[ಹುಟ್ಟು, ಪ್ರೀತಿ, ಅಮ್ಮ, ಸಂದೇಹ, ಸಾವು. ಇವು ನನಗೆ ಏನೂ ತಿಳಿಯದ ಕೆಲವು ಸಂಗತಿಗಳು.ಮನುಷ್ಯನಿಂದ ತಿಳಿಯಬಹುದ?, ಪ್ರಯತ್ನಿಸಿದೆ. ದಕ್ಕಿದ್ದನ್ನ ಇಲ್ಲಿ ಮನುಷ್ಯ ಅನ್ನೋ ಭಾಗದಲ್ಲಿ ಬರೆದಿದ್ದೇನೆ. ಅಲ್ಲಿ ದಕ್ಕದ್ದನ್ನ ಕೈಯಲ್ಲಿ ಮಣ್ಣನ್ನ ಹಿಡಿದು ಸುಮ್ಮನೆ ಕೂತಾಗ ಮಣ್ಣಲ್ಲಿ ಕೆಲವು ಸಂಗತಿಗಳು ಕಂಡಿವೆ. ಅವನ್ನ ಮಣ್ಣು ಎಂಬೋ ಭಾಗದಲ್ಲಿ ಬರೆದಿದ್ದೇನೆ. ಕಡೆಗೆ ಮಾತು ಎಂಬ ಭಾಗದಲ್ಲಿ ಎರಡನ್ನೂ ಬೆರೆಸುವ ಪ್ರಯತ್ನ ಮಾಡಿದ್ದೇನೆ,,,
ಆದರೂ,
ಮಣ್ಣಿನಲ್ಲಿ ನನಗೊಂದು ಜೀವ ಭಾವ ಕಂಡಿತು, ನಾನು ಅತ್ತು ಬಿಟ್ಟೆ, ಏನೂ ಮಾಡಲಿಕ್ಕಾಗಲಿಲ್ಲ
ಇಲ್ಲಿ ನಾನಿದ್ದೇನೆ ನನ್ನ ಜೊತೆಗೆ ಮನುಷ್ಯನಿದ್ದಾನೆ.
ಇಲ್ಲಿ ನಾನಿದ್ದೇನೆ ನನ್ನ ಜೊತೆಗೆ ಮಣ್ಣಿದೆ.
ನನಗೆ ಮಣ್ಣು ಕಂಡ ರೀತಿ, ಮಣ್ಣಿಗೆ ನಾ ಕಂಡ ರೀತಿಯೇ
ಅಥವ
ನನಗೆ ಮನುಷ್ಯ ಕಂಡ ರೀತಿ, ಮನುಷ್ಯನಿಗೆ ನಾ ಕಂಡ ರೀತಿಯೇ
ಇಲ್ಲಿನ ರಚನೆ]
೧.ಹುಟ್ಟು
ಮನುಷ್ಯ
ಒಂದು ಗಂಡು
ಒಂದು ಹೆಣ್ಣು
ಒಂದಾದಾಗ
ಒಂದು ಮಗು
ಹುಟ್ಟಿತು
ಹುಟ್ಟು ಎಂದರು
ಮಣ್ಣು
ಮಣ್ಗೆಂತ ಗಂಡು,
ಮಣ್ಗೆಂತ ಹೆಣ್ಣು,
ಮಣ್ಣುಟ್ತು
ಹುಟ್ಟು ಅಂದ್ರು.
ಮಾತು
ಪ್ರತೀ ಪಾತ್ರ
ಸಮ್ಮಿಲನದಲ್ಲಿ ಉದ್ಗಮಗೊಂಡದ್ದು
ಪ್ರಸ್ಥಾನಕ್ಕೆ ಪ್ರಸವ ದಿನವೇ ನಾಂದಿ
ಕಕ್ಷದ ಸುತ್ತ ಪರಿಬ್ರಮಿಸುವ ಪಾತ್ರ.
