲ್ಲಿಗೆ, ಕೇಳೋದೇಗೆ 

ಭಾಷೆ ಗುರುತು ಇಲ್ಲದ ಜಾಗ 

ಸಂತೆಗೋ, ಜಾತ್ರೆಗೋ, ಮನೆಗೋ 

ಪರಿಭಾಣಕ್ಕೋ, ಸನ್ಯಾಸಕ್ಕೋ, ಜಂಗಮಕ್ಕೋ 

ಹೊರಟವರ?

ಅವಳು ಕೇಳಿದ್ದು 

“ನಿನ್ನ ಬಗ್ಗೆ ಕವನ ಬರೆಯಬೇಕ? 

ಹಾಡು ಬರೆಯಬೇಕ? “ 

ಇಷ್ಟಕ್ಕೂ, ಕವನಕ್ಕೂ ಹಾಡಿಗೂ ವ್ಯತ್ಯಾಸವೇನು? 

ಗಣಿತಕ್ಕೂ ಸಂಖ್ಯಾಶಾಸ್ತ್ರಕ್ಕೂ 

ಇರುವ ವ್ಯತ್ಯಾಸದಂತೆಯ ? 


ಹಳೆಯ ಕಾರಿನ ಚಾಲಕ 

ಊಟಕ್ಕೆ ಕರೆದಿದ್ದಾನೆ ಮನೆಗೆ 

ಸಿಗಬಹುದ ಹೂಗ್ಲಿ ನದಿಯ ಮೀನು 

ತಿರುಪತಿಯಲ್ಲೂ 


ಅಜ್ಜಿಮನೆ

 

ಊರ ಕೇರಿಯ ಬಾವಿ ನಾಲ್ಕಾರು ಮನೆ 

ದೊಡ್ಡಾಲದ ಮರದ ನೆರಳಲ್ಲಿ ಆಟ ಪಾಠ 

ಊಟಕ್ಕೊಂದು ಮನೆ ದೋಸೆಗೆ ಮತ್ತೊಂದು 

ಬಜ್ಜಿಗೆ ಮಾವನದೇ ಅಂಗಡಿ 

ಚಕ್ಕುಲಿ ಪೆಪ್ಪರಮೆಂಟಿಗೂ 

ಮಾವನಿದ್ದಾನಲ್ಲ ಅವನ ಅಂಗಡಿಯುಂಟಲ್ಲ 


ಕಾದಿದ್ದಿದೆ,  ದಪ್ಪ ಕನ್ನಡಕದೊಳಗಿನ ಕಣ್ಣು ಹೊಳೆವಂತೆ 

ರೈಲು ನಿಲ್ದಾಣದ ಮೂರನೆ ಗಂಟೆಗೆ 

ಅಮ್ಮಾ ನಾನೂ ಬಂದಿದ್ದಿದೆ 

ಅವಳೊಟ್ಟಿಗೆ ಕವಡೆಯಾಡಿದ್ದಿದೆ 

ಮೊಸರನ್ನದ ಕೈ ತುತ್ತಿಗೆ 

ಒಣ ಮೆಣಸಿನ ಕಾರ ನೆಂಜಿಕೊಂಡಿದ್ದಿದೆ 


ಅವಳಲ್ಲಿ ಈಗ  ಕೇಳಬೇಕಿತ್ತು  

ಅದೇಗೆ ಸಾಕಿದೆ ಈ ಏಳು ಜನರನ್ನ 

ಅವರೊಟ್ಟಿಗೆ ಹಲವರನ್ನ 

ಅಜ್ಜ ಸತ್ತಾಗ   ನಿನ್ನ ವಯಸ್ಸೆಷ್ಟೋ 

ಅಜ್ಜನು ಸಂಗೀತ ವಿದ್ವಾಂಸನಂತಲ್ಲ 

ಹಾಡಿದ್ದನ ನಿನ್ನೊಟ್ಟಿಗೆ ? 

ಕಲಿಸಿದ್ದನ ಹಾಡುವ ಬಗೆಯನ್ನ 

ನೀನೇ  ನಡೆಸುವ ಈ ಹೋಟೇಲಿನಲ್ಲಿ 

ಚಪಾತಿ ತಟ್ಟುವಾಗಲಾದರೂ‌

ಹಾಡಬೇಕೆಂದೆನಿಸಿತ್ತ? 


ಇದದೆಂತಹ ಮನೆ !!! 

