ಹುತ್ತಗಟ್ಟದೆ.........


ಕಾವ್ಯ ಯಾತಕ್ಕೆ...? ಹಾಗು ಕಾವ್ಯ ಯಾವಾಗ...? ಈ ಪ್ರಶ್ನೆಗಳು ಕಾವ್ಯ ಮೀಮಾಂಸೆಯ ಪಠ್ಯದಲ್ಲಿ ಸುಳಿದಾಡುವ ನಿತ್ಯ ಪ್ರಶ್ನೆಗಳು. ನಾನು ಕಾವ್ಯ ಮಿಮಾಂಸೆಗಿಂತ ಹೊರತಾಗಿ ನನ್ನ ಅನುಭವದ ಘಟನೆಗಳನ್ನ ಇಟ್ಟುಕೊಂಡು ಕಾವ್ಯ ನನಗೆ ದಕ್ಕಿದ ಬಗೆಯನ್ನ ಹೇಳಿಕೊಳ್ಳುತ್ತೇನೆ. ನಮ್ಮ ಮನೆಯಲ್ಲಿ ಯಾವುದೇ ಕಾವ್ಯ ವಾತಾವರಣವಿರಲಿಲ್ಲ. ಚಿಕ್ಕವಯಸ್ಸಿನಿಂದಲೂ ನನಗೆ ಹಾಡುಗಳೆಂದರೆ ಇಷ್ಟ ಇತ್ತು ಅಷ್ಟೆ. ನಾನು ಹೈಸ್ಕೂಲಿನಲ್ಲಿದ್ದಾಗ ನಮ್ಮ ಮೇಸ್ಟ್ರೊಬ್ಬರು ಮೇಸ್ಟ್ರು ಅಂದ್ರೆ ಹೇಗಿರ್ಬೇಕು ಅಂತ ಬರ್ಕೊಂಡು ಬನ್ನಿ ಅಂತ ಹೇಳಿದ್ದ್ರು. ಎಲ್ರೂ ಲೇಖನ ಬರೀತಾ ಇದ್ದಾಗ ನಾನು ಸ್ವಲ್ಪ ಬಿನ್ನವಾಗಿ ಇರಲಿ ಅಂತ ಹೇಳಿ ವಚನದ ರೀತಿ ಏನನ್ನೋ ಬರೆದುಕೊಂಡುಹೋದೆ, ಅದಕ್ಕೆ ನನ್ನ ಮೇಸ್ಟ್ರು ಯಾರೋ ಬರ್ದಿರೋದನ್ನ ಕಾಪಿ ಹೊಡೀತೀಯ ಅಂತ ಬೈದಿದ್ದರು. ನನ್ನ ಮೊದಲ ಕಾವ್ಯ ಪ್ರಯತ್ನ ಆ ರೀತಿ ಹಾಳಾಗಿತ್ತು. ನಂತರ ನಾನು PU ಅಲ್ಲಿ ಓದೂ ಓದೂ ಅಂತ ಕಳ್ದುಬಿಟ್ಟೆ. ಆದ್ದರಿಂದ ನನಗೆ ಸಾಹಿತ್ಯದಬ್ಯಾಸ ಆಗಲೇ ಇಲ್ಲ. ಇಂಜನೀಯರಿಂಗನ್ನು ಬಿಟ್ಟು ಪದವಿ ತರಗತಿಗಳಿಗೆ ಸೇರಿದ ಮೇಲೆ ಮತ್ತೆ ನನ್ನ ಸಾಹಿತ್ಯದ ಅಬ್ಯಾಸ ಶುರು ಆಯಿತು. ಅದೇ ಸಮಯದಲ್ಲಿ ನಮ್ಮ ಮನೇಲಿ TV ಕೇಬಲ್ ಇಲ್ಲದ್ದರಿಂದ ಸಮಯ ಕಳೆಯಲು ಸಾಹಿತ್ಯ ಓದಲು ಆರಂಭಿಸಿದೆ. ಆಗೆಲ್ಲ ನನಗೆ ಏನನ್ನೋ ಸಾದಿಸಬೇಕು, ದೊಡ್ಡ ಹೆಸರು ಮಾಡಬೇಕು ಅಂತೆಲ್ಲ ಆಸೆಗಳಿತ್ತು. ಆಗ ನನಗೆ ಬರೆಯಲಿಕ್ಕೆ ಬರ್ತಾ ಇದ್ದದ್ದರಿಂದ ಬರವಣಿಗೆಯಲ್ಲಿ ಮುಂದುವರೆದರೆ ದೊಡ್ಡ ಹೆಸರು ಮಾಡಬೊಹುದು. ಕವಿ ಸಾಹಿತಿ ಅಂದರೆ ಎಲ್ಲರೂ ಹೊಗಳುತ್ತಾರೆ ಅಂತ ಅನ್ನಿಸಿದ್ದರಿಂದ ಅದೂ ಇದೂ ಬರ್ಯೋದಕ್ಕೆ ಶುರುಮಾಡಿದೆ. ಬರ್ದು ಯಾರ್ಗೂ ತೋರಿಸ್ತಾ ಇರ್ಲಿಲ್ಲ. ನನ್ನ ಗೆಳೆಯನಿಗೆ ತೋರಿಸಿದ್ರೆ ತುಂಬಾ ಉದಾಸೀನವಾಗಿ ನೋಡ್ತಾ ಇದ್ದ. ಆಗ ನಾನು ಸುಮಾರು ಮೂವತ್ತು ಕವಿತೆಗಳನ್ನ ಬರೆದಿದ್ದೆ( ಅವು ಕವಿತೆಗಳೇ ಅಲ್ಲ, ಆಗ ಅದನ್ನೇ ಕವಿತೆ ಎಂದು ತಿಳಿದಿದ್ದೆ). ಅದರಲ್ಲಿ ಯುದ್ದದ ಬಗ್ಗೆ ಒಂದು ಕವನ ಬರೆದಿದ್ದೆ. ಆಗ ನನಗೆ ಅದೇ ಶ್ರೇಷ್ಠ ಕವನ ಅಂತ ಅನ್ನಿಸಿತ್ತು. ಅದಕ್ಕೆ ಕೆಲವು ದೊಡ್ಡ ಕವಿಗಳಿಗೆ ಕಳುಹಿಸಿ ಅವರಿಂದ ಪ್ರತಿಕ್ರಿಯೆಗಾಗಿ ಕಾಯುತ್ತಾ ಕೂತಿದ್ದೆ. ಸಾಮಾನ್ಯಕ್ಕೆ ನಮ್ಮ ದೊಡ್ಡ ಕವಿಗಳು ದೊಡ್ಡದಾಗಿರುತ್ತಾರೆ, ಆದ್ದರಿಂದ ಅವ್ರಿಗ್ಯಾರಿಗು ಉತ್ತರ ಬರ್ಯೋ ಪುರ್ಸೊತ್ತಿರಲಿಲ್ಲ ಅಂತ ಅನ್ನಿಸುತ್ತೆ ಅದಕ್ಕೆ ಯಾರಿಂದಾನೂ ಉತ್ತರ ಬರ್ಲೇ ಇಲ್ಲ. ಆದರೆ ಒಂದು ದಿನ ಒಂದು ಪೋಸ್ಟ ಕಾರ್ಡ ಬಂತು ಬರ್ದದ್ದು ಶ್ರೀ ಸುಮತೀಂದ್ರ ನಾಡಿಗರು. ಆ ಒಂದು ಪತ್ರ ನನ್ನ ಬದುಕಿಗೆ ಒಂದು ಚೊಕ್ಕಟವಾದ ಹಾದಿ ನಿರ್ಮಿಸಿತ್ತು. ಅವರುಹೇಳಿದ್ದರು "ಪ್ರತಿಭೆಯೊಂದೇ ಸಾಲದು ವ್ಯುತ್ಪತ್ಥಿ ಬೇಕು" ಅಂತ. ನಂಗೆ ವ್ಯುತ್ಪತ್ಥಿ ಅಂತ ಅಂದ್ರೆ ಏನು ಅಂತ ತಿಳೀಲಿಕ್ಕೆ ಎರ್ಡು ದಿನ ಹಿಡೀತು. ಅವ್ರು ತುಂಬಾ ಪುಸ್ತಕಗಳ ಹೆಸರನ್ನ ಕೊಟ್ಟು ಮೊದಲು ಕಾವ್ಯ ಅಂದರೆ ಏನು ಅಂತ ತಿಳಿ ಅಂತ ಹೇಳಿದ್ದರು. ಓದಿದೆ ಅಂದಿನಿಂದ ನಿಜವಾದ ಕಾವ್ಯ ಎಂದರೇನು ಅಂತ ತಿಳೀಲಿಕ್ಕೆ ಓದಿದೆ. ಎಲ್ಲಾನು, ಸಾದ್ಯವಾದಷ್ಟೂ ಓದಿದೆ. ಭಾರತೀಯ ಕಾವ್ಯ ಮೀಮಾಂಸೆ, ಸೌಂದರ್ಯ ಸಮೀಕ್ಷೆ, ನವೋದಯ, ನವ್ಯ, ಆದುನಿಕ, ಬಂಡಾಯ, ವಿಮರ್ಷೆ. ಕಡೆಗೆ ಯಾವುದೋ ಕ್ಷಣದಲ್ಲಿ ಕಾವ್ಯ ಅಂದರೆ ಏನು ಅಂತ ತಿಳಿದಿದ್ದೆ. ಅದೇ ಕ್ಷಣ ನಾನು ಹಿಂದೆ ಬರೆದದ್ದನ್ನು ಎಸೆದು ಬಿಟ್ಟೆ. ಸಾಹಿತ್ಯವನ್ನ ನಾನು ಪ್ರಸಿದ್ದನಾಗಲಿಕ್ಕೆ ಉಪಯೋಗಿಸಲು ಹೊರಟನಲ್ಲ ಅಂತ ಬೇಸರವಾಯಿತು. ನಿಜವಾದ ಸಾಹಿತ್ಯದ ಅರಿವು ನಂಗೆ ಆಯಿತು. ಬೆತ್ತಲಾಗಲು ಸಿದ್ದನಾದೆ.

ಅಲ್ಲಿಗೆ ಮುಗಿದುಹೋಗಬಹುದಿತ್ತು, ಆದರೆ ನಾಡೀಗರು ಪತ್ರ ಮುಗಿಸುವ ಮುನ್ನ "ಮೊದಲು ಬದುಕು ಮುಖ್ಯ" ಅಂತ ಹೇಳಿದ್ದರು. ಅರ್ಥವಾಗಲಿಲ್ಲ.  ಯಾವುದನ್ನ ಮುಂಚೆ ಕೇವಲ ಒಂದು ಸಾಲಾಗಿ ಪರಿಗಣಿಸಿದ್ದನೋ, ಯಾವುದನ್ನ ಉತ್ತರ ಎಂದು ಅಂದು ಕೊಂಡಿದ್ದೆನೋ ಅದು ಪ್ರಶ್ನೆಯಾಗಿತ್ತು. ಮೊದಲು ಅಂದರೆ ಏನು, ಬದುಕು ಅಂದರೆ ಏನು, ಮುಖ್ಯ ಎಂದರೆ ಏನು ಹೀಗೆ ಉತ್ತರದಿಂದಲೇ ರೂಪಗೊಂಡ ಪ್ರಶ್ನೆಯ ಹಿಂದೆ ಬಿದ್ದೆ. ಕಾವ್ಯ ಬರೆಯೋದನ್ನ ನಿಲ್ಲಿಸಿದೆ. ಮೊದಲನ್ನ, ಬದುಕನ್ನ, ಮುಖ್ಯವನ್ನ ಅರಿಸಲು ಅದರ ಹಿಂದೆ ಬಿದ್ದೆ. ತತ್ವಶಾಸ್ತ್ರದಿಂದ ಸಿಗಬೊಹುದು ಅನಿಸಿ, ಸಿಕ್ಕ ಸಿಕ್ಕ ಪುಸ್ತಕ ಓದಿದೆ, ಗೀತೆ, ಉಪನಿಷತ್ತು, ಎಲ್ಲವೂ ಸಾಗಿತು. ವಿವೇಕಾನಂದ, ರಾಮಕೃಷ್ಣ, ಅರಬಿಂದೋ, ಶಂಕರ ಎಲ್ಲರನ್ನೂ ಓದಿದೆ.  ಹೀಗೆ ಏನೇನೋ ಮಾಡಿದೆ. ಅಲ್ಲಿ ಏನೂ ದಕ್ಕಲಿಲ್ಲ ಅಂತ ಹೇಳಲಾರೆ, ದಕ್ಕುವುದಕ್ಕಿಂತ ಪ್ರಶ್ನೆಗಳೇ ಹೆಚ್ಚಾಯಿತು.

ಅದೇ ಸಮಯಕ್ಕೆ, ಎರಡು ಸಾವನ್ನ ಕಂಡೆ. ನಿಜದಲ್ಲಿ ಕಂಡೆ. ಸಾವು ಬೀಭತ್ಸವಾಗಲಿಲ್ಲ ಸುಂದರವೂ ಆಗಲಿಲ್ಲ ಬದಲಿಗೆ ಆಟ ತಿಳಿಯದ ಬಾಲಕ ತಡಕಾಡುವಂತೆ ತಡಕಾಡಿದೆ. ಒಬ್ಬ ವ್ಯಕ್ತಿ, ನನಗಿಂತ ಹಿರಿಯನಾದವ ಆದರೂ ನನ್ನ ನೆಚ್ಚಿನ ಗೆಳೆಯನಾಗಿದ್ದ. ಹಾಗು ನನಗೆ ಹೀರೋ. ಏನು ಬೇಕಾದರೂ ಆತ ಮಾಡಬಲ್ಲ ಅನ್ನೋ ನಂಬಿಕೆ. ಎಷ್ಟೊ ಬಾರಿ ಮಾಡಿದ್ದಾ ಕೂಡಾ. ಅತಿ ಶಕ್ತಿವಂತ, ನಂಬಿಕೆ. ಒಂದು ದಿನ ಮದ್ಯಾನ್ಹದ ಹೊತ್ತಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿರಬೇಕಾದರೆ ಒಂದು ಕರೆ ಬಂದಿತು, ಆ ವ್ಯಕ್ತಿ ಆಸ್ಪತ್ರೆಯಲ್ಲಿ ಇದ್ದ. ನನ್ನ ಹೀರೋ ಆಸ್ಪತ್ರೆಯಲ್ಲಿ ಇದ್ದಾನೆ. ಅವನಿಗ್ಯಾರೂ ಇರಲಿಲ್ಲ. ಅಪ್ಪ ನನಗೆ ಹೇಳಿ ಹೋಗು ಎಂದರು. ಹೋದೆ. ಸರ್ಕಾರಿ ಆಸ್ಪತ್ರೆ ಆತನಿಗೇನಾಗಿತ್ತೊ ತಿಳಿಯದು, ವೈದ್ಯರಿಗು ತಿಳಿದಿರಲಿಲ್ಲ. ಬೆಡ್ ಮೇಲೆ ಮಲಗಿದ್ದ. ಎಲ್ಲಾ ಗಲೀಜು ಮಾಡಿಕೊಂಡಿದ್ದ. ವಾಸನೆ ಬರುತ್ತಿತ್ತು. ಯಾರೂ ಅಲ್ಲಿ ಇರಲ್ಲಿಲ್ಲ. ನನಗೆ ವಾಂತಿ ಆಗೋ ರೀತಿ ಆಗಿ ಹೊರಗೆ ಬಂದೆ. ದೊಡ್ಡದಾಗಿ ಉಸಿರೆಳೆದುಕೊಳ್ಳುತ್ತಿದ್ದ. ಹೋದೆ, ನನ್ನೆಡೆಗೆ ನೋಡಿದೆ. ಒಂದು ಉಸಿರು, ದೊಡ್ಡದಾಗಿ ಎಳೆದು ಕೊಂಡು ನನ್ನೆಡೆಗೆ ನೋಡಿದ, ನಾನೂ ನೋಡಿದೆ, ಮತ್ತೆ ಅವ ಸತ್ತಿದ್ದ. ಆ ಕಣ್ಣುಗಳು, ಆ ಕ್ಷಣ, ಏನನ್ನಾದರೂ ಮಾಡು ಎಂಬಂತಿದ್ದ ಅವನ ನೋಟ, ಏನನ್ನೂ ಮಾಡಲಾಗದ ನನ್ನ ಸ್ಥಿತಿ, ಗಬ್ಬು ವಾಸನೆ, ಸುತ್ತ ಮನುಷ್ಯರು.