೨.ಪ್ರೀತಿ
ಮನುಷ್ಯ
ಒಮ್ಮೆ
ಒಂದು ಗುಲಾಬಿಯಿಂದ
ಎರಡು ಜೀವಿಗಳು
ಒಂದಾ
ಗುವಿಕೆಯನ್ನು
ನಾ
ಕಂಡಿದ್ದೆ
"ಒಂದು ಗುಲಾಬಿ, ಎರಡು ಜೀವ ಮತ್ತು ನಾನು"
ಒಂದು ಹುಡುಗ ಒಬ್ಬ ಹುಡುಗಿಯನ್ನ ಪ್ರೀತಿಸಿದ
ಒಂದು ಹುಡುಗಿ ಒಬ್ಬ ಹುಡುಗಿಯನ್ನ ಪ್ರೀತಿಸಿದಳು
ಮನುಷ್ಯರು ಯಾಕೆ ಪ್ರೀತಿಸುತ್ತಾರೆ?
ಈಗ ನನ್ನದೊಂದು ಪ್ರೇಮ ಕಾವ್ಯ
"ಅವಳನ್ನ ಬಿಟ್ಟಿರಲಿಕ್ಕಾಗದಿದ್ದಕ್ಕೆ ಅವಳ ಜೊತೆಗೇ
ಸೇರಲಿಲ್ಲ
ಅವಳು ಉತ್ತು ಬಿತ್ತು ಮೊಳಕೆಗೆ ಹೂತಿಟ್ಟು ಬೆಳೆದು
ತೆನೆಗೂಡಿಸಿ ಹೊತ್ತು ತಂದು ಕಾಸಿ ಬೇಸಿ
ಅನ್ನ ಮಾಡಿಟ್ಟು ಕೊಟ್ಟು ಬಿಟ್ಟಳು"
ಮಣ್ಣು
ತಾನೊಂದು ರೂಪ್ವಾಗ್ಬೇಕು ಅಂತೇಳಿ
ನೀರ್ನೊಡನೆ ಸೇರಿ
ಹೆಂಟೆ ಆತು
ಹೆಂಟೆಯಿಂದ ಎರ್ಡು ರೂಪ ಪಡೀತು
ಆ ಎರ್ಡು
ರೂಪ್ಗಳು
ಸೇರ್ಲಿಕ್ಕಾಗ್ದೆ
ಮತ್ತೆ ನೀರ್ಗೆ
ಸೇರಿ ಕರ್ಗಿ
ಒಂದಾತು
ಇದ ಮಣ್ಣ ಪ್ರೇಮ್ಗೀತೆ....
ಮಾತು
"ಜೀವ ಜೀವಕು ಒಂದು ಜೀವದ ಅನುರಣನೆ
ಅದರದೇ ವೃತ್ತಿ ಪ್ರವೃತ್ತಿ ಆವೃತ್ತಿ
ಒಂದು ಬಂಧದ ಹಿಂದೆ ಸಹಸ್ರ ಸ್ವಾತಂತ್ರ್ಯ ಪಕ್ಷಿ
ಪ್ರೀತಿ ನನ್ನೊಳಗೆ ಮಿಥುನಗೊಂಡ ಪಕ್ಷಿ"
೩ ಅಮ್ಮ
ಮನುಷ್ಯ
ಅಮ್ಮ,
ನೆಲದಲ್ಲೆಲ್ಲೋ ಬಿದ್ದ ಮುದ್ದೆ ಮಾಂಸಕ್ಕೆ
ತನ್ನದೇ ರೂಪ, ತನ್ನದೇ ಕಣ್ಣು, ತನ್ನದೇ ಜೇವ ಎಂದೆಯಲ್ಲೆ
ಹೌದು ನಿನ್ನವೆ
ಜೀವ ಎರಡಾಗಿ ಪಡೆದದ್ದು.
ಹುಟ್ಟಿಸಿದೆಯೆಂಬುದಕ್ಕಾಗಿ ಇಷ್ಟೆಲ್ಲಾ ನೀನು ಮಾಡಲಿಲ್ಲ, ಮಾಡಿದ್ದು
ಒಂದು ಭಾವಕ್ಕೆ
ಎಲ್ಲಾ,
ಈ ಕ್ಷಣದಲ್ಲಿ ತಡಬಡಿಸುತ್ತಿದ್ದೇನೆ,
"ಬದುಕು ಅರ್ಥವಾಗುತ್ತಿಲ್ಲ,
ಯಾಕೆ ಇದು ಹೀಗೆ, ಪ್ರತೀ ಪ್ರಶ್ನೆ"
ಹೋಗಲೇಬೇಕು
ಈ
ಕ್ಷಣ
ನಿನ್ನನ್ನು
ಬಿಟ್ಟು
ನೀನು ಅಮ್ಮ, ನಾನು ಮಗ ಎಂಬೋ
ಭಾವ
ದಲ್ಲಿ ಹೊರಡುತ್ತಿದ್ದೇನೆ.
ಭಾವ ಎರಡಾಗುವುದಿಲ್ಲ
ಆದರೂ ಇರಬಹುದು ಇದೂ ಒಂದು
ನಾನು ಅಮ್ಮನಾಗುವ, ನೀನು ಮಗನಾಗುವ
ಆತ್ಮ ಸಂಗಾತ
ಮಣ್ಣು
ವಿಶಾಲ್ವಾದ ಬೀದಿ
ಅಲ್ಲ, ದೊಡ್ಬಯಲನ್ನ ಬೀದೀ ಅಂತ ಕರ್ದದ್ದು
ಅಲ್ಲಿ
ಬ್ಯಾವರ್ಸಿಯಾಗಿ, ಬಿಕಾರಿಯಾಗಿ, ಬಿಕ್ರಿಯಾಗೋವರ್ಗು ಓದಾಗ
ಮಣ್ಣು ಆಗ ನನ್ನವ್ವ
ಆಗಿ
ಕಳ್ದೋದೋನು ನಾನು
ಕಳ್ಕೊಂಡೋಳು ನೀನು
ಕಳ್ದೋದ್ಮಗ ದೊರೆತದ್ದಕ್ಕೆ
ಬಿಗಿದಪ್ಪಿ ರಂಬಿಸಿ ಮುದ್ದಿಸಿದೆಯಲ್ಲೆ
(ನಾನು, ಮಣ್ಣು ಇಬ್ಬರೂ ಅತ್ತು ಬಿಟ್ಟೆವು)
ಏನೂ ಅಲ್ದದು, ಎಲ್ಲಾನೂ ಹುಟ್ಸತ್ತೆ
ತನ್ನೊಳಗಿದ್ದದ್ದನ್ನ ಜೋಪಾನ್ವಾಗಿ
ಕಾಪಾಡಿ ಬೆಳೆಸಿ ಪಸ್ರಿಸುತ್ತೆ
ನನ್ಮಣ್ಣೆ
ಮಾತು
ದಶಮ ರಸವೀ ಮಾತೃತ್ವ , ಎಲ್ಲಿಯದದು ಇಲ್ಲಿ
ಮಣ್ಣು ನನಗೆ ತಾಯಾಯಿತೊ? ಮಣ್ಣಿಗೆ ನಾ ಮಗುವಾದೆನೋ?
ಮಣ್ಣಿಗೆ ನಾ ತಾಯಾಗುವುದೆಂತು?
ಮಣ್ಣು ನನ್ನೊಳಾಡುವ ಮಗುವಾಗುವುದೆಂತು?
೪ ಸಂದೇಹ
ಮನುಷ್ಯ
ಮಾಧ್ವ ಸರೋವರದಲ್ಲಿ ಒಂದು ಮೀನು ಕಂಡಿತ್ತು
ಸೀತಾ ನದಿಯಲ್ಲಿ ಒಂದು ಮೀನು ಕಂಡಿತ್ತು
ನಮ್ಮ ಮಾಕಾಹಳ್ಲಿಯ ಉತ್ತರ ಪಿನಾಕಿನಿಯಲ್ಲೂ
ಒಂದು ಮೀನು ಕಂಡಿತ್ತು,
ಮೂರೂ ಕಡೆ ಕಂಡದ್ದು ಒಂದೇ ಮೀನಾ?
ಅಥವಾ ವಿಭಿನ್ನವಾ?
ಅಂತಃ ಪ್ರಜ್ಞೆಯ ಮೂಲ ಮಾರ್ಗದಿ ಹರಿವ ಭಾವವೇ
ನಿನ್ನ ಆಳ್ವಿಕೆಯಲ್ಲಿ ನಾನೋ? ನನ್ನ ಆಳ್ವಿಕೆಯಲ್ಲಿ ನೀನೋ?
ಅಧಿಕಾರ ಸ್ಥಾಪಿತ ಕ್ರಿಯೆಯ ಹಿಂದಿನ ಪಾಲುದಾರರು ಯಾರು?
ಬದುಕು ಈ ದ್ವಂಧ್ವಗಳಲ್ಲೇ ಮರೆಯಾದೀತೇನೋ ಎಂಬ
ಭಯದಿಂದ,
ನಾವಿರುವುದು ನಾಲ್ಕು ಆಯಾಮದ ದೇಶಕಾಲ
ಒಂದು ಆಯಾಮದ ಕಾಲ ಮೂರು ಆಯಾಮದ ದೇಶ
ಆಯಾಮವೇ ಮೀರಿ ಹೊರ ನಡೆದರೆ...?
ಶೂನ್ಯ ಆಯಾಮವೂ ಉಂಟು, ಅನಂತ ಆಯಾಮವೂ ಉಂಟು
ಮತ್ತೇ.........
ಮಣ್ಣು
ಒಂದ್ಮೀನನ್ನ ಮಣ್ಣಲ್ಲಿ ಹೂತಿಟ್ರು, ಮಣ್ಣಾತು
ಮೂರ್ಮೀನನ್ನೂ ಮಣ್ಣಲ್ಲಿ ಹೂತಿಟ್ರು, ಮಣ್ಣಾತು
ದ್ವಂಧ್ವ ಅಂತ ಬೆಂದ ಮನುಸ್ಯನ್ನೇ ಹೂತಿಟ್ರು
ಅಯ್ಯಾ ಅದು ಮಣ್ಣಾತು
ಅದ್ಕೆ ಮಣ್ಗೆ ಸಂದೇಹಾನೇ ಇಲ್ಲ.....
ಮಣ್ಣು ಆದದ್ದ ನಾದದಿಂದ
ನಾದ್ಕೆ ಆಯಾಮ್ವಿಲ್ಲ
ಅಂದ್ರೆ
ಮಣ್ಣಲ್ಲಿ ಸೂನ್ಯ ಆಯಾಮ್ವೂ ಉಂಟು, ಅನಂತ ಆಯಾಮ್ವೂ ಉಂಟು
ಅತ್ವಾ
ಮಣ್ಣಲ್ಲಿ ಸೂನ್ಯ ಆಯಾಮ್ವೂ ಇಲ್ಲ, ಅನಂತ ಆಯಾಮ್ವೂ ಇಲ್ಲ
ಮಾತು
ಆತ್ಮ ಸಾಕ್ಷಿಯ ಅಂತಸತ್ವದ ಭಾವಕೇಕೆ ಹೆಸರು?