ದೊಡ್ಡಾಲದ ಮರದ ಬೇರು 

ಒಂದೊಂದೇ ಹೊಕ್ಕು 

ಕಡೆಯುತ್ತಿತ್ತಲ್ಲ ಒಡೆಯುತ್ತಿತ್ತಲ್ಲ 

ಗೋಡೆಗಳೆದ್ದವು ಮನೆಗಳೆದ್ದವು 

ರಸ್ತೆ ರಿವಾಜು ಗಾಡಿ ಗಲಾಟೆ 

ಈಗ, ಯಾರ ಅಂಗಡಿಯೆಂದೇಳುವುದು 

ಅದ್ಯಾರ ಹೋಟೆಲದು 

ನೀ ಅನ್ನುತ್ತಿದ್ದೆ 

ದೊಡ್ಡಾಲದ ಮರಕ್ಕೆ ಅದರದೇ ಪಾಡು 


ಸಾಪಾಟು ಜಾಗ ಈಗದು 

ಇಲ್ಲೊಂದಾಲದ ಮರವಿತ್ತಂತೆ 

ರೈಲ್ವೆ ಗೇಟನ್ನೇ ಹಾಕುವುದಿಲ್ಲ ಈಗ 

ಅಕಸ್ಮಾತ್ ಕಾರು ನಿಂತರೆ 

ಅದೋ ಅದು ನನ್ನಜ್ಜಿಯ ಮನೆ 

ಅಲ್ಲೇ ನಾನು ಪುಟ್ಟದೊಂದು ಮನೆ ಕಟ್ಟಿದ್ದೆ 

ಅಂತ ತೋರಿಸಬಹುದಿತ್ತೋ ಏನೋ 

ಮೇಲ್ಸೇತುವೆ ಆಗಿ ಹೈವೇ ಆಗಿದೆ 

ನೆನಪಿಸಿಕೊಳ್ಳುವಷ್ಟರಲ್ಲಿ ದಾಟಿ ಬಿಟ್ಟಿರುತ್ತೇವೆ 

ದಾರಿಯನ್ನ 

ದೊಡ್ಡಾಲದ ಮರದ ಯಾವ ಕುರುಹೂ 

ಇಲ್ಲದೆ


ಮುರಕಾಮಿಯ ಕಾದಂಬರಿ ಓಟ

 

ಒಂದಿಡೀ ಪುಸ್ತಕವನ್ನ 

ಒಂದೇ ಒಂದು ಪೂರ್ಣ ವಿರಾಮವಿಲ್ಲದೆ 

ಬರೆದಿದ್ದ - ಓಡುವುದೂ 

ಓಡುವಾಗ ಉಸಿರಿನ ಏರಿಳಿತಕ್ಕೆ 

ಗಿಡ, ಹೂ, ಬಳ್ಳಿ, ಮರ, ಹಕ್ಕಿ, ಗುಡ್ಡ 

ಆಕಾಶ ಸೂರ್ಯ ಚಂದ್ರ 

ಮತ್ತು ಗಂಡು ಹೆಣ್ಣು ಮನುಷ್ಯ 

ಏರಿಳಿಯುವ ಕಾಣ್ಕೆ 

ಉಸಿರಿನಂತೆ ಪೂರ್ಣ ವಿರಾಮವಿಲ್ಲದ್ದು

ಸಂದರ್ಶನ


ಬಿಸಿಗಾಳಿ, ಉರಿ ಬಿಸಿಲ ಸೂರ್ಯ 

ಕೆಂಪುಗುಡ್ಡದ ಕಾಳ್ಗಿಚ್ಚು 

ಹಸಿರು ಹಲಗೆ ಬಿಳಿ ಬರಹ 

ಗೋರಂಟಿ ಹಚ್ಚಿದ ಕೈಗೂ 

ನೇಲ್ ಪಾಲಿಷ್ ತಾಕಿದ ಉಗುರು 


ತೂಗುಯ್ಯಾಲೆ ನಿಲ್ಲುವುದೇಕೆ ಕಡೆಯಲ್ಲಿ ? 

ವಿವರಿಸಿ - ಗಣಿತದ ಸಮೀಕರಣದೊಟ್ಟಿಗೆ 

ಆಕಾಶದ ನಕ್ಷತ್ರಗಳನ್ನು ಕಂಡದ್ದಕ್ಕಾಗಿ 

ಖಗೋಳ ಶಾಸ್ತ್ರಜ್ಞ 

ಅಣು ಪರಮಾಣು ಅಲ್ಲಿಂದ 

ಹೊರಹೊಮ್ಮಿದ ಆಕಾರ ವಿಕಾರದ 

ಮಾಪನಕ್ಕೊಳಪಟ್ಟ ಹಂತದಲ್ಲದರ ಪರಿಣಾಮ 

ಸಿದ್ಧಾಂತಕ್ಕೆಲ್ಲಾ ಕಾರ್ಯಕಾರಣ 

ಬಗೆಯ ಬರಹಕ್ಕೆ ಬಾಗುವುದು 

ಬಿಳಿಬಣ್ಣದ ಬೋರ್ಡು 

ನೀಲಿ ಬಣ್ಣದ ಬರಹ 


ಕಾಫಿ ಒಂದಿಷ್ಟು ಸಮೋಸ 

ನಿವಾರಿಸಿಕೊಳ್ಳಲಿಕ್ಕೆ ಚರ್ಚೆ 

ಮಾರ್ಗದ ಕಟ್ಟು - 

ದೂರದೂರಿನ ಬಸ್ಸೂ ರೈಲು 

ಟಿಕೆಟ್ಟು ಸಿಕ್ಕಿಲ್ಲ ಇನ್ನೂ 

ರಾತ್ರಿಯಾಗುವುದು ಕತ್ತಲಾಗುವುದು 

ಬೆಳಗಾಗುವುದು ಮತ್ತೆ 

ಚೀಲ ಸಿದ್ಧ, ಶೋಗೆ ಪಾಲೀಷ್ ಹಚ್ಚಿ 

ಸಿಗಬಹುದು ಅವನೂ ಅವಳೂ ಮತ್ತೆ 

ಬಿಸಿ ಗಾಳಿ ಉರಿ ಬಿಸಿಲ ……