ಏನೋ ಮತ್ತೆ ಒಂದು ಸ್ಥಿತಿಗೆ ತಲುಪಿದೆ. ಯಾವುದರಿಂದ ಎಷ್ಟು ಕಲಿತೆ ತಿಳಿಯಲಿಲ್ಲ. ಸ್ಮಾಶಾಣದ ಹತ್ತಿರ ಹೋಗಿ ಕೂತು ತಿಳಿಯಲು ಪ್ರಯತ್ನಿಸಿದ್ದಿದೆ. ಆದ್ರು ವಾಸ್ತವದ ಅರಿವಿತ್ತು ಆದ್ದ್ರಿಂದ ಕಾಲೇಜಿಗೆ ಹೋಗುತ್ತಿದ್ದೆ. ಒಳ್ಳೆ ಅಂಕ ತೆಗೆಯುತ್ತಿದ್ದೆ. ಅದೇ ಸಮಯಕ್ಕೆ ನನ್ನ ಪಕ್ಕದ ಮನೆಯ ಮಡಿ ಅಜ್ಜಿ ಸಹ ಸತ್ತರು.  ಅವರಿಗೆ ಉಸಿರಾಡಲು ಆಗುತ್ತಿಲ್ಲ ಅಂತ ಹೇಳಿದಾಗ ನಾನು ಹೋದೆ. ಮನೆಯಲ್ಲಿ ಅಪ್ಪ ಅಮ್ಮ ಇರಲಿಲ್ಲ. ಏನೇನೋ ಮಾಡಿದೆವು. ಉಸಿರಾಡಲಾಗದ ಆ ನೋವನ್ನ ಕಂಡೆ. ಅವರೂ ಸತ್ತು ಹೋದರು. ಅಷ್ಟೆ ಅಂತ ಅನ್ನಿಸಿತು. ಉಸಿರು, ಪ್ರಾಣ ಕಾಡುತ್ತಲಿತ್ತು.

ಮುಂದೆ ನನಗೆ NITK ಸೂರತ್ಕಲ್ಲ್ ನಲ್ಲಿ MSc ಮಾಡಲು ಅವಕಾಶ ದೊರೆಯಿತು. ಅಲ್ಲಿಗೆ ಹೋದೆ. ಇಲ್ಲಿ ಅನೇಕ ಸಂಗತಿಗಳು ನಡೆಯಿತು. ಮೊದಲಿಗೆ ಒಬ್ಬಂಟಿಯಾದೆ. ಒಬ್ಬೊಬ್ಬರೇ ಕಳಚತೊಡಗಿದರು. ಸಂಬಂದಗಳೆಲ್ಲಾ ಅವಶ್ಯಕತೆಗಳಾಗಿ ಕೆಲವರಿಗೆ ಕಂಡವು. ಯಾರನ್ನ ನಾನು ಹೆಚ್ಚು ನಂಬಿದ್ದೆನೋ ಅವನೇ ನನ್ನ ಮೇಲೆ ನಂಬಿಕೇನೇ ಇಲ್ಲ ಎಂದುಬಿಟ್ಟ. ಪೆಟ್ಟು ಬೀಳತೊಡಗಿತ್ತು. ನನ್ನ ಭಾವನೆಗಳನ್ನ ಅರ್ಥ ಮಾಡಿಕೊಳ್ಳದ ಜೀವಿಯೊಂದು ನನಗೆ ಬಾವನೆಗಳೇ ಇಲ್ಲ ಅಂದುಬಿಟ್ಟಿತು. ನನಗೇ ತಿಳಿಯದಂತೆ ಕಲ್ಲಾಗಲು ಸಿದ್ದನಾಗಿದ್ದೆ. ಬದುಕಿನಲ್ಲಿ ದೊಡ್ಡ ಪೆಟ್ಟುಗಳೇ ಬೇಕೆಂದೇನೂ ಇಲ್ಲ, ಪೆಟ್ಟುಗಳೇ ಬೇಕೆಂದೇನೂ ಇಲ್ಲ, ನಮ್ಮ ನೋಟವೇ ನಮಗೆ ಕಲಿಸುತ್ತದೊ ಏನೋ. ಆ ಸಮಯದಲ್ಲಿ ನಾನು ಅತ್ಯಂತ ಗೌರವಿಸುವ ಮಾತೃಸಮಾನರಾದ ನನ್ನ ಅತ್ತಿಗೆ ತೀರಿಕೊಂಡರು. ನಾನು ಅಳಲಾರದಾದೆ. ಕಣ್ಣೀರು ಬರಲೇ ಇಲ್ಲ. ಆ ನೋವು ತುಂಬಾ ಕಾಡ್ತಾ ಇತ್ತು. ಹೇಳಿಕೊಳ್ಳಲಿಕ್ಕೂ ಯಾರೂ ಇರಲ್ಲಿಲ್ಲ. ಯಾರಮುಂದೆಯೂ ಹೇಳಬೇಕು ಅಂತಲೇ ಅನ್ನಿಸಲಿಲ್ಲ. ಆ ನೋವಿನಿಂದ ಒಂದು ಮೂರ್ತಿ ಮೇಲೆದ್ದಿತು. ಹುಟ್ಟು, ಬದುಕೂ, ಸಾವು ಇವೆಲ್ಲವೂ ಪುಸ್ತಕದೊಳಗಿನ ಪದಗಳಿಂದ ಬಿಡುಗಡೆಗೊಂಡಿತು. ಒಂದು ಸುಂದರ ಬದುಕು ಎದುರಿಗೆ ಕಂಡಿತು. ನನ್ನ ಆ ಸ್ಥಿತಿಯಲ್ಲಿ ನನ್ನೆಲ್ಲಾ ದ್ವಂದ್ವಗಳಿಗೆ ಉತ್ತರವಾಗಿ, ಪ್ರೀತಿಯ ಮೂರ್ತಿಯಾಗಿ, ಒಂದು ಸ್ವತಂತ್ರ ಅಸ್ಥಿತ್ವವೊಂದು ನನ್ನ ಎದುರಿಗೆ ಬಂದು ನನ್ನನ್ನು ಅಪ್ಪಿಕೊಂಡಿತು. ಜೀವಂತ ಮೂರ್ತಿ ಎದುರಿಗೆ ಬಂದು ಮಾತಾಡಹತ್ತಿತು. ಅದರೆದುರು ಜೋರಾಗಿ ಅಳಬಲ್ಲವನಾದೆ, ಜೋರಾಗಿ ನಗಬಲ್ಲವನಾದೆ. ಬೆತ್ತಲಾಗಿ, ನಾನು ಪೂರ್ಣ ನಾನಾಗಿ ಅದರ ಮುಂದೆ ನಿಂತೆ. ಅದು ಅಪ್ಪಿಕೊಂಡಿತು. ಅದು ಕಾವ್ಯವಾಗಿತ್ತು. ಹೀಗೆ ಆ ಕ್ಷಣದಲ್ಲಿ ಕಾವ್ಯ ಎಂಬ ಸ್ವತಂತ್ರ್ಯ ಅಸ್ಥಿತ್ವವು ನನಗೆ ಬದುಕಿನ ಎಲ್ಲವನ್ನೂ ತೆರೆದಿಡಲು ಸಿದ್ದವಾಯಿತು. ಕಾವ್ಯ ನನ್ನ ಜೀವನದ ಮಾರ್ಗವಾಯಿತು. ವಿವಿದ ರೂಪಗಳಿಂದ ನನ್ನ ಎದುರಿಗೆ ಬಂದು ನಿಂತಿತು.  ಹಾಗೆ ನನ್ನೆದುರಿಗೆ ನಿಂತದ್ದನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಕಾವ್ಯ ನನಗೆ ಬದುಕನ್ನ ಕಲಿಸಿತು. ಬದುಕು ಎಷ್ಟು ಸುಂದರ, ಆನಂದಮಯ ಎಂಬುದನ್ನ ನನಗೆ ಕಾವ್ಯ ಕಲಿಸಿ ಕೊಟ್ಟಿತು.

ಇಷ್ಟೂ ಹೊತ್ತೂ ನನ್ನ ಕಂತೇ ಪುರಾಣವನ್ನೇ ಹೇಳಿದ್ದಾಯಿತು. ಈಗ ಸದ್ಯ ನನ್ನ ಚಿಂತನೆಯಲ್ಲಿ ರೂಪಗೊಂಡ ಕಾವ್ಯದ ಬಗ್ಗೆ ಕೆಲವು ಸಾಲುಗಳು.
ನಮ್ಮ ಜೀವನ ಪದ್ದತಿಯ, ಸಂಸ್ಕೃತಿಯ ಹಾಗು ಚಿಂತನೆಗಳ ಒಟ್ಟೂ ಸ್ವರೂಪವನ್ನ ದಕ್ಕಿಸಿಕೊಳ್ಳಲು ಮಾರ್ಗ ಕಾವ್ಯ. ಅದು ಅಂದಿನ ವಾಲ್ಮೀಕಿಯಿಂದ ಇಂದಿನವರೆಗೂ ನಡೆದುಕೊಂಡು ಬಂದ ಪರಂಪರೆ. ಅದು ಭಾರತೀಯದ್ದಾಗಿರಬೊಹುದು ಅಥವಾ ಪಾಶ್ಚಾತ್ಯರದ್ದಾಗಿರಬೊಹುದು. ಯಾವ ರೀತಿ ನಮ್ಮ ಚಿಂತನೆಗಳು ವಿಸ್ತಾರಗೊಳುತ್ತವೆಯೋ ಅದೇ ರೀತಿ ಕಾವ್ಯ ವಿಸ್ತಾರವಾಗಿ ದಕ್ಕುತ್ತದೆ. ಚಿಂತನೆಗಳು ಕಾಲ ದೇಶವನ್ನ ಮೀರಿ ವಿಶ್ವಾತ್ಮಕಗೊಂಡಾಗ ವಿಶ್ವಾತ್ಮಕಗೊಂಡ ಕಾವ್ಯ ದಕ್ಕುತ್ತದೆ. ಆದರೆ ಇಂದು  ಪ್ರಸ್ಥುತ ಸಂದರ್ಭದಲ್ಲಿ ಚಿಂತನೆಗಳು ವಿಶ್ವಾತ್ಮಕಗೊಳ್ಳುವ ಬದಲಾಗಿ ಸಂಕುಚಿತಗೊಳ್ಳುತ್ತಿದೆ. ಅದು ಎಂದಿಗೂ ಮಾರಕ. ಇಂದಿನ ಕನ್ನಡ ಕಾವ್ಯ ಇಂದಿಗೂ ಸುತ್ತಿದ್ದಲ್ಲೇ ಸುತ್ತುತ್ತಿದೆ ಎಂದೇ ನನಗನಿಸುತ್ತಿದೆ. ತ್ವರಿತವಾಗಿ ಮುದ್ರಣಗೊಳ್ಳುವ ವ್ಯವಸ್ಥೆ, ಹೆಚ್ಚು ಪತ್ರಿಕೆಗಳು, ಏನನ್ನಾದರೂ ಪ್ರಕಟಿಸಲೇಬೇಕಾದ ಅವಶ್ಯಕತೆ ಹಾಗು ಎಲ್ಲಕ್ಕಿಂತ ಮುಖ್ಯವಾಗಿ ತ್ವರಿತವಾಗಿ ತಲುಪಿಸಬೇಕಾದ ವ್ಯಾಪಾರೀ ಅನಿವಾರ್ಯತೆ ಎಲ್ಲವೂ ಸೇರಿ ಮರ ಸುತ್ತುತ್ತಿದೆ ಕನ್ನಡ ಕಾವ್ಯ. ಇದಕ್ಕೆ ಸರಿಯಾಗಿ ಕೆಲವು ಬಣಗಳು ಏರ್ಪಟ್ಟು ಎಲ್ಲವನ್ನೂ ವಿಶ್ವವಿದ್ಯಾಲಯದ ಪದವಿಗೆ, ಪುಸ್ತಕ ಬಿಡುಗಡೆಗಳಿಗೆ, ವಿಮರ್ಶೆ ಎಂಬೋ ಹೊಗಳು ಭಟ್ಟಂಗಿಗಳಿಗೆ ಸೀಮಿತಗೊಳಿಸಿ ಅದನ್ನೇ ಕಾವ್ಯ ಎಂದು ಸಿದ್ದವಾಗಿಸಲು ಸದಾ ಪ್ರಯತ್ನಿಸುತ್ತಿದೆ ಹಾಗು ಸಪಲವಾಗಿದೆ. ಇವುಗಳನ್ನೆಲ್ಲಾ ದಿಕ್ಕರಿಸುತ್ತೇನೆ. ಪಡೆಯುವಿಕೆ ಅತ್ಯಂತ ಸಂಕುಚಿತಗೊಂಡ ಸಮಯದಲ್ಲಿ ನಾನು ಬರೆಯುತ್ತಿದ್ದೇನೆ. ಮನುಷ್ಯನ ಜ್ಞಾನವು ಸಂಯುಕ್ತತೆಯಲ್ಲಿ ಪೂರ್ಣ ರೂಪವನ್ನ ಪಡೆಯುತ್ತದೆಯೇ ವಿನಃ ವಿಘಟನೆಯಲ್ಲಿ ಅಲ್ಲ. ಆದ್ದರಿಂದ ಕಾವ್ಯಕ್ಕೆ ತನ್ನ ಹಿಂದಿನ ಕಾವ್ಯ ಪರಂಪರೆ ಎಷ್ಟು ಮುಖ್ಯವೋ ಆಷ್ಟೇ ಇತಿಹಾಸ, ಸಮಾಜ ಶಾಸ್ತ್ರ, ವಿಜ್ಞಾನ, ಕೂಡ.  ಆದುನಿಕ ತತ್ವಶಾಸ್ತ್ರ , ಸಾಪೇಕ್ಷತಾ ಸಿದ್ದಾಂತ, ವಿಕಾಸವಾದ, ಹಾಗು ಕ್ವಾಂಟಮ್ ಬೌತಶಾಸ್ತ್ರ ಬದುಕನ್ನ ಕಾಣುವ ಬಗೆಯನ್ನೇ ಬದಲಿಸಿ ಬಿಡುತ್ತದೆ. ಇವೆಲ್ಲವೂ ಇಂದಿನ ಕಾವ್ಯಕ್ಕೆ ಅವಶ್ಯವಿದೆ ಎಂಬ ಪೂರ್ವ ಪ್ರಜ್ಞೆಯಿಂದ ಸ್ವೀಕಾರಕ್ಕೆ ತೆರೆದುಕೊಂಡಿದ್ದೇನೆ. ಧ್ಯಾನಸ್ಥ ರೀತಿಯಲ್ಲಿ ಒಳನೋಟದಿಂದ ರೂಪಗೊಳ್ಳುವ ಕೃತಿಗೆ ಸದಾ ಹೊರನೋಟವೇ ಮಾದರಿಯಾಗಬೇಕು. ಆದ್ದರಿಂದ ಮಾದರಿಗಳನ್ನ ಹೊರಗಿನಿಂದಾನೆ ಪಡೆದಿದ್ದೀನಿ. ಕಾಣುವುದಕ್ಕಾಗಿಯೇ ಸಿದ್ದನಾಗಿದ್ದೇನೆ. ಕಾಣುವುದು ಎಂಬುದು ನಿತ್ಯ ನಿರಂತರವಾಗಿ ಸಾಗುತ್ತಲೇ ಇರಬೇಕೆಂದು ಬಾವಿಸಿದ್ದೇನೆ.

