"ಸಾಕ್ಷಿಪ್ರಜ್ಞೆ--ಎಲ್ಲವನ್ನೂ ಸಾಕ್ಷಿಯಾಗಿ ನೋಡುವ ನಿಲುವು"
..ಕನ್ನಡ ನಿಘಂಟು
"ತನ್ನತನದ ಅರಿವು ಮನುಷ್ಯತ್ವದ ವಿಶೇಷ ಲಕ್ಷಣ......ಮನುಷ್ಯತ್ವದ ವಿಶೇಷಲಕ್ಷಣವಾದ ಈ ಸಾಕ್ಷಿಪ್ರಜ್ಞೆಯ ಬೆಳವಣಿಗೆಯೆ ಮನುಷ್ಯನ ನಿಜವಾದ ಬೆಳವಣಿಗೆ ಎನ್ನಬಹುದು...."
ಗೋಪಾಲಕೃಷ್ಣ ಅಡಿಗ "ಸಾಕ್ಷಿಯ ಮುನ್ನುಡಿಯಲ್ಲಿ"
ಬರವಣಿಗೆಯನ್ನ ಆರಂಬಿಸಿದ್ದೇನೆ. ನನ್ನೊಡನೆ ನಡೆವ ನಿತ್ಯ ಮುಖಾಮುಖಿ. ಸಮಾಜದೊಡನೆ ಸಂವಾದ. ಸಾಕ್ಷಿಪ್ರಜ್ಞೆಯ ಹಾದಿ. ನಾನು ಯಾಕೆ ಬರೆಯುತ್ತೇನೆ ಇನ್ನೂ ಅಷ್ಟು ಸ್ಪಷ್ಟವಾಗಿಲ್ಲ. ಆದರೆ ಬರೆಯದೆ ಹೋದರೆ ಉಸಿರುಕಟ್ಟಿದಂತೆ ಆಗುತ್ತದೆ. ಆ ಕಾರಣಕ್ಕೆ ಬರೆಯುತ್ತೇನೆ. ಈಗ ಈ ಬ್ಲಾಗ್ ಅನ್ನು ಆರಂಬಿಸಿ ಅದರಲ್ಲಿ ನನ್ನ ವಿಚಾರಗಳನ್ನು ತಿಳಿಸಲು ಹೊರಟಿದ್ದೇನೆ. ನನ್ನೆಲ್ಲಾ ಗೆಳಯರಿಗೆ ಒಂದು ವಿಚಾರವನ್ನ ಹೇಳಬೇಕಿದೆ. ನಾನು ಕಾಲ ಹರಣಕ್ಕೆ ಬರೆಯುತ್ತಿಲ್ಲ. ಆದ್ದರಿಂದ ಕಾಲಾಹರಣಕ್ಕಾಗಿ ಓದಬೇಕೆಂದು ಬಯಸುವವರು ದಯವಿಟ್ಟು ಇದನ್ನ ಓದಬೇಡಿ. ನಿಮ್ಮ ಸಮಯ ವ್ಯರ್ಥ. ಬೇರೇನನ್ನಾದರೂ ಮಾಡಿ. ಬರವಣಿಗೆ ನನ್ನನ್ನು ಹುಡುಕಿಕೊಳ್ಳುವ ತವಕದ ಹಾದಿ. ಇಲ್ಲಿ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳಬೇಕಿದೆ. ಆ ಪ್ರಶ್ನೆಗಳಿಗೆ ಹಾಗು ನನ್ನಲ್ಲೆ ನನಗೆ ಕಂಡ ಉತ್ತರಗಳಿಗಾಗಿ ಈ ಬರಹಗಳು.
ಅಂತರಂಗದ ಭಾವಗಳನ್ನ ವೀಕ್ಷಿಸುವಾಗ ಸದಾ ನನ್ನಲ್ಲಿ ದ್ವಂದ್ವಗಳಿಂದ ಸರಿ ತಪ್ಪುಗಳ ಪ್ರತೀ ಲೆಕ್ಕಾಚಾರಗಳು ಏಳುತ್ತಲೇ ಇರುತ್ತವೆ. ಬದುಕನ್ನು ದರ್ಶಿಸುವ ಮಾರ್ಗಗಳಲ್ಲಿ ಸಾಗುವಾಗ ನಿತ್ಯವೂ ದ್ವಂದ್ವಗಳೊಳಗಿಂದ ವೀಕ್ಷಣೇ ಆರಂಭ. ಈ ಹಲವು ವರ್ಷಗಳಲ್ಲಿ ಬದುಕಿನ ಧ್ವನಿಗ್ರಹಿಕೆಯ ಮಾರ್ಗಗಳ ಶೋಧನೆಯಲ್ಲಿ ನಿರತನಾದಾಗ ಹಲವು ಮಾರ್ಗಗಳಲ್ಲಿ ಬದುಕನ್ನು ಸ್ವೀಕರಿಸುವುದು ಅವಶ್ಯವಾಗಿ ಕಂಡು ಬಂದಿದೆ. ಆ ದರ್ಶನವು ಸಾಕ್ಷಿಪ್ರಜ್ಞೆಯ ಪಥದಲ್ಲಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಕರ್ತವ್ಯ. ಸದ್ಯದ ಸ್ಥಿತಿಯಲ್ಲಿ ಎಲ್ಲಾ ದಿಕ್ಕುಗಳಲ್ಲೂ ಅನುಮಾನ ಆಕ್ರಮಣದಿಂದ ಕೂಡಿದ್ದರೂ ಎಲ್ಲೋ ಒಂದು ಕಡೆ ನಂಬಿಕೆ, ಜೀವನ ಪ್ರೀತಿ, ತುಂಬಿದೆ. ಅದು ಎಲ್ಲಿ? ಹೇಗಿದೆ? ಹೇಗೆ ಅದನ್ನ ಪಸರಿಸಬೊಹುದು. ಇವೆಲ್ಲವು ನನಗೆ ಕಾಡುತ್ತಿರುವ ಪ್ರಶ್ನೆಗಳಾಗಿದೆ.
ಸಿದ್ದ ಉತ್ತರಗಳನ್ನ, ಸಿದ್ದ ಮಾತುಗಳನ್ನ ದಿಕ್ಕರಿಸುತ್ತಿದ್ದೇನೆ. ನನ್ನ ಮಾತುಗಳ್ಯಾವುದಕ್ಕೂ ಉತ್ತರಗಳಿಲ್ಲ. ಅಥವ ನನಗೆ ಉತ್ತರಗಳು ಗೊತ್ತಿಲ್ಲ. ಹಾಗಾದರೆ ಇದೇನು, ಅಥವ ಇದ್ಯಾತಕ್ಕೆ ಅಂತ ಕೇಳಿದರೆ ಉತ್ತರ ಹುಡುಕಲಿಕ್ಕೆ ಹೋಗುತ್ತಿದ್ದೇನೆ ಅಂತ ಹೇಳಲಿಕ್ಕೆ. ಸದ್ಯ ಇರುವುದನ್ನ, ಹಳಸಿದ್ದನ್ನ, ಗಬ್ಬುನಾತ ಬೀರುತ್ತಿರುವುದನ್ನ ಕಿತ್ತು ಹೊರಟುಹೋಗಲಿಕ್ಕೆ. ಸಾಕಾಗಿ ಹೋಗಿದೆ ಪದಗಳ ತೆವಲು. ಎಲ್ಲೆಲ್ಲೂ ಅಪ್ರಾಮಾಣಿಕತೆ, ಸುಮ್ಮನೆ ಹೇಳ್ತಾ ಇಲ್ಲ. ಎಲ್ಲವನಿಗೂ ಅದೇ ಬೇಕು. ಅದೇ ಪದಗಳು, ವಿಚಿತ್ರ ಅರ್ಥಗಳು, ಸೂಟುಗಳು ಅಲ್ಲೊಂದು ಮೈಕು. ಕೂಗುವ ಮಂದಿ. ಚಪ್ಪಾಳೆ ತಟ್ಟುವ ಮಂದಿಗೆ ಬಿಸಿ ಬಿಸಿ ಚಹ. ಗುಲಾಮರು ಇವರು. ಅವರ ಪ್ರತೀ ಮಾತಿಗೆ ಸ್ವಲ್ಪ ಜಾಗ. ಅದು ಏನೋ ವಿಶಿಷ್ಟ ಎಂಬಂತೆ. ಮೊದಲು ಪುಟ್ಟದಾಗಿ ಮಾತು ಶುರುಮಾಡಿದೆ. ಮಾತಿಗೆ ಸಿಕ್ಕ ಪ್ರತಿಕ್ರಿಯೆ ಹಚಾ ಹಚಾ ಎಂಬಂತೆ ಇತ್ತು. ಇರಲಿ ಎಂದುಕೊಂಡು ಕೇಳುವವರ್ಯಾರಾದರೂ ಇರಬೊಹುದೇನೋ ಎಂದು ಕೊಂಡು ಸ್ವಲ್ಪ ಜೋರಾಗಿ ಹೇಳಿದಾಗ ಕೇಳುವವರಿರಲಿಲ್ಲ. ಅದು ನನ್ನದೇ ತಪ್ಪೇನೋ ನನಗೆ ಪ್ರಿಯವಾಗುವಂತೆ ಹೇಳಲು ಆಗಲಿಲ್ಲ. ಆದ್ದರಿಂದ ಮೌನವಾಗಿ ಬರೆದೆ. ಜನ ಹೇಳಿದರು ಅರ್ಥವಾಗುತ್ತಿಲ್ಲ ಅಂತ. ಜನ ಅಲ್ಲ, ನನ್ನ ಸುತ್ತಲಿನವರು ಅಂದರು ನೀನೇ ಅರ್ಥವಾಗುತ್ತಿಲ್ಲ ಅಂತ. ಅರ್ಥಕ್ಕೆ ಅರ್ಥವೇ ಇಲ್ಲದ ಹೊತ್ತಲ್ಲಿ ನಾನಿದ್ದೇನಲ್ಲ ಅಂತ ಬಯವಾಯಿತು. ಕಡೆಗೆ ಜೋರಾಗಿ ಕಿರುಚಿದಾಗ ಎಲ್ಲಿತ್ತು ಎಲ್ಲ ಯಾವುದೇ ಪ್ರತಿದ್ವನಿಯೂ ಇಲ್ಲ. ಈಗ ಕಿರುಚುವುದನ್ನು ಬಿಟ್ಟು ಮೌನವಾಗಿದ್ದೇನೆ.
ನಾ ಹೇಳುತ್ತಿರುವುದಕ್ಕೆ ಚೌಕಟ್ಟು ಇಲ್ಲ. ನಾ ಹೇಳುತ್ತಿರುವುದಾದರೂ ಏನು ಎಂಬುದಕ್ಕೆ ಸಿದ್ದವಾದ ಸಂಕೇತವೂ ಇಲ್ಲ. ಚದುರಿದೆ ಇಲ್ಲಿ, ಎಲ್ಲಾ ಚದುರಿದೆ. ವಿಚಾರಗಳು, ಚಿಂತನೆಗಳು ಎಲ್ಲವೂ ಚದುರಿವೆ. ಆ ಚದುರಿದ್ದನ್ನು ಚದುರಿದಂತೆಯೇ ಮುಂದಿಟ್ಟಿದ್ದೇನೆ.
ನನಗೆ ಮನುಷ್ಯನೇ ಪ್ರೇರಣೆ. ಆದ್ದರಿಂದ ಇಲ್ಲಿಂದಲೆ ಹುಡುಕಾಟ. ಮನುಷ್ಯ ಅಂದರೆ? ಸಮಾಜದ ಒಂದು ಅಂಗ, ಪ್ರಕೃತಿಯ ಸೆಲೆಯಲ್ಲಿನ ಒಂದು ಕೊಂಡಿ, ಜೀವಶಾಸ್ತ್ರದ ಪ್ರಯೋಗಶಾಲೆ, ಸಾದನೆಯ ಇತಿಹಾಸ, ಭಾವನೆಯ ಸಾಹಿತ್ಯ, ರೂಪಕದ ಕಲೆ, ವ್ಯವಹಾರದ ಅರ್ಥಶಾಸ್ತ್ರ,, ಸಾದನೆಯ ಆದ್ಯಾತ್ಮ. ಇಷ್ಟೇನ? ಅಥವ ಇಷ್ಟರಲ್ಲಿ ಅವನನ್ನು ಹಿಡಿಯಬೊಹುದ..? ನನಗಂತೂ ಮನುಷ್ಯ ಅಂದರೆ ಅದ್ಬುತ, ಮನುಷ್ಯ ಅಂದರೆ ಅಚ್ಚರಿ, ಮನುಷ್ಯ ಅಂದರೆ ಶಕ್ತಿ. ಮನುಷ್ಯ ಅಂದರೆ ಬದುಕು ಬದುಕು ಅಂದರೆ ಮನುಷ್ಯ. ಮನುಷ್ಯನನ್ನ ಕಂಡರೆ ಬದುಕನ್ನ ಕಂಡಂತೆ. ಬದುಕನ್ನ ಕಂಡರೆ ಮನುಷ್ಯನನ್ನ ಕಂಡಂತೆ. ಆದ್ದರಿಂದ ನನಗೆ ಮನುಷ್ಯನೇ ಹುಡುಕಾಟದ ಮೂಲ ದ್ರವ್ಯ. ಹೀಗೆ ಮನುಷ್ಯ ಅಂದರೆ ಏನು ಎಂಬ ಪ್ರಶ್ನೆಯನ್ನ ಇಟ್ಟುಕೊಂಡು ಕೂತಿದ್ದೇನೆ. ಒಂದೇಸಾಲಿಗೆ ಉತ್ತರ ಸಿಗುತ್ತದೆಂದು ಅನಿಸುವುದಿಲ್ಲ. ಆದರೆ ಈಗಿನ ತುರ್ತು ಎಂದರೆ ಮನುಷ್ಯ ಅಂದರೆ ಏನು ಅನ್ನೋ ಪ್ರಶ್ನೆ ಯಾಕೆ?
ಕಾಲ ಎಂದಿಗೂ ಸ್ಥಾವರ ಸ್ಥಿತಿಯನ್ನ ತಲುಪುವುದಿಲ್ಲ. ಅದು ನಿತ್ಯ ನಿರಂತರ ಜಂಗಮ. ಕಾಲ ಹರಿವಾಗ ಎಲ್ಲವನ್ನೂ ಪ್ರತೀ ಕ್ಷಣವನ್ನೂ ದಾಖಲಿಸಿ ಹೊರಡುತ್ತೆ. ಹೊರಡುತ್ತಿದೆ. ಮನುಷ್ಯಪ್ರಜ್ಞೆ ಅದನ್ನ ದಾಕಲಿಸಿದೆಯ ಇಲ್ಲವ ಎಂಬೋದು ಅದಕ್ಕೆ ಬೇಕಿಲ್ಲ. ಆದರೆ ಅದು ದಾಕಲಿಸುತ್ತಾ ಸಾಗುತ್ತದೆ. ಆ ದಾಕಲೆಗೆ ಎದುರಾದಾಗ ಮಾತ್ರ ನಾವು ದಾಖಲಿಸಬೇಕೆನಿಸುತ್ತದೆ. ಹೀಗೆ ಮನುಷ್ಯನ ಪ್ರಜ್ಞೆ ಕಾಲದ ಜಂಗಮ ಸ್ಥಿತಿಯೊಂದಿಗೆ ದಾಕಲಿಸುತ್ತಾ ಸಾಗುವಾಗ ಮನುಷ್ಯ ಪ್ರಜ್ಞೆಯೂ ಜಂಗಮಗೊಳ್ಳುತ್ತೆ ಹಾಗು ವಿಶ್ವಾತ್ಮಕಗೊಳ್ಳುತ್ತೆ. ಈ ವಿಶೇಷಕ್ಕೆ ಕಾಲದೊಳಗಿನ ಎಲ್ಲವನ್ನೂ ಒಮ್ಮೆ ಎದುರಿಗಿಟ್ಟುಕೊಂಡು ನೋಡಬೇಕಾಗುತ್ತೆ. ಏನಿದೆ ಇಲ್ಲಿ? ಏನಿಲ್ಲ ಇಲ್ಲಿ..? ಒಂದು ವಿರೋದಾಭಾಸದ ಉತ್ತರವನ್ನಂತೂ ಕಂಡೀತ ನೀಡಬಲ್ಲೆ. ಇಲ್ಲಿ ಎಲ್ಲವೂ ಇದೆ, ಏನೂ ಇಲ್ಲ.
ಒಂದಾನೊಂದು ಕಾಲದಲ್ಲಿ ಒಬ್ಬ ಮನುಷ್ಯನಿದ್ದ. ಆತ ಉಣ್ಣುತ್ತಿದ್ದ, ಮಲಗುತ್ತಿದ್ದ, ಮಕ್ಕಳನ್ನು ಹುಟ್ಟಿಸುತ್ತಿದ್ದ. ಆಗ ಆ ಕಾಲಕ್ಕೆ ತಕ್ಕಂತೆ ಅವನಿಗೆ ಬೇಕಾದಂತಹ ಸೌಕರ್ಯಗಳಿದ್ದವು, ಈಗಲೂ ಮನುಷ್ಯ ಇದ್ದಾನೆ. ಈಗಲೂ ಉಣ್ಣುತ್ತಿದ್ದಾನೆ, ಮಲಗುತ್ತಿದ್ದಾನೆ, ಮಕ್ಕಳನ್ನು ಹುಟ್ಟಿಸುತ್ತಿದಾನೆ. ಹಾಗಾದರೆ ಮುಂದುವರೆದದ್ದು ಎಲ್ಲಿ. ಹಾಗದರೆ ಕಾಲದ ಜೊತೆಯಲ್ಲಿ ನಡೆದದ್ದಾದರೂ ಎಲ್ಲಿಗೆ..? ಏನೂ ಇಲ್ಲವೆ..? ಇದೆ. ಮನುಷ್ಯ ಎಂದರೆ ಶಕ್ತಿ ಆದ್ದರಿಂದ ಇದೆ. ಅದು ಅವನ ಚಿಂತನೆಗಳ ಅರಿವು. ಅಂದು ಜನ ತಿಳಿದಿದ್ದರು ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನೆ ಅಂತ. ಆದರೆ ಈಗ ನಮಗೆ ಗೊತ್ತು ಸೂರ್ಯನೊಳಗೇನಿದೆ ಅಂತಲೂ. ಇಲ್ಲಿ ನಾವು ಬೆಳೆದದ್ದು.
ಮಹಾ ದುರಂತಗಳು ಘಟಿಸಿಯಾಗಿವೆ ಇಲ್ಲಿ. ಒಬ್ಬೊಬ್ಬರನ್ನಲ್ಲ ಸಹಸ್ರಾರು ಮಂದಿಯನ್ನ ಹುಳುಗಳಂತೆ ಕಗ್ಗೊಲೆ ಮಾಡಿದ್ದಾಗಿದೆ. ಮನುಷ್ಯ ಇತಿಹಾಸದ ಪಾತ್ರಗಳಲ್ಲಿ ರಕ್ತವನ್ನ ಬೊಗಸೆಯಲ್ಲಿ ಕುಡಿದು ಕುಡಿದು ತೇಗಿದವರೇ ಹೆಚ್ಚು. ಆದರೂ ಮನುಷ್ಯ ಬದುಕಿದ್ದಾನೆ. ತಿರುಗಿ ಬಿದ್ದಿದಾನೆ. ಹೋರಾಡಿದ್ದಾನೆ. ಆ ಹೋರಾಟದ ನೆಲೆ ಸಿಕ್ಕಿದ್ದಾರು ಎಲ್ಲಿ..? ಪ್ರತೀ ಕಾಲದಲ್ಲೂ ಹೋರಾಟಗಳಾಗಿವೆ. ಈ ಹೋರಾಟಗಳಿಗೆ ಸೆಲೆ ಸಿಕ್ಕಿದ್ದಾದರೂ ಎಲ್ಲಿ, ಹೋರಾಟಗಳ ಪ್ರೇರಣೇಯಾದರೂ ಏನು?. ಮನುಷ್ಯ ಮನುಷ್ಯನ ನಡುವಿನ ಸಂಬಂದವಾದರೂ ಏನು,. ಇತಿಹಾಸದಲ್ಲಿ ಬರೀ ಇಷ್ಟೇ ಇರಲಿಲ್ಲ, ಅಲ್ಲೂ ಮನುಷ್ಯ ಪ್ರೀತಿಯಿದೆ, ನಂಬಿಕೆಯಿದೆ, ಮೌಲ್ಯಗಳಿವೆ.
ಹೀಗೆ ಬರೆಯುತ್ತಾ ಹೋದರೆ ಸಾವಿರ ಕಾರಣಾಗಳನ್ನ ಕೊಡಬಲ್ಲೆ. ಆದರೂ ಕಡೆಯದಾಗಿ ಹೇಳಲೇ ಬೇಕು, ಎಲ್ಲಿಗೆಬಂದು ನಿಂತಿದ್ದೀವಿ ನಾವೀಗ. ನಾನು ಈಗತಾನೆ ವಿದ್ಯಾಬ್ಯಾಸವನ್ನ ಮುಗಿಸಿ ಬಂದಿದ್ದೇನೆ. ಇಷ್ಟುದಿನ ಪುಸ್ತಕಗಳ ಜೊತೆ ಪ್ರಯೋಗಶಾಲೆಯಲ್ಲಿ ಕಳೆದದ್ದಾಯಿತು. ಒಮ್ಮೆ ಮನುಷ್ಯರ ನಡುವೆ ಸಮಾಜಕ್ಕೆ ಬಂದಾಗ ಭಯವಾಗುತ್ತೆ. ಚದುರಿಹೋಗಿವೆ ಎಲ್ಲ ಇಲ್ಲಿ. ನಿದಾನಕ್ಕೆ ಕೊಲ್ಲುತ್ತಿದೆ. ಈಗಲೂ ಸಹಸ್ರಾರು ಮಂದಿ ಸಾಯುತ್ತಿದ್ದಾರೆ ಅವರಿಗೇ ತಿಳಿಯದ ರೀತಿಯಲ್ಲಿ, ಅಥವ ತಿಳಿದೂ ಸಾಯಲು ಸಿದ್ದರಾದ ರೀತಿಯಲ್ಲಿ. ಏನು ಮಾಡಬಲ್ಲೆ? ಏನಾದರು ಮಾಡ್ಬೇಕು, ಮಾಡಲೇಬೇಕು. ಮಾಡುತ್ತೇನೆ.
ಕಡೆಯದಾಗಿ "ಮನುಷ್ಯ ಅಂದರೆ ಏನು?" ಎಂಬೋ ಪ್ರಶ್ನೆ ಏತಕ್ಕೆ ಅಂದರೆ ನಾನೂ ಮನುಷ್ಯ ಆದ್ದರಿಂದ.....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