ಜೀವವುದಿಸಿದ ಶೇಷ ನೋಟಕೆ ಅದೇನು ಅಕ್ಷ ದೃಷ್ಠಿ
ಸಿಲುಕಿದ ವ್ಯಾಖ್ಯಾನಕೆ ಅರ್ಥವೇ ದ್ವೇಶಿ ಬಿಂಬಿ
ಅಂತ್ಯವಲ್ಲದ ಧ್ವಂಧ್ವ ಸತ್ಯಕೊಂದು ನಿತ್ಯಾರಂಬಿ
೫ ಸಾವು
ಮನುಷ್ಯ
ನನಗೆ ಎದುರಾದದ್ದು ಅವನ ಕಣ್ಣುಗಳಲ್ಲಿ
"ಇಪ್ಪತ್ತೈದು ವರ್ಷದ ತುಂಬು ಯವ್ವನ
ಭಯಂಕರವಾಗಿ ಸಾಧಿಸಿಬಿಡಬೇಕೆಂಬ ಹುಮ್ಮಾಸ್ಸಾಗಲಿ, ಛಲವಾಗಲಿ, ಅವಶ್ಯವಾಗಲಿ
ಯಾವುದೂ ಇರದೆ
ತನ್ನ ಅರ್ದ ಕಟ್ಟಿದ ಸೂರಿಲ್ಲದ ಮನೆಯಲ್ಲಿರಲಿಕ್ಕಾಗದೆ
ನಮ್ಮದೆ ಅರ್ಧ ಬಿದ್ದು ಹೋದ ಮನೆಯಲ್ಲಿ ವಾಸ
ಎಲ್ಲರೂ ಮುದ್ದಾಗಿ ಅವನನ್ನ ಪ್ರಾಣಿ ಅಂತ ಕರೀತಿದ್ದರು.
ಅವನಿಗೂ ಒಂದು ಹೆಸರಿತ್ತು, ಹೆಸರು ಅರುಣ.
ಅಪ್ಪ ಅಮ್ಮ ಸತ್ತು ಹೋಗಿದ್ದರು, ಅಕ್ಕ ಓಡಿ ಹೋಗಿದ್ದಳು, ಮದುವೆ ಆಗಿರಲಿಲ್ಲ
ಇನ್ಯಾರೂ ಇರಲಿಲ್ಲ.
ಬೆಳಗ್ಗೆ ನನ್ನೊಡನೆ ಜಗಳ ಆಡಿದ, ರೇಗಿಸಿದ, ನಗಿಸಿದ, ಜೊತೆಗೆ ಸಿಕ್ಕದ್ದನ್ನೆಲ್ಲ ತಿಂದವ
ಸಂಜೆ ಅವ ಹುಟ್ಟಿದ ಆಸ್ಪತ್ರೆಯಲ್ಲಿ
ಸುಮ್ಮನೆ
ಮಲಗಿದ್ದ
ಕರೆದ
ಪ್ರಾಣಿಯ ಪ್ರಾಣ ಹೊಗುವ ಕ್ಷಣ
ಒಮ್ಮೆಗೇ ಉಸಿರೆಳೆದುಕೊಂಡ
ನನ್ನನ್ನೇ
ನೋಡುತ್ತಿದ್ದ ಅಷ್ಟೆ...
ಪ್ರಾಣ ಹೋಗಿತ್ತು
ನನಗೆ
ಕಾಣದಂತೆ
ಪ್ರಾಣಿ ಸತ್ತಿದ್ದ.
ನನ್ನನ್ನೇ
ದಿಟ್ಟಿಸಿ ನೋಡುತ್ತಿದ್ದ ಕಣ್ಣುಗಳನ್ನು ಎಂದಿಗೂ ಮರೆಯಲಾರೆ
ಕೆಲವರು
ಹೇಳುತ್ತಾರೆ
ಪ್ರಾಣ ಕಣ್ಣಲ್ಲಿ ಹೋಯಿತು ಅಂತ
ಆಗ ಆ ಕಣ್ಣುಗಳಲ್ಲಿ ಏನೋ ಭಾವವೊಂದು ಕಂಡಿತ್ತು
ಏನದು...?
ಇಂದಿಗೂ ನನಗೆ ತಿಳಿಯುತ್ತಿಲ್ಲ......
ಮಣ್ಣು
ನಾನೂ ನನ್ಮಣ್ಣೂ ಜೊತ್ಗೂಡಿ ನಡ್ವಾಗ
"ಮಣ್ಣೇ ನಿನ್ಗೆ ಸಾವಂದ್ರೆ ಗೊತ್ತೇ..?"
"ಏನೋ..? ಆದ್ರೆ ಸಾವ್ನ ಭಾವ ಕಾಡಿದೆ, ತಟ್ಟಿದೆ."
ಬಾ ಇಲ್ನೋಡು
ಎಂದು ಒಂದು ಮಗಾನ ತೋರ್ತು
ಅದು ಹೆಂಗಿತ್ತು ಗೊತ್ತೆ?
ಗಂಡ್ಸು ನಾನು
ನನ್ನಲ್ಲೂ ಹಾಲೂರ್ತು, ಎದೆ ಸ್ಥನ್ವಾಗಿ ಮೊಲ್ಯಿಂದ ಹಾಲ್ ಜಿನಿಗ್ತು.
ಹಾಲೂಣಿಸ್ಬೇಕೆಂತ ಎತ್ಕೋಳ್ಳೋಕೆ ಮುಂದಾದೆ,
ನಾ ಗಂಡ್ಸು ಎಂಬೋದ ಮರ್ತು
ಮಣ್ತಡೀತು
"ಆ ಮಗಾನ ಎತ್ತಿ ಬೆಳೆಸ್ಬೇಡ, ಸಾವು ಸನ್ನಿಹಿತ,
ಅದೇ ನನ್ಗೆ ಕಾಡಿದ್ಬಾವ"
ಮನೀಗೆ
ಹಿಂತಿರ್ಗಿದ್ಮೇಲೆ
ನನ್ ಚಿಕ್ವಯಸ್ಸಿನ್ಮಗುವಿನ್ ಫೋಟೋನ
ನೋಡ್ಬೇಕಂತ
ತೆರ್ದಾಗ, ಅರೆ
ಅಲ್ಲಿ ಕಂಡ್ಮಗ ನಾನೇ,
ನನ್ಸಾವು ಮಣ್ಗೆ ಭಾವವಾಗಿ ಕಾಡಿದ್ಯಾ
ನಾನ್ ಸಾಯ್ತಿರೋದೆಲ್ಲಿ?
ಮಾತು
ಸಂಬಂದವೇ ಇಲ್ಲದ ಕೊಂಡಿಯ ರಚನೆ ಸಾವು ಬದುಕು
ನಿರ್ಮಿತಿಯ ಆಕೃತಿಯೊಳಡಗಿರುವ ಕೃತಿ ಹರೆಯ
ಕಾಣದ ಜೀವಿಯ ಜೀವವು ಸಾವಿನ ಪ್ರಾತ್ಯಕ್ಷಿಕೆ
ಕಾಡಲಿ ನಡೆವ ವಿಶ್ವ ಯಜ್ಞಕೆ ಮೂರ್ತ ರೂಪದಳೊಡಗಿದೆ ಅಮೂರ್ತ ಬದುಕು.
ಅಂತ್ಯ
ಪಟ್ಟು ಹಿಡಿದು ವಾಸ್ತವಕ್ಕೆ ಹಂಬಲಿಸಿ
ಕನ್ನಡಿಯ ಬಿಂಬಕ್ಕೆ ಕೊಟ್ಟ ಕಲ್ಲು ಪೆಟ್ಟು
ತಾಕಿದ್ದು
ನನ್ನದೊಂದು ಭಾವ
ವೃತ್ತಗಳಲ್ಲಿನ ವಾಸ್ತವದ ಮುಖಾ ಮುಖಿಗೆ
ಶೂನ್ಯ ಚುಂಬನದ ದಿಗಂಬರ ದೃಷ್ಠಿ
ಬದುಕಿನ ಸಾರ್ಥಕ್ಯದ ವ್ಯಾಖ್ಯ ಏನು?
ಮನುಷ್ಯ ಮಣ್ಣಾಗುವುದಲ್ಲ
ಮಣ್ಣು ಮನುಸ್ಯ ಆಗೋದು.......
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