ನನಗೆ ಬಂದ ಪ್ರತಿಕ್ರಿಯೆಗಳೇನೆಂದರೆ "ಕಾವ್ಯ ಅರ್ಥವಾಗುವುದಿಲ್ಲ" ಎಂದು. ನನಗೆ ಇಲ್ಲೀ ವರೆಗು ಅರ್ಥ ಎಂದರೇನು ಎಂಬುದೇ ತಿಳಿದಿಲ್ಲ. ಯಾಕೆ ಇಂದಿನ ಕವಿತೆಗಳು ಅರ್ಥವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ? ಅದು ಇಂದಿನ ಜೀವನ ಪದ್ದತಿಯಮೇಲೆ ಅವಲಂಬಿಸಿದೆ. ಎಲ್ಲೋ ಹತ್ತು ನಿಮಿಷ ಸಮಯ ಸಿಕ್ಕಿದೆ ಅಲ್ಲಿ ಕವನ ಓದೋದು, ಏನ್ ಕಾವ್ಯ ಅಂದರೆ ಪಾನೀ ಪೂರೀನ. ಕಾವ್ಯ ದಕ್ಕಿಸಿಕೊಳ್ಳುವುದಕ್ಕೇ ಒಂದು ಭಾವ ಬೇಕು.ಅದಕ್ಕೆ ವೇಗದ ಬದುಕಿನಿಂದ ಅಪಾಯ. ವಿಕಾರವಾಗಿ ಬೆಳವಣಿಗೆಗೆ ತೆರೆದುಕೊಂಡ ಪ್ರಜ್ಞೆಗೆ ವಿಕಾಸಕ್ಕೆ ಎಡೆ ಮಾಡುವುದಿಲ್ಲ. ಕಾವ್ಯಾಸ್ವಾದನೆ ಎಂಬೋದು ಪ್ರಜ್ಞೆಯ ವಿಕಾಸದಿಂದ ರೂಪಗೊಳ್ಳಬೇಕಾದಂತಹುದು. ಅದು ಅತೀ ತ್ವರಿತವಾಗಿ ಅರ್ಥವಾಗಿಬಿಡಬೇಕು ಎಂಬೋದು ಮೂರ್ಖತನ. ಕಾವ್ಯಾಸ್ವಾದನೆಯಲ್ಲಿ ಎರಡು ಪ್ರಜ್ಞೆಯ ಮಿಲನವಾಗಬೇಕು. ಒಂದು ಕಾವ್ಯದ್ದೇ ಆದ ಸ್ವತಂತ್ರ್ಯ ಪ್ರಜ್ಞೆ ಮತ್ತೊಂದು ಕಾವ್ಯರಸಿಕನ ಪ್ರಜ್ಞೆ. ಹೀಗೆ ಇವೆರಡರ ಮಿಲನವಾದಾಗ ಅರ್ಥ ಧ್ವನಿಸುತ್ತೆ. ಹಾಗೆ ಮಿಲನಗೊಳ್ಳಲು ಮನಸ್ಸೂ, ಬುದ್ದೀ ಎಲ್ಲವೂ ಸ್ಥಿರತೆಯಲ್ಲಿರಬೇಕು, ಮಿಲನಕ್ಕೆ ತಾಳ್ಮೆಯಿರಬೇಕು. ಹಂತ ಹಂತವಾಗಿ ಏರುತ್ತಾ ಆ ಕಡೆಯ ಹಂತವನ್ನ ಮುಟ್ಟಬೇಕು. ಹೀಗೆ ಮಾಡಲಾಗದವ ಮಾತ್ರ ಕಾವ್ಯ ಅರ್ಥವಾಗುತ್ತಿಲ್ಲ ಎಂದು ಹೇಳುವುದು. ಆತ ಕಾವ್ಯ ಓದಲಿಕ್ಕೇ ನಾಲಾಯಕ್ಕು.

ಕಾವ್ಯದ ಪ್ರಜ್ಞೆಯ ಬಗೆಗೆ ಮಾತನಾಡಿದೆ. ಹೀಗೆ ಮಾತನಾಡಾಲಿಕ್ಕೆ ಕಾರಣವೂ ಇದೆ. ನನ್ನ ಮಟ್ಟಿಗೆ ಕಾವ್ಯಕ್ಕೆ ತನ್ನದೇ ಸ್ವತಂತ್ರ್ಯ ಪ್ರಜ್ಞೆಯಿದೆ. ಅದು ಕೃತಿಕಾರನಿಗೂ ಅವಲಂಬಿಸಿರೋದಿಲ್ಲ. ಕಾವ್ಯಾಸ್ವಾದಿಗೂ ಅವಲಂಬಿಸಿರೋದಿಲ್ಲ. ಅದು ಸರ್ವ ಸ್ವತಂತ್ರ್ಯ ಪ್ರಜ್ಞೆ.  ಇದು ನಾನು ಕಂಡುಕೊಂಡ ಸತ್ಯ. ಅದಕ್ಕೇ ಹೇಳಿದ್ದು ನನಗೆ ಕಾವ್ಯ ಒಂದು ವ್ಯಕ್ತಿಯಾಗಿ ಕಂಡದ್ದು ಅಂತ. ಸುಮ್ಮನೇ ಕೂತಾಗ ಅದೇ ರೂಪಗೊಳ್ಳುವ ಬಗೆಗೆ ಬೆರೆಗಾದೆ. ಹಾಗೆ ರೂಪಗೊಳ್ಳಲಿಕ್ಕೆ ಅಲ್ಲೊಂದು ಮಿಲನವಾಗಬೇಕು. ಕಾವ್ಯದ ಪ್ರಜ್ಞೆಯ ಜೊತೆ ಕೃತಿಕಾರನ ಮಿಲನ ಕೃತಿಯನ್ನ ಸೃಷ್ಠಿಸುತ್ತೆ. ಹಾಗಾದಾಗ ಆ ಕೃತಿಯಲ್ಲಿ ಬರೀ ಪದಗಳಿರೋದಿಲ್ಲ, ಪದಗಳು ಕೇವಲಾ ಅಮೂರ್ತ ರೂಪದ ಮೂರ್ತ ರೂಪಗಳು ಅಷ್ಟೆ. ಪ್ರಜ್ಞೆ ದೇಹವನ್ನ ಅವಲಂಬಿಸಿರುವಂತೆ ಕಾವ್ಯ ಪದಗಳನ್ನ ಅವಲಂಬಿಸಿರುತ್ತೆ ಅಷ್ಟೆ. ಹೀಗೆ ಕಾವ್ಯ ನನ್ನಲ್ಲಿ ರೂಪಗೊಳ್ಳುತ್ತೆ. ಯಾರಿಗಾಗಿಯೂ ನಾನು ಕಾವ್ಯ ಬರೆಯುತ್ತಿಲ್ಲ. " ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ...... ಹಾಡುವುದು ಅನಿವಾರ್ಯ ಕರ್ಮ ನನಗೆ....". ಹೊಸಕಾವ್ಯ ಮಾರ್ಗದಲ್ಲಿ ನಡೆಯಬೇಕೆಂದೂ ಕಾಣಬೆಕೆಂದೂ ಸಿದ್ದನಾಗಿದ್ದೇನೆ. ಮೇಲಿನದರಲ್ಲಿ ಎಷ್ಟೋ ಮಂದಿಯ ಪ್ರಭಾವ ಸೇರಿರುತ್ತದೆ ಅದನ್ನ ಮೀರಿ ನನ್ನದನ್ನ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅದು ಎಷ್ಟರ ಮಟ್ಟಿಗೆ ಸಿದ್ದವಾಗುತ್ತೆ ಎಂಬೋದು ಕಾದು ನೋಡುತ್ತಿದ್ದೇನೆ. ಮುಂದೆ ಮೇಲೆ ಹೇಳಿದ ಅಬಿಪ್ರಾಯಗಳು ಬದಲಾಗಬೊಹುದು. ಬದಲಗ್ಬೇಕು. ಪ್ರಜ್ಞೆ ವಿಸ್ತಾರಗೊಳುತ್ತಲೇ ವಿಶ್ವಾತ್ಮಕಗೊಳ್ಳಬೇಕು. ಕಾವ್ಯ ನನಗೆ ಮಾರ್ಗ, ಅದೇ ನನ್ನನ್ನ ಕರೆದುಕೊಂಡು ಹೋಗುತ್ತದೆ.

ಕಾವ್ಯದ ಬೆಗ್ಗೆ ಆಸಕ್ತಿಯಿರುವವರು ಯಾರು ಬೇಕಾದರೂ ನನ್ನ ಹತ್ತಿರ ಸಂಭಾಷಿಸಬಹುದಾಗಿದೆ. ಆ ರೀತಿಯ ಸಂವಾದಗಳಿಂದ ನಾನು ಏನನ್ನಾದರೂ ಅರಿಯುತ್ತೇನೆಂಬ ಹಂಬಲ ನನ್ನದು. ಬನ್ನಿ ಜೊತೆಗೂಡಿ ಹೊಸ ಕಾವ್ಯವನ್ನ ದಕ್ಕಿಸಿಕೊಳ್ಳೊಣ. ಹಿರಿಯರಲ್ಲಿ ನನ್ನದೊಂದು ವಿನಂತಿಯೆಂದರೆ ಕಿರಿಯರೊಡನೆ ಬೆರೆಯಿರಿ. ಬಿಟ್ಟು ಬನ್ನಿ ನಿಮ್ಮ ದಂತ ಗೋಪುರಗಳನ್ನ. ಹಳೆಬೇರು ಹೊಸಚಿಗುರು ಸೇರಿದರೆ ಮರ ಸೊಬಗು ಎಂಬುದು ತಿಳಿದಿದೆ. ನನಗೆ ಗೊತ್ತು ನನ್ನ ಸತ್ವ ಇರುವುದು ಬೇರುಗಳಲ್ಲೇ ಎಂದು. ಆದ್ರೆ ಅದೆಕೋ ಬೇರಿಗೆ ಚಿಗುರು ಕಾಣುತ್ತಿಲ್ಲ. ಬೇರಿಗೆಲ್ಲಾ ಆ ಅಹಂ ಇದೆ. ನನ್ನಿಂದಲೇ ಮರ ಎಂಬೋದು. ಆದ್ರೆ ಚಿಗುರಿಲ್ಲದೆ ಮರ ಬೆಳೆಯುವುದಿಲ್ಲ ಎಂಬ ಅರಿವು ಬೇರಿಗಾದಾಗ ಮರದ ಬೆಳವಣಿಗೆ ಸಾದ್ಯ. ಇನ್ನು ನನ್ನ ಕವನಗಳನ್ನ ನೀಡುತ್ತಿದ್ದೆನೆ. ಇವುಗಳು ಸುಮಾರು ಮೂರು ವರ್ಷಗಳ ಕಾಲಾವದಿಯಲ್ಲಿ ರೂಪಗೊಂಡವುಗಳು. ಎಲ್ಲವೂ "ಕೆಂಡಸಂಪಿಗೆ"ಯಲ್ಲಿ ಪ್ರಕಟವಾದವುಗಳು. ಅಬ್ದುಲ್ ರಶೀದ್ ರವರಿಗೆ ದನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಕಿರಿಯನೊಡನೆ ಬೆರೆತು ಆಗಾಗ ಸಲಹೆಗಳನ್ನಿತ್ತ ಶ್ರೀ ಕೆ. ವಿ. ತಿರುಮಲೇಶ್ ರವರಿಗೂ ವಂದಿಸುತ್ತಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಶ್ರೀ ಸುಮತೀಂದ್ರ ನಾಡಿಗರಿಗೆ ವಂದನೆಗಳು. ಇನ್ನು  ಕವನಗಳು.  

3 ಕಾಮೆಂಟ್‌ಗಳು